ಬೆಂಗಳೂರು: ಚಂದನವನದ ಹಿರಿಯ ನಟಿ ಸುಧಾರಾಣಿ ಅವರು ಕೋವಿಡ್-19 2ನೇ ಅಲೆಯ ವಿರುದ್ಧ ಜಾಗೃತಿ ಮೂಡಿಸಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿನಿತ್ಯ (ಏ.11 ರಂದು 10,250) ಸಾವಿರಗಟ್ಟಲೆ ಸಕ್ರಿಯ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಮಹಾಮಾರಿ ಕೋವಿಡ್ ಎರಡನೇ ಅಲೆಯ ಬೇರುಗಳು ಬಲವಾಗುವ ಸೂಚನೆ ನೀಡುತ್ತಿದೆ. ನಾಗಾಲೋಟದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.
ಕೋವಿಡ್ ಕಟ್ಟಿಹಾಕಲು ಪ್ರಯತ್ನ ನಡೆಸಿರುವ ಸರ್ಕಾರ ರಾಜ್ಯದ ಜನತೆಯಲ್ಲಿ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ. ಕಡ್ಡಾಯ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ. ಇದೀಗ ಸ್ಯಾಂಡಲ್‍ವುಡ್ ನಟಿ ಸುಧಾರಾಣಿಯವರು ಸರ್ಕಾರದ ಜತೆ ಕೈಜೋಡಿಸಿದ್ದು, ಸಾರ್ವಜನಿಕರಲ್ಲಿ ಕೋವಿಡ್ ವಿರುದ್ಧ ಜಾಗೃತಿ ಮೂಡಿಸಿದ್ದಾರೆ.
ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಗುಂಪು ಗುಂಪಾಗಿ ಸೇರುವುದನ್ನು ನಿಲ್ಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೂ ಎಲ್ಲರೂ ತಪ್ಪದೆ ಹ್ಯಾಂಡ್ ಸ್ಯಾನಿಟೈಸ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಇನ್ನು ಸರ್ಕಾರ ಶುರು ಮಾಡಿರುವ ಲಸಿಕಾ ಅಭಿಯಾನದ ಬಗ್ಗೆಯೂ ಹೇಳಿರುವ ಸುಧಾರಾಣಿ, 45 ವರ್ಷ ವಯಸ್ಸು ಮೇಲ್ಪಟ್ಟವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಬಗ್ಗೆ ಕೇಳಿ ಬರುತ್ತಿರುವ ತಪ್ಪು ಮಾಹಿತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.