Advertisement

“ಸಮಯ ಎಲ್ಲದ್ದಕ್ಕೂ ಉತ್ತರ ನೀಡಲಿದೆ”: ಐಟಿ ದಾಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ  

02:38 PM Sep 20, 2021 | Team Udayavani |

ಮುಂಬೈ : ತಮ್ಮ ಮನೆ ಹಾಗೂ ಕಚೇರಿ ಮೇಲೆ ತೆರಿಗೆ ಇಲಾಖೆಯಿಂದ ನಡೆದ ದಾಳಿ ಬಗ್ಗೆ ನಟ ಸೋನು ಸೂದ್ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ಕೇಳಿ ಬಂದಿರುವ ತೆರಿಗೆ ವಂಚನೆಯ ಆರೋಪಕ್ಕೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

Advertisement

ನಾಲ್ಕು ದಿನಗಳ ಕಾಲ ಸೋನು ಅವರಿಗೆ ಸೇರಿದ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು, ಈ ನಟನಿಂದ 20 ಕೋಟಿ ರೂ. ತೆರಿಗೆ ವಂಚನೆಯಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದರು. ಇದಕ್ಕೆ ಇಂದು (ಸೆ.20) ಪ್ರತಿಕ್ರಿಯೆ ನೀಡಿರುವ ಸೋನು, “ನನ್ನ ಚಾರಿಟೆಬಲ್ ಟ್ರಸ್ಟ್ ನಲ್ಲಿರುವ ಪ್ರತಿ ಒಂದು ರೂಪಾಯಿ ಕೂಡ ಕಷ್ಟದಲ್ಲಿರುವವರ ಜೀವ ಉಳಿಸಲು ಕಾಯುತ್ತಿದೆ. ಕಠಿಣವಾದ ದಾರಿಯಲ್ಲಿಯೂ ಕೂಡಾ ಸುಲಭವಾದ ಪ್ರಯಾಣವು ಕಾಣಬಹುದು. ಎಲ್ಲಾ ಹಿಂದೂಸ್ತಾನಿಗಳ ಆಶೀರ್ವಾದ ಪರಿಣಾಮ ಎಂದು ಅನಿಸುತ್ತದೆ. ನಾವು ಎಲ್ಲಾ ಸಂದರ್ಭದಲ್ಲೂ ನಮ್ಮ ದೃಷ್ಟಿಯಿಂದ ನಿಜವಾಗಿ ಏನು ನಡೆದಿದೆ ಎಂಬುವುದನ್ನು ಹೇಳಬೇಕಾಗಿಲ್ಲ. ಸಮಯ ಎಲ್ಲದ್ದಕ್ಕೂ ಉತ್ತರ ನೀಡಲಿದೆ,” ಎಂದು ಕೂಡಾ ಹೇಳಿದ್ದಾರೆ.

“ನನ್ನ ಎಲ್ಲಾ ಶಕ್ತಿ ಹಾಗೂ ಹೃದಯದಿಂದ ನಾನು ಭಾರತದ ಜನರ ಸೇವೆಯನ್ನು ಮಾಡುವ ಪ್ರತಿಜ್ಞೆಯನ್ನು ಮಾಡಿದೆ. ನನ್ನ ಟ್ರಸ್ಟ್‌ನಲ್ಲಿರುವ ಎಲ್ಲಾ ಒಂದು ರೂಪಾಯಿ ಹಣವು ಅತಿ ಮೌಲ್ಯಯುತ ಜೀವವನ್ನು ಉಳಿಸಲು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡಲು ಕಾಯುತ್ತಿದೆ. ನಾನು ಹಲವಾರು ಸಂದರ್ಭದಲ್ಲಿ ಹಲವು ಬ್ರಾಂಡ್‌ಗಳಿಗೆ ನನ್ನ ಸಮಾಜ ಕಲ್ಯಾಣ ಕಾರ್ಯಕ್ಕಾಗಿ ದೇಣಿಗೆ ನೀಡಲು ಕೇಳಿದ್ದೇನೆ, ಅದು ಇನ್ನು ಕೂಡಾ ಮುಂದುವರಿಯಲಿದೆ. ನಾನು ಕಳೆದ ನಾಲ್ಕು ದಿನಗಳಿಂದ ಕೆಲವು ಅತಿಥಿಗಳ ಸತ್ಕಾರ ಮಾಡುತ್ತಿದ್ದೆ, ಆದ್ದರಿಂದ ನನಗೆ ಕಳೆದ ನಾಲ್ಕು ದಿನದಿಂದ ನಿಮ್ಮ ಸೇವೆಯನ್ನು ಮಾಡಲು ಸಾಧ್ಯವಾಗಿಲ್ಲ. ಈಗ ನಾನು ಮತ್ತೆ ಜನರ ಸೇವೆಗಾಗಿ ವಾಪಾಸ್‌ ಬಂದಿದ್ದೇನೆ. ನನ್ನ ಪ್ರಯಾಣ ಮುಂದುವರಿಯುತ್ತದೆ,” ಎಂದು ಟ್ವೀಟರ್‌ನಲ್ಲಿ ಸೋನು ಸೂದ್‌ ತಿಳಿಸಿದ್ದಾರೆ.

ಇನ್ನು ನಟ ಸೋನು ಸೂದ್‌ ಸುಮಾರು 20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ.ಸೋನು ಅವರ ಲಾಭರಹಿತ ಸಂಸ್ಥೆಯು ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ವಿದೇಶಿ ಕೊಡುಗೆದಾರರಿಂದ 2.1 ಕೋಟಿ ಹಣವನ್ನು ಸಂಗ್ರಹಿಸಿದೆ. ಇದು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆಗಿದೆ. ಸೋನು ಅವರ ಟ್ರಸ್ಟ್ ಗೆ ಕಳೆದ ಜುಲೈನಿಂದ ಈ ವರ್ಷದ ಏಪ್ರಿಲ್ ವರೆಗೆ 18 ಕೋಟಿ ರೂ. ಹರಿದು ಬಂದಿದೆ. ಇದರಲ್ಲಿ 1.9 ಕೋಟಿ ಹಣ ಮಾತ್ರ ಸಾಮಾಜಿಕ ಕಾರ್ಯಕ್ಕೆ ಬಳಕೆಯಾಗಿದೆ. ಉಳಿದ 17 ಕೋಟಿ ರೂ. ಬಳಕೆಯಾಗದೆ ಹಾಗೆ ಉಳಿದುಕೊಂಡಿದೆ ಎಂದು ಶನಿವಾರ ಆದಾಯ ತೆರಿಗೆ ಇಲಾಖೆ ಹೇಳಿತ್ತು.

Advertisement

ನಟ ಸೋನು ಸೂದ್‌ ಪರವಾಗಿ ದೆಹಲಿ ಮುಖ್ಯಮಂತ್ರಿ, ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. “ಸೋನು ಜೀ ಗೆ ಅಧಿಕ ಬಲವಿದೆ. ಲಕ್ಷಾಂತರ ಭಾರತೀಯರ ಹೀರೋ ನೀವು,” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next