ಹೈದರಾಬಾದ್: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಕೊಟ್ಟಿರುವ ಹೇಳಿಕೆ ದೇಶದಲ್ಲಿ ರಾಜಕೀಯವಾಗಿ ಕಿಚ್ಚು ಹಚ್ಚಿದೆ.
ಡಿಎಂಕೆ ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ “ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಸನಾತನವನ್ನು ವಿರೋಧಿಸುವುದಕ್ಕಿಂತ, ಅದನ್ನು ನಾವು ನಿರ್ಮೂಲನೆ ಮಾಡಬೇಕು ಎಂದು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಹೇಳಿದ್ದರು.
ಸ್ಟಾಲಿನ್ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿ, “ಸನಾತನವನ್ನು ಹಿಂಬಾಲಿಸುವ 80% ಜನ ಸಂಖ್ಯೆಯ ನರಮೇಧಕ್ಕೆ ಕರೆ ನೀಡುತ್ತಿದ್ದಾರೆ” ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಹೇಳಿಕೆ ಖಂಡಿಸಿದ್ದು”ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮʼತೊಲಗಬೇಕು ಎಂದು ಹೇಳುತ್ತಾರೆ, ಅವರು ಡೆಂಗ್ಯೂ ಮತ್ತು ಮಲೇರಿಯಾದಂತೆ ‘ಸನಾತನ ಧರ್ಮ’ವನ್ನು ತೊಡೆದುಹಾಕಬೇಕು ಎಂದಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಈ ಹೇಳಿಕೆ ಇಂಡಿಯಾ ಮೈತ್ರಿಕೂಟದ ರಾಜಕೀಯ ತಂತ್ರದ ಭಾಗವೇ? ಮುಂಬರುವ ಚುನಾವಣೆಯಲ್ಲಿ ಈ ಹಿಂದೂ ವಿರೋಧಿ ತಂತ್ರವನ್ನು ಬಳಸುತ್ತೀರಾ? ನಮಗೆ ಸಂಬಂಧಿಸಿದ ಎಲ್ಲವನ್ನೂ ನೀವು ದ್ವೇಷಿಸುತ್ತೀರಿ ಎಂದು ಬಹು ಬಾರಿ ಸಾಬೀತುಪಡಿಸಿದ್ದೀರಿ. ದೇಶ ಮತ್ತು ನಿಮ್ಮ ‘ಮೊಹಬ್ಬತ್ ಕಿ ದುಕಾನ್’ ದ್ವೇಷವನ್ನು ಹರಡುತ್ತಿದೆ”ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಉದಯನಿಧಿ ಸ್ಟಾಲಿನ್ ವಿರುದ್ಧ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಅವರ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ.
ಈ ನಡುವೆ ನಟ ರಾಮ್ ಚರಣ್ ಅವರು ಸನಾತನ ಧರ್ಮದ ಕುರಿತು ಮಾಡಿದ್ದ ಟ್ವೀಟ್ ವೊಂದು ವೈರಲ್ ಆಗುತ್ತಿದೆ. ಸೆ.20 ರ 2020 ರಂದು ರಾಮ್ ಚರಣ್ ತನ್ನ ತಾಯಿ ಮನೆಯ ತುಳಸಿ ಕಟ್ಟೆ ಎದುರು ನಿಂತುಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಫೋಟೋ ಜೊತೆ “ಸನಾತನ ಧರ್ಮವನ್ನು ರಕ್ಷಿಸುವುದು ನಮ್ಮೆಲ್ಲರ ಜವಬ್ದಾರಿ” ಎಂದು ಬರೆದುಕೊಂಡಿದ್ದರು.
ಮೂರು ವರ್ಷದ ಬಳಿಕ ಈ ಟ್ವೀಟ್ ನ್ನು ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಹೋಲಿಕೆ ಮಾಡಲಾಗುತ್ತಿದೆ. ಹಳೆಯ ಟ್ವೀಟ್ ಈಗ ಮತ್ತೆ ವೈರಲ್ ಆಗುತ್ತಿದೆ.