ಉಡುಪಿ : ‘ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮುಸ್ಲಿಂ ರಾಜ ಜಾಗ ಕೊಟ್ಟಿದ್ದು’ ಎಂಬ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಅವರ ಹೇಳಿಕೆಗೆ ಪರೋಕ್ಷವಾಗಿ ಟ್ವೀಟ್ ಮೂಲಕ ನಟ ರಕ್ಷಿತ್ ಶೆಟ್ಟಿ ಅವರು ತಿರುಗೇಟು ನೀಡಿದ್ದಾರೆ.
”ದೇವಾಲಯದ ಪಟ್ಟಣವಾದ ಉಡುಪಿ ಸಾವಿರ ವರ್ಷಗಳ ಇತಿಹಾಸವನ್ನು ಬರೆದಿದೆ… ನಿಮಗೆ ತಿಳಿದಿಲ್ಲದಿರುವಾಗ ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧವಾಗಿ ಮಾತನಾಡುವುದೇಕೆ ???” ಎಂದು ಯಾವುದೇ ಹೆಸರು ಉಲ್ಲೇಖಿಸದೆ ಉಡುಪಿಯ ನಟ ರಕ್ಷಿತ್ ಟ್ವೀಟ್ ಮಾಡಿದ್ದಾರೆ.
ಪ್ರದೀಪ್ ಶೆಟ್ಟಿ ಎನ್ನುವವರು ”ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟು ಸಾಕು” ಎಂದು ಮರು ಟ್ವೀಟ್ ಮಾಡಿ ಕೆಣಕಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ರಕ್ಷಿತ್ ” 1. ಉಡುಪಿ ನನ್ನ ಜನ್ಮಸ್ಥಳ… ಬಕೆಟ್ ಅಲ್ಲಾ, ಟ್ಯಾಂಕರ್ ಹಿಡಿತೀನಿ… 2. ಎಲ್ಲ ಗೌರವಗಳೊಂದಿಗೆ, ಅವರು ಯಾವ ಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆಂದು ಖಚಿತವಾಗಿಲ್ಲ, ಆದರೆ ಕಾರ್ ಸ್ಟ್ರೀಟ್‌ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲ… 3. ಅನಂತೇಶ್ವರ ದೇವಸ್ಥಾನವು ಕೃಷ್ಣಮಠಕ್ಕಿಂತಲೂ ಹಳೆಯದು ಮತ್ತು ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದು…”ಎಂದು ಮರು ಟ್ವೀಟ್ ಮಾಡಿದ್ದಾರೆ.
ನೂರಾರು ಮಂದಿ ರಕ್ಷಿತ್ ಶೆಟ್ಟಿ ಅವರ ಟ್ವೀಟ್ ಗಳಿಗೆ ಪ್ರತಿಕ್ರಿಯೆ ನೀಡಿದ್ದು ಚುನಾವಣೆ ವೇಳೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಹೇಳಿಕೆ ವಿವಾದ ಸ್ವರೂಪಕ್ಕೆ ತಿರುಗಿದ ಕೂಡಲೇ ಮಿಥುನ್ ರಾಯ್ ಸ್ಪಷ್ಟನೆ ನೀಡಿ ”ನಾನು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ನೀಡಿದ ಹೇಳಿಕೆಯ ಪತ್ರಿಕಾ ವರದಿ ಆಧರಿಸಿ ಸೌಹಾರ್ದಕ್ಕಾಗಿ ಹೇಳಿಕೆ ನೀಡಿದ್ದೇನೆ” ಎಂದಿದ್ದರು.