ಬೆಂಗಳೂರು : ಚಂದನವನದ ನಟ ಪುನೀತ್ ರಾಜಕುಮಾರ್ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಅಪ್ಪು ಇಂದು (ಏ.7) ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದಿದ್ದಾರೆ.
ಕೋವಿಡ್ ಲಸಿಕೆ ಪಡೆದಿರುವ ಕುರಿತು ಟ್ವಿಟರ್ ನಲ್ಲಿ ಹೇಳಿಕೊಂಡಿರುವ ರಾಜಕುಮಾರ್, 45 ವರ್ಷ ವಯಸ್ಸಿನವರು ಹಾಗೂ ಅದಕ್ಕೂ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಏಪ್ರಿಲ್ 1 ರಂದು ಪುನೀತ್ ರಾಜಕುಮಾರ್ ಅಭಿನಯಿಸಿರುವ ಯುವರತ್ನ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ಈ ಚಿತ್ರದ ಕುರಿತು ಫೇಸ್‍ಬುಕ್‍ನಲ್ಲಿ ಮಾತನಾಡುತ್ತಿದ್ದ ವೇಳೆ ಕೋವಿಡ್ ಜಾಗೃತಿ ಬಗ್ಗೆ ಪುನೀತ್ ಹೇಳಿದ್ದರು. ಎಲ್ಲರೂ ಫೇಸ್‍ಮಾಸ್ಕ್ ಧರಿಸುವಂತೆ ವಿನಂತಿಸಿಕೊಂಡಿದ್ದರು. ತಾನೂ ಕೂಡ ಕೋವಿಡ್ ಲಸಿಕೆ ಪಡೆಯುವುದಾಗಿ ಹೇಳಿಕೊಂಡಿದ್ದರು. ಅದರಂತೆ ಇಂದು ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಇನ್ನು ಮಂಗಳವಾರವಷ್ಟೆ ( ಏ.6) ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಜಗ್ಗೇಶ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಕೋವಿಡ್ ವಿಶ್ವಕ್ಕೆ ಬಂದಾಗ ಲಸಿಕೆ ಬೇಗ ಬರಲಿ ಎಂದು ಮನುಕುಲ ಪ್ರಾರ್ಥಿಸಿದೆವು. ಈಗ ವ್ಯಾಕ್ಸಿನ್ ಬಂದಿದೆ, ತೆಗೆದುಕೊಳ್ಳಲು ಅನಾವಶ್ಯಕ ಭಯವೇಕೆ ? ಭಯ ಬಿಡಿ ಲಸಿಕೆ ಪಡೆದು ನಿರ್ಭಯವಾಗಿ ಬಾಳಿ ಎಂದು ಎಲ್ಲರಿಗೂ ಹೇಳಿದ್ದಾರೆ.