ಕಳೆದ ವರ್ಷ ತೆರೆಕಂಡ “ಪದವಿ ಪೂರ್ವ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯವಾದ ಪ್ರತಿಭೆ ಪೃಥ್ವಿ ಶಾಮನೂರ್.ಮೊದಲ ಸಿನಿಮಾದಲ್ಲೇ ಸಿನಿಪ್ರಿಯರು ಮತ್ತು ಸಿನಿಮಾ ಮಂದಿಯ ಗಮನ ಸೆಳೆದ ದಾವಣಗೆರೆ ಮೂಲದ ಪೃಥ್ವಿ, ಇತ್ತೀಚೆಗೆ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ, ಬಿ. ಸಿ. ಪಾಟೀಲ್ ನಿರ್ಮಾಣದ “ಗರಡಿ’ ಸಿನಿಮಾದಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಾಲ್ಯದ ಪಾತ್ರದಲ್ಲೂ ಮಿಂಚಿದ್ದರು.
ತಮ್ಮ ಚೊಚ್ಚಲ ಸಿನಿಮಾದ ಅಭಿನಯಕ್ಕಾಗಿ “ಸೈಮಾ’ ಅತ್ಯುತ್ತಮ ಚೊಚ್ಚಲ ನಟ, “ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಪೃಥ್ವಿ, ಸದ್ಯ ಉತ್ತರ ಕರ್ನಾಟಕದ ಕಥಾಹಂದರ ಹೊಂದಿರುವ ಸದ್ಯ ಮತ್ತೂಂದು ಔಟ್ ಆ್ಯಂಡ್ ಔಟ್ ಮಾಸ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾಕ್ಕೆ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
“ದಾವಣಗೆರೆಯ ಸಣ್ಣ ಹಳ್ಳಿಯಲ್ಲಿದ್ದ ನಾನು ಮಾಡೆಲಿಂಗ್ ಲೋಕಕ್ಕೆ ಬಂದು, ಅಲ್ಲಿಂದ ಸಿನಿಮಾಕ್ಕೆ ಬಂದು ಇಂದು ಒಬ್ಬ ಕಲಾವಿದನಾಗಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮೊದಲ ಸಿನಿಮಾ “ಪದವಿ ಪೂರ್ವ’ ನನಗೆ ಸಾಕಷ್ಟು ವಿಷಯಗಳನ್ನು ಕಲಿಸಿತು. ಎರಡು-ಮೂರು ಸಿನಿಮಾದಲ್ಲಿ ಕಲಿಯಬೇಕಾಗಿರುವುದನ್ನು ಒಂದೇ ಸಿನಿಮಾದಲ್ಲಿ ಕಲಿಯುವ ಅವಕಾಶ ಸಿಕ್ಕಿತು. ಯೋಗರಾಜ್ ಭಟ್, ಹರಿಪ್ರಸಾದ್ ಅವರಂಥ ನಿರ್ದೇಶಕರು ನನ್ನನ್ನು ಒಬ್ಬ ನಟನಾಗುವಂತೆ ಮಾಡಿದರು’ ಎನ್ನುತ್ತಾರೆ ಪೃಥ್ವಿ.
“ಪದವಿ ಪೂರ್ವ’ ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿತು. ಸಿನಿಮಾವನ್ನು ಥಿಯೇಟರ್, ಓಟಿಟಿ ಮತ್ತು ಟಿ.ವಿಯಲ್ಲಿ ನೋಡಿದ ಪ್ರೇಕ್ಷಕರು ಕೂಡ ನಮ್ಮ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು. “ಪದವಿ ಪೂರ್ವ’ ಸಿನಿಮಾ ನಡೆಯುತ್ತಿರುವಾಗಲೇ “ಗರಡಿ’ ಸಿನಿಮಾದ ಆಫರ್ ಸಿಕ್ಕಿತು. ಅಲ್ಲೂ ನನಗೊಂದು ಪ್ರಮುಖ ಪಾತ್ರ ಸಿಕ್ಕಿತು. ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಬಿ. ಸಿ. ಪಾಟೀಲ್ ನನ್ನನ್ನು ನಂಬಿ ಒಳ್ಳೆಯ ಪಾತ್ರ ಕೊಟ್ಟರು. ಸುಮಾರು ಮೂರು ತಿಂಗಳು “ಗರಡಿ’ ಸಿನಿಮಾಕ್ಕೆ ಕುಸ್ತಿ ತರಬೇತಿ ಪಡೆದುಕೊಂಡೆ. ಕುಸ್ತಿ ಪಟ್ಟುಗಳನ್ನು ಕಲಿತು ಸಿನಿಮಾದಲ್ಲಿ ಅಭಿನಯಿಸಿದೆ. ಇತ್ತೀಚೆಗೆ “ಗರಡಿ’ ರಿಲೀಸ್ ಆಗಿದ್ದು, ಆ ಪಾತ್ರಕ್ಕೆ ಏನೂ ಎಫರ್ಟ್ ಹಾಕಿದ್ದೆವೋ, ಅದಕ್ಕೆ ತಕ್ಕಂಥ ರೆಸ್ಪಾನ್ಸ್ ಸಿಕ್ಕಿತು. ಅನೇಕ ಹಿರಿಯ ಕಲಾವಿದರು ನನ್ನ ಪಾತ್ರವನ್ನು ಮೆಚ್ಚಿ ಮಾತನಾಡಿದರು. ಅದು ನನಗೆ ಹೊಸ ಜೋಶ್ ಕೊಟ್ಟಿತು’ ಎನ್ನುತ್ತಾರೆ ಪೃಥ್ವಿ.
ಸದ್ಯ ತಮ್ಮ ಹೋಂ ಬ್ಯಾನರ್‌ನಲ್ಲಿ ಅಮೂಲ್ ಪಾಟೇಲ್ ನಿರ್ದೇಶನದಲ್ಲಿ ಹೊಸ ಸಿನಿಮಾಕ್ಕೆ ಪೃಥ್ವಿ ಸದ್ದಿಲ್ಲದೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇಡೀ ಸಿನಿಮಾದ ಕಥೆ ಬಿಜಾಪುರದಲ್ಲಿ ನಡೆಯಲಿದ್ದು, ಅದಕ್ಕಾಗಿ ಬಿಜಾಪುರ ಭಾಷೆಯನ್ನೂ ಕಲಿಯುತ್ತಿದ್ದಾರೆ. “ಸಿನಿಮಾಕ್ಕೆ ಬಂದು ಸುಮಾರು ಮೂರು ವರ್ಷವಾಯ್ತು. ಫ್ಯಾಮಿಲಿ-ಫ್ರೆಂಡ್ಸ್ ಹೀಗೆ ಎಲ್ಲರ ಸಹಕಾರದಿಂದ ಸಿನಿಮಾ ಯಾನ ಸಲೀಸಾಗಿ ನಡೆಯುತ್ತಿದೆ. ಒಮ್ಮೆ ಹಿಂತಿರುಗಿ ನೋಡಿದ್ರೆ, ಈ ಜರ್ನಿ ಸಾಕಷ್ಟು ಕಲಿಸಿದೆ ಎಂದು ಖುಷಿಯಾಗುತ್ತದೆ’ ಎನ್ನುತ್ತಾರೆ ಪೃಥ್ವಿ.