ಕೋಲ್ಕತಾ: ಬಂಗಾಲಿ ಹಿರಿಯ ನಟ, ತೃಣಮೂಲ ಕಾಂಗ್ರೆಸ್ ನ ಮಾಜಿ ಸಂಸದ ತಪಸ್ ಪಾಲ್ (61ವರ್ಷ) ಹೃದಯ ಸ್ತಂಭನದಿಂದ ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮುಂಬೈನಲ್ಲಿರುವ ಮಗಳನ್ನು ಭೇಟಿಯಾಗಲು ತಪಸ್ ಪಾಲ್ ತೆರಳಿದ್ದರು. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಹೃದಯ ಬೇನೆ ಬಂದಿರುವುದಾಗಿ ತಿಳಿಸಿದ್ದು, ಕೂಡಲೇ ಕೋಲ್ಕತಾಗೆ ಮರಳಿದ್ದರು. ಇಲ್ಲಿನ ಜುಹು ಆಸ್ಪತ್ರೆಗೆ ದಾಖಲಿಸಿದ್ದು, ಮುಂಜಾನೆ 4ಗಂಟೆಗೆ ನಿಧನರಾಗಿರುವುದಾಗಿ ಮೂಲಗಳು ಪಿಟಿಐಗೆ ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ ತಪಸ್ ಪಾಲ್ ಅವರು ಹಲವಾರು ಬಾರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರು. ಪಾಲ್ ಅವರು ಕೃಷ್ಣಾನಗರ್ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅಲಿಪೋರ್ ಕ್ಷೇತ್ರದಲ್ಲಿ ಶಾಸಕರಾಗಿಯೂ ಆಯ್ಕೆಯಾಗಿದ್ದರು.
ತಪಸ್ ಪಾಲ್ ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ತಪಸ್ ನಟನಾ ವೃತ್ತಿಯನ್ನು ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದಲ್ಲಿ ಸಿಬಿಐ ತಪಸ್ ಪಾಲ್ ಅವರನ್ನು 2016ರಲ್ಲಿ ಬಂಧಿಸಿತ್ತು. ನಂತರ ಸುಪ್ರೀಂಕೋರ್ಟ್ 13ತಿಂಗಳ ಬಳಿಕ ಜಾಮೀನು ನೀಡಿತ್ತು.
ತಪಸ್ ಪಾಲ್ ನಿಧನಕ್ಕೆ ಪಶ್ಚಿಮಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.