ನವದೆಹಲಿ: ಇಸ್ರೇಲ್ – ಪ್ಯಾಲೆಸ್ತೇನ್ ಅಕ್ಷರಶಃ ಯುದ್ಧ ಭೂಮಿಯಾಗಿದೆ. ಪರಸ್ಪರ ದಾಳಿಯಲ್ಲಿ ಅಪಾರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ – ಪ್ಯಾಲೆಸ್ತೇನ್ ನಲ್ಲಿ ನಾನಾ ದೇಶದ ನಾಗರಿಕರು ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗೆ ಆಯಾ ದೇಶಗಳು ಯತ್ನಿಸುತ್ತಿವೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ಉಗ್ರ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಕಾಳಗದ ನಡುವೆ ಬಾಲಿವುಡ್ ನಟಿಯೊಬ್ಬರು ಸಿಲುಕಿಕೊಂಡಿದ್ದಾರೆ. ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ತಂಡದ ಸದಸ್ಯರೊಬ್ಬರು ಶನಿವಾರ(ಅ.7 ರಂದು) ತಿಳಿಸಿದ್ದಾರೆ.
ನಟಿ ನುಶ್ರತ್ ಹೈಫಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್ ತೆರಳಿದ್ದರು. ದುರದೃಷ್ಟವಶಾತ್ ಇಸ್ರೇಲ್‌ನಲ್ಲಿ ನುಶ್ರತ್ ಸಿಲುಕಿಕೊಂಡಿದ್ದಾರೆ. ಇವತ್ತು ಮಧ್ಯಾಹ್ನ( ಶನಿವಾರ, ಅ.7 ರಂದು) 12:30ರ ವೇಳೆಗೆ ಅವಳ ಬಳಿ ಕೊನೆಯ ಬಾರಿ ಮಾತನಾಡಿದ್ದೆ. ಆ ಬಳಿಕ ಅವರ ಸಂಪರ್ಕ ಸಾಧ್ಯವಾಗಿಲ್ಲ. ನಾನು ಕರೆ ಮಾಡಿದ್ದ ವೇಳೆ ಅವರು ಸುರಕ್ಷಿತ ಸ್ಥಳದಲ್ಲಿದ್ದರು. ಆ ಬಳಿಕ ಸಂಪರ್ಕ ಸಾಧ್ಯವಾಗಿಲ್ಲ. ನಾವು ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಯಾವುದೇ ಅಪಾಯಕ್ಕೆ ಸಿಲುಕದೆ ಅವರು ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ” ಎಂದು ನಟಿಯ ತಂಡದ ಸದಸ್ಯ ಹೇಳಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಹಮಾಸ್ ಬಂಡುಕೋರರು 5,000ಕ್ಕೂ ಅಧಿಕ ರಾಕೆಟ್ ದಾಳಿಯನ್ನು ಇಸ್ರೇಲ್ ಮೇಲೆ ನಡೆಸಿದ ಪರಿಣಾಮ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ದಾಳಿ ನಡೆಸಿದೆ.