ಮೈಸೂರು: ನಟ ದಿ.ಲೋಕೇಶ್ ಅವರ ಜನ್ಮದಿನವನ್ನು ಲೋಕೇಶ್ ನೆನಪು ಹೆಸರಿನಲ್ಲಿ ಕಲಾರಂಗಕ್ಕೆ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಮೂಲಕ ಆಚರಿಸಲಾಗುತ್ತಿದೆ ಎಂದು ನಟಿ ಗಿರಿಜಾ ಲೋಕೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 19 ಲೋಕೇಶ್ ಅವರ 73ನೇ ಜನ್ಮದಿನ. ಈ ಬಾರಿ ಲೋಕೇಶ್ ನೆನಪು ಕಾರ್ಯಕ್ರಮವನ್ನು ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡದ ಮೊದಲ ವಾಕಿcತ್ರದ ನಾಯಕನಟ, ಕನ್ನಡ ರಂಗಭೂಮಿಯ ಅಧ್ವರ್ಯುಗಳಲ್ಲಿ ಒಬ್ಬರಾದ ಸುಬ್ಬಯ್ಯನಾಯ್ಡು ಅವರ ನಾಟಕ ಸಂಸ್ಥೆ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ. ತಂದೆಯಂತೆಯೇ ಅವರ ಮಗ ಲೋಕೇಶ್ ಕೂಡ ರಂಗಭೂಮಿ ಮತ್ತು ಚಲನಚಿತ್ರ ರಂಗಗಳಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಸುಬ್ಬಯ್ಯನಾಯ್ಡು ಅವರ ಇಡೀ ಕುಟುಂಬ ಕಲಾರಂಗದಲ್ಲಿ ಸೇವೆ ಸಲ್ಲಿಸುತ್ತಿದೆ. 2004ರಲ್ಲಿ ಲೋಕೇಶ್ ನಿಧನರಾದ ನಂತರ ಪ್ರತಿ ವರ್ಷ ಬೇರೆ ಬೇರೆ ನಗರಗಳಲ್ಲಿ ಲೋಕೇಶ್ ನೆನಪು ಕಾರ್ಯಕ್ರಮ ಹಮ್ಮಿಕೊಂಡು ವೃತ್ತಿರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸುಬ್ಬಯ್ಯನಾಯ್ಡು ಹೆಸರಲ್ಲಿ, ಅವರ ತಾರಾಪತ್ನಿ ಲಕ್ಷ್ಮೀಬಾಯಿ ಸೇರಿನಲ್ಲಿ ಹಿರಿಯ ಕಲಾವಿದರೊಬ್ಬರಿಗೆ ಹಾಗೂ ಲೋಕೇಶ್ ಹೆಸರಲ್ಲಿ ರಂಗಭೂಮಿ ಮತ್ತು ಚಲನಚಿತ್ರ ರಂಗದ ಸಾಧಕರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬರಲಾಗುತ್ತಿದೆ.
ಹಿರಿಯ ರಂಗತಜ್ಞ, ವೃತ್ತಿ ರಂಗಭೂಮಿಯ ಚಿಂದೋಡಿ ಬಂಗಾರೇಶ್ ಅವರಿಗೆ ಸುಬ್ಬಯ್ಯನಾಯ್ಡು ಪ್ರಶಸ್ತಿ, ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಶೈಲಶ್ರೀ ಅವರಿಗೆ ಲಕ್ಷ್ಮೀಬಾಯಿ ಪ್ರಶಸ್ತಿ ಹಾಗೂ ರಂಗಕರ್ಮಿ, ಚಿತ್ರನಟ ರಮೇಶ್ ಭಟ್ ಅವರಿಗೆ ಲೋಕೇಶ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಈ ಬಾರಿ 16ನೇ ವರ್ಷದ ಲೋಕೇಶ್ ನೆನಪು ಕಾರ್ಯಕ್ರಮ ಮೈಸೂರಿನ ನಟನ ರಂಗಶಾಲೆಯಲ್ಲಿ ಮೇ 19ರಂದು ಸಂಜೆ 5ಗಂಟೆಗೆ ನಡೆಯಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ.ಕಪ್ಪಣ್ಣ ಸಮಾರಂಭದ ಅಧ್ಯಕ್ಷತೆವಹಿಸಲಿದ್ದು, ಮೈಸೂರಿನ ಸುರುಚಿ ರಂಗಮನೆಯ ವಿಜಯ ಸಿಂಧುವಳ್ಳಿ ಮತ್ತು ನಟನ ರಂಗಶಾಲೆಯ ಮಂಡ್ಯ ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮೈಸೂರಿನ ಕಲಾವಿದರಾದ ರಾಜಶೇಖರ ಕದಂಬ ಮತ್ತು ಶಂಕರ್ ಅಶ್ವಥ್ ಅವರನ್ನು ಇದೇ ಸಮಾರಂಭದಲ್ಲಿ ಗೌರವಿಸಲಾಗುವುದು. ಕಾರ್ಯಕ್ರಮದ ನಂತರ ಸಂಜೆ 7 ಗಂಟೆಗೆ ಮಂಡ್ಯ ರಮೇಶ್ ನಿರ್ದೇಶನದ ನಟನ ರಂಗಶಾಲೆ ತಂಡ ಅಭಿನಯಿಸುವ ಶೂದ್ರಕನ ಮೃತ್ಛಕಟಿಕ ನಾಟಕ ಪ್ರದರ್ಶನವಿದೆ ಎಂದು ತಿಳಿಸಿದರು.
ಕಲಾವಿದರಾದ ಶಂಕರ್ ಅಶ್ವಥ್, ರಾಜಶೇಖರ ಕದಂಬ, ನಟನ ರಂಗಸಂಸ್ಥೆಯ ಪ್ರಭಾಕರ್ ಸುದ್ದಿಗೋಷ್ಠಿಯಲ್ಲಿದ್ದರು.