Advertisement

ಕ್ಷುಲ್ಲಕ ಕಾರಣಕ್ಕೆ ನಟ ಕೋಮಲ್‌ ಹೊಡೆದಾಟ

01:06 AM Aug 14, 2019 | Lakshmi GovindaRaj |

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ನಟ ಕೋಮಲ್‌ ಮತ್ತು ದ್ವಿಚಕ್ರ ವಾಹನ ಸವಾರ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಂಗಳವಾರ ಸಂಜೆ ಸಂಪಿಗೆ ಟಾಕೀಸ್‌ ಪಕ್ಕದ ಶ್ರೀರಾಮಪುರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ನಟ ಕೋಮಲ್‌ ಅವರ ಬಾಯಿ, ಹಣೆ ಮತ್ತು ಮುಖದ ಕೆಲವೆಡೆ ಗಾಯವಾಗಿದೆ. ಈ ಸಂಬಂಧ ಮಲ್ಲೇಶ್ವರ ಪೊಲೀಸರು ಜಕ್ಕರಾಯನಕೆರೆ ನಿವಾಸಿ ವಿಜಯ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ವಿಷಯ ತಿಳಿದು ಮಲ್ಲೇಶ್ವರ ಠಾಣೆಗೆ ಆಗಮಿಸಿದ ನಟ ಜಗ್ಗೇಶ್‌, ಘಟನೆ ಖಂಡಿಸಿದ್ದು, ಸಹೋದರ ಕೋಮಲ್‌ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಶ್ರೀರಾಮಪುರದ ಚೌಡೇಶ್ವರಿ ದೇವಾಲಯ ಸಮೀಪ ವಾಸವಾಗಿರುವ ನಟ ಕೋಮಲ್‌ ಸಂಜೆ 5.30ರ ಸುಮಾರಿಗೆ ಪುತ್ರಿಯನ್ನು ಟ್ಯೂಷನ್‌ಗೆ ಬಿಟ್ಟು ಸಂಪಿಗೆ ಟಾಕೀಸ್‌ ಪಕ್ಕದ ಶ್ರೀರಾಮಪುರ ರಸ್ತೆಯಲ್ಲಿ ಹೋಗುತ್ತಿದ್ದರು.

ಆಗ ಹಿಂದಿನಿಂದ ಬಂದ ಬೈಕ್‌ ಸವಾರ ವಿಜಯ್‌, ಕೋಮಲ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅದಕ್ಕೆ ಪ್ರತಿಯಾಗಿ ಕೋಮಲ್‌ ಸಹ ಬೈಯ್ದಿದ್ದಾರೆ ಎನ್ನಲಾಗಿದೆ. ಬಳಿಕ ಕಾರನ್ನು ನಿಲ್ಲಿಸಿದ ಕೋಮಲ್‌ ವಿಜಯ್‌ ಜತೆ ವಾಗ್ವಾದ ನಡೆಸಿದ್ದಾರೆ. ಅದನ್ನು ಕಂಡ ಸ್ಥಳೀಯರು ಕೂಡಲೇ ಕೋಮಲ್‌ ನೆರವಿಗೆ ಧಾವಿಸಿದ್ದಾರೆ. ಇನ್ನು ಅಲ್ಲೇ ಇದ್ದ ಸಂಚಾರ ಪೊಲೀಸ್‌ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದು ಇಬ್ಬರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ ಎಂದು ಮಲ್ಲೇಶ್ವರ ಪೊಲೀಸರು ಹೇಳಿದರು.

ಠಾಣಾಧಿಕಾರಿಗಳ ಜತೆ ಜಗ್ಗೇಶ್‌ ಚರ್ಚೆ: ವಿಷಯ ತಿಳಿದು ಮಲ್ಲೇಶ್ವರ ಪೊಲೀಸ್‌ ಠಾಣೆಗೆ ಆಗಮಿಸಿದ ನಟ ಜಗ್ಗೇಶ್‌ ಕೆಲ ಹೊತ್ತು ಠಾಣಾಧಿಕಾರಿಗಳ ಜತೆ ಚರ್ಚಿಸಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ನನಗೆ ಘಟನೆ ಬಗ್ಗೆ ಬೇರೆ ರೀತಿಯ ಅನುಮಾನಗಳು ಬರುತ್ತಿವೆ. ಕುಡಿದು, ಹುಡುಗಿಯರ ಜತೆ ಓಡಾಡುವ, ಸಾರ್ವಜನಿಕರಿಗೆ ತೊಂದರೆ ಕೊಡುವ ತಂಡವೊಂದು ಇದೆ. ಈ ತಂಡದ ಸದಸ್ಯ ಆತ. ಕೋಮಲ್‌ ತನ್ನ ಪುತ್ರಿಯನ್ನು ಟ್ಯೂಷನ್‌ಗೆ ಬಿಟ್ಟು ಬರುವಾಗ ಘಟನೆ ನಡೆದಿದೆ.

ನಾಲ್ವರು ಕೋಮಲ್‌ನನ್ನು ಹಿಡಿದುಕೊಂಡಿದ್ದು, ಮತ್ತೂಬ್ಬ ಹಲ್ಲೆ ನಡೆಸಿದ್ದಾನೆ. ಅಮಾಯಕ ವ್ಯಕ್ತಿಗಳ ಮೇಲೆ ದಾದಾಗಿರಿ ನಡೆಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಈ ಸಂಬಂಧ ನಗರ ಪೊಲೀಸ್‌ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದರು. ಕೆಲ ತಿಂಗಳ ಹಿಂದೆ ಜಗ್ಗೇಶ್‌ ಅವರ ಮೊದಲ ಪುತ್ರ ಗುರುರಾಜ್‌ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದ.ಈ ಸಂಬಂದ ಆರ್‌.ಟಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಸ್ಪಷ್ಟನೆ ಇಲ್ಲ: ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದ ಎಂದು ಕೋಮಲ್‌ ಹೇಳಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಬೈಕ್‌ಗೆ ದಾರಿ ಬಿಡದ ವಿಚಾರಕ್ಕೆ ಎಂದು ಹೇಳಲಾಗಿದೆ. ವಿಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಆತನ ಹಿನ್ನೆಲೆ ಪರಿಶೀಲಿಸಿದಾಗ ಘಟನೆ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಮಲ್ಲೇಶ್ವರ ಪೊಲೀಸರು ಹೇಳಿದರು.

ಸಿನಿಮಾ ಮಾಡುವುದೇ ತಪ್ಪಾ?: ಮಗಳನ್ನು ಟ್ಯೂಷನ್‌ಗೆ ಬಿಟ್ಟು ಬರುವಾಗ ಹಿಂದೆ ಬಂದ ವ್ಯಕ್ತಿಯೊಬ್ಬ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿಮ್ಮದ್ದು ಜಾಸ್ತಿಯಾಗಿದೆ ಎಂದ. ಅದಕ್ಕೆ ಪ್ರತಿಯಾಗಿ ನಾನು ಕೂಡ ಕಾರಿನಿಂದ ಇಳಿದು ಆತನನ್ನು ಪ್ರಶ್ನಿಸಿದೆ. ಅನಂತರ ಆತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹಿಂದೆ ಎಂದಿಗೂ ಆತನನ್ನು ನೋಡಿಲ್ಲ. ಕೆಂಪೇಗೌಡ-2 ಸಿನಿಮಾ ಬಿಡುಗಡೆಯಾದ ನಂತರ ಹಲವು ತಲೆಬಿಸಿಗಳು ಆರಂಭವಾಗಿವೆ. ಏನ್ಮಾಡುವುದು ಗೊತ್ತಿಲ್ಲ. ಸಿನಿಮಾ ಮಾಡುವುದೇ ತಪ್ಪಾ?ಎಂಬಂತಾಗಿದೆ ಎಂದು ನಟ ಕೋಮಲ್‌ ತಿಳಿಸಿದರು.

ಪರಸ್ಪರ ಹಲ್ಲೆ ವಿಡಿಯೋ ವೈರಲ್‌: ವಾಗ್ವಾದ ನಡುವೆ ಒಂದು ಹಂತದಲ್ಲಿ ಆಕ್ರೋಶಗೊಂಡ ಕೋಮಲ್‌, ಮೊದಲಿಗೆ ವಿಜಯ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ವಿಜಯ್‌ ಕೂಡ ಕೋಮಲ್‌ ಮುಖಕ್ಕೆ ಹಿಗ್ಗಾಮುಗ್ಗ ಗುದ್ದಿದ್ದಾನೆ. ಅಲ್ಲದೆ, ಅವರನ್ನು ಕೆಳಗೆ ಬೀಳಿಸಿಕೊಂಡು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಕೋಮಲ್‌ ಬಾಯಿ, ಹಣೆ ಹಾಗೂ ಮುಖದ ಕೆಲವೆಡೆ ರಕ್ತಗಾಯವಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಮಲ್ಲೇಶ್ವರ ಪೊಲೀಸರು ಕೂಡಲೇ ವಿಜಯ್‌ ಮತ್ತು ಕೋಮಲ್‌ರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಕೋಮಲ್‌ ಮತ್ತು ವಿಜಯ್‌ ಪರಸ್ಪರ ಹೊಡೆದಾಡಿಕೊಂಡಿರುವ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next