Advertisement

ನಟ ಗಣೇಶ್‌ಗೆ ನಿರ್ದೇಶಕ ಎಸ್‌.ನಾರಾಯಣ್‌ ನೋಟಿಸ್‌

11:50 AM Feb 26, 2017 | |

ಬೆಂಗಳೂರು: ಮೋಕ್ಷ ಅಗರಬತ್ತಿ ಕಂಪನಿ ಮತ್ತು ನಾಯಕ ನಟ ಗಣೇಶ್‌ ನಡುವಿನ ಕಾನೂನು ಹೋರಾಟ ಇದೀಗ ಗಣೇಶ್‌ ಮತ್ತು ಚಿತ್ರ ನಿರ್ದೇಶಕ ಎಸ್‌.ನಾರಾಯಣ್‌ ನಡುವೆ ಮಾನನಷ್ಟ ಮೊಕದ್ದಮೆಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ಕಾರಣ ಅಗರಬತ್ತಿ ಜಾಹೀರಾತಿಗೆ ಸಂಬಂಧಿಸಿದಂತೆ ಗಣೇಶ್‌ ಮೋಕ್ಷ ಅಗರಬತ್ತಿ ಕಂಪೆನಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎಸ್‌.ನಾರಾಯಣ್‌ ಅವರಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿರುವುದು.

Advertisement

ಇದರಿಂದ ಅಸಮಾಧಾನಗೊಂಡಿರುವ ನಾರಾಯಣ್‌, ಗಣೇಶ್‌ ದಾಖಲಿಸಿದ ದೂರಿನಿಂದ ತಮಗೂ ಸಮನ್ಸ್‌ ಬಂದಿದ್ದು, ಮಾನಹಾನಿಯುಂಟಾಗಿದೆ. ಹೀಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ತಮ್ಮ ವಕೀಲ ಶಂಕರಪ್ಪ ಅವರಿಂದ ಗಣೇಶ್‌ಗೆ ನೋಟಿಸ್‌ ಕೊಡಿಸಿದ್ದಾರೆ.

2008ರಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಚಿತ್ರನಟ ಗಣೇಶ್‌ ಮೋಕ್ಷ ಅಗರಬತ್ತಿ ಅಂಡ್‌ ಕಂಪೆನಿ ವಿರುದ್ಧ 75 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಸೋಮವಾರ ಸಿಟಿಸಿವಿಲ್‌ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಆದರೆ, ಮೋಕ್ಷ ಅಗರಬತ್ತಿ ಕಂಪೆನಿ ಚೆಲುವಿನ ಚಿತ್ತಾರ ಚಿತ್ರದ ನಿರ್ದೇಶಕ ಎಸ್‌.ನಾರಾಯಣ್‌ರನ್ನು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯಕ್ಕೆ ಕೋರಿರುವುದರಿಂದ ನ್ಯಾಯಾಲಯ ನಾರಾಯಣ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ನಿರ್ದೇಶಕ ಎಸ್‌.ನಾರಾಯಣ್‌, ಗಣೇಶ್‌ ಗೋಲ್ಡನ್‌ ಸ್ಟಾರ್‌ ಆಗುವುದಕ್ಕೆ ಸಾಕಷ್ಟು ಸಹಾಯ ಮಾಡಿದ್ದೇನೆ. ಆದರೆ, ಚೆಲುವಿನ ಚಿತ್ತಾರದ ಪ್ರಚಾರದ ಸಲುವಾಗಿ ಅಗರಬತ್ತಿ ಕಂಪೆನಿ ಜತೆ ಮೂರು ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, ಅವಧಿ ಮುಗಿದ ಬಳಿಕವೂ ಸಂಸ್ಥೆ ಚಿತ್ರದ ಹೆಸರನ್ನು ಪ್ರಚಾರಕ್ಕೆ  ಬಳಸಿದೆ. ಈ ಬಗ್ಗೆ ಗಣೇಶ್‌ ನನ್ನ ಜತೆ ಮಾತನಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು.

ಆದರೆ, ಅವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರಿಂದ ನನಗೆ ನಿರಂತರವಾಗಿ ಸಮನ್ಸ್‌ ಬರುತ್ತಿದೆ. ಈಗಾಗಲೇ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗಿಹೋಗಿರುವ ಸಂದರ್ಭದಲ್ಲಿಯೇ ಮತ್ತೂಂದು ಸಮನ್ಸ್‌ ಬಂದಿರುವುದು ನೋವುಂಟು ಮಾಡಿದೆ. ನಾನು ಕೂಡ ಸ್ಟಾರ್‌ ನಿರ್ದೇಶಕನಾಗಿದ್ದು ನನ್ನ ಮಾನಹಾನಿಯುಂಟಾಗಿದೆ. ಹೀಗಾಗಿ ವಕೀಲರ ಮೂಲಕ ನೋಟಿಸ್‌ ಕೊಡಿಸಿದ್ದೇನೆ ಎಂದು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ತಮ್ಮ  ಅನುಮತಿಯಿಲ್ಲದೆ ಫೋಟೋ ಬಳಸಲಾಗಿದೆ ಎಂಬ ಕಾರಣಕ್ಕೆ  ಮೋಕ್ಷ ಅಗರಬತ್ತಿ ಅಂಡ್‌ ಕಂಪನಿ ವಿರುದ್ಧ ಸಿವಿಲ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿಲಾಗಿದೆ, ಇದರಲ್ಲಿ ನಿರ್ದೇಶಕ ಎಸ್‌.ನಾರಾಯಣ್‌ರ ಹೆಸರಿಗೆ ಚ್ಯುತಿಯಾಗುವಂತೆ ನಡೆದುಕೊಂಡಿಲ್ಲ. ಆದರೆ, ಮೋಕ್ಷ ಅಗರ ಬತ್ತಿ ಕಂಪೆನಿ ಚಿತ್ರದ ನಿರ್ಮಾಪಕರಾಗಿದ್ದ ಎಸ್‌.ನಾರಾಯಣ್‌ ಜತೆಗೆ  ಒಪ್ಪಂದ ಮಾಡಿಕೊಂಡಿದ್ದು, ಅವರೂ ಕೂಡ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಬೇಕು ಎಂದು 2015ರಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿಯೇ ಕೋರ್ಟ್‌ ಸಮನ್ಸ್‌ ನೀಡಿದೆ. ಅದನ್ನು ಹೊರತುಪಡಿಸಿ ಗಣೇಶ್‌ ಮತ್ತು ಎಸ್‌.ನಾರಾಯಣ್‌ ನಡುವೆ ಉತ್ತಮ ಬಾಂಧವ್ಯವಿದೆ.
-ಸುಬೇರ್‌, ಗಣೇಶ್‌ ಪರ ವಕೀಲರು 

Advertisement

Udayavani is now on Telegram. Click here to join our channel and stay updated with the latest news.

Next