ಮಣಿಪಾಲ: ಕಾಂತಾರ ಚಿತ್ರದ ಒಂದು ಸೀಕ್ವೆನ್ಸ್ ಶೂಟ್ ಆದ ಬಳಿಕ ನಾನು ತಂಡದ ಜೊತೆ ಪಂಜುರ್ಲಿ ದೈವದ ಕೋಲಕ್ಕೆ ಹೋಗಿದ್ದೆ.ಆಗ ದೈವದ ಬಳಿ ಈ ಸಿನಿಮಾ ಮಾಡುತ್ತಿರುವುದಾಗಿ ಪ್ರಶ್ನೆ ಇಟ್ಟಿದ್ದೆ. ‘ದೈವದ ಕಾರ್ಣಿಕ ಹೇಳುವ ಸಿನಿಮಾಗೆ ಕೈ ಹಾಕಿದ್ದೇನೆ, ಅನುಗ್ರಹ ಬೇಕು’ ಎಂದು ಹೇಳಿದ್ದೆ. ‘ಅಲ್ಲಿ ಪಂಜುರ್ಲಿ ದೈವ ಬಣ್ಣ ತೆಗೆದು ಮುಖಕ್ಕೆ ಹಚ್ಚಿತ್ತು. ಆ ಕ್ಷಣ ನನಗೆ ರೋಮಾಂಚನವಾಗಿತ್ತು.. “ ಹೀಗೆ ಹೇಳುತ್ತಾ ಹೋದ ರಿಷಬ್ ಶೆಟ್ರ ಮುಖದಲ್ಲಿ ಅದೇನೋ ಸಾಧಿಸಿದ ಭಾವವಿತ್ತು.
ಕಾಂತಾರ ಚಿತ್ರದ ಭರ್ಜರಿ ಯಶಸ್ಸಿನ ಸಂತಸದಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ತಂಡ ಇಂದು ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಮಾತಿಗೆ ಕುಳಿತ ರಿಷಬ್ ಶೆಟ್ಟಿ ಅವರು ಹಂಚಿಕೊಂಡ ಕೆಲವು ವಿಚಾರಗಳು ಇಲ್ಲಿದೆ.
ಚಿತ್ರದ ಬಗ್ಗೆ ಮಾತನಾಡುತ್ತಾ, ‘ಎಲ್ಲವೂ ದೈವೇಚ್ಚೆ. ಪಂಜುರ್ಲಿ ಕೋಲದಲ್ಲಿ ನಮಗೆ ದೈವದ ಆಶೀರ್ವಾದ ಸಿಕ್ಕಿತ್ತು. ಇಡೀ ಸಿನಿಮಾದಲ್ಲಿ ನನಗೆ ಒಂದು ಶಕ್ತಿಯ ರಕ್ಷಣೆಯಿತ್ತು. ಏನೇ ಸಮಸ್ಯೆ ಇದ್ದರೂ ಪರಿಹಾರ ಸಿಗುತ್ತಿತ್ತು’ ಎಂದರು ರಿಷಬ್.
ಕಾಂತಾರ ಚಿತ್ರವನ್ನು ಕನ್ನಡದಲ್ಲೇ ಜನರು ನೋಡಬೇಕು ಎಂದು ನಾವು ಪ್ಯಾನ್ ಇಂಡಿಯಾ ಹೋಗಲಿಲ್ಲ. ಆದರೆ ಸದ್ಯ ಬೇರೆ ಭಾಷೆಗಳಿಂದಲೂ ಡಿಮ್ಯಾಂಡ್ ಬರುತ್ತಿದೆ. ಕೆಲವು ವಾರಗಳು ಕಳೆದ ಬಳಿಕ ಬೇರೆ ಭಾಷೆಗಳಲ್ಲಿ ಡಬ್ ಆಗಿ ಚಿತ್ರ ಬರಲಿದೆ ಎಂದರು.
ಕಾಡು ಮತ್ತು ಮನುಷ್ಯನ ಸಂಬಂಧದ ಕತೆಯನ್ನು ಹೇಳಲು ದೈವವೇ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ರಿಷಬ್, ‘ಸಮಾಜದ ಸಮತೋಲನವನ್ನು ಕಾಪಾಡುವುದು ದೈವಗಳು. ಮನುಷ್ಯ ಮತ್ತು ಪೃಕೃತಿಯ ನಡುವಿನ ಕೊಂಡಿ ಎಂದರೆ ದೈವಗಳು ಎಂದು ನಂಬಿರುವವನು ನಾನು” ಎಂದರು. ಮುಂದುವರಿಸಿ, more regional is more universal ಎಂಬಂತೆ, ಸಮಗ್ರ ಭಾರತೀಯ ಸಂಸ್ಕೃತಿಯಲ್ಲಿ ಈ ಚಿತ್ರವನ್ನು ನೋಡಬಹುದು. ಕರಾವಳಿ ಅಲ್ಲದೆಯೂ ಬೇರೆ ಭಾಗದ ಆಚರಣೆಗೂ ಇದು ಅನ್ವಯಿಸುತ್ತದೆ ಎಂದರು.
ದೈವ ನರ್ತಕರ ಬೆಂಬಲ: ಈ ಚಿತ್ರ ಮಾಡುವಲ್ಲಿ ದೈವ ನರ್ತಕರ ಬೆಂಬಲ ದೊಡ್ಡದು. ಅವರು ನನಗೆ ತುಂಬಾ ಮಾರ್ಗದರ್ಶನ ಮಾಡಿದ್ದರು. ಚಿತ್ರದ ಬಗ್ಗೆ ನನಗೆ ಅವರ ಅಭಿಪ್ರಾಯ ಬೇಕಿತ್ತು. ಚಿತ್ರ ನೋಡಿದ ಬಳಿಕ ಅವರೂ ಭಾವುಕರಾಗಿದ್ದರು ಎಂದರು ರಿಷಬ್ ಶೆಟ್ಟಿ.
ಚಿತ್ರದ ಪ್ರೇಕ್ಷಕರಿಗೆ ಒಂದು ವಿಶೇಷ ಮನವಿ ಮಾಡಿದ ರಿಷಬ್, “ ನೀವು ಚಿತ್ರ ನೋಡಿ ಸಂತಸದಲ್ಲಿ ಥಿಯೇಟರ್ ನಲ್ಲಿ ತೆಗೆದ ಫೋಟೊ- ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೀರಿ. ದಯವಿಟ್ಟು ಹಾಗೆ ಮಾಡಬೇಡಿ. ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಾಕಿರುವ ಫೋಟೊಗಳನ್ನು ಸ್ಟೇಟಸ್ ಗೆ ಹಾಕಿ” ಎಂದರು.
ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ರಂಜನ್, ಶನಿಲ್ ಗುರು, ಚಿರಂತ್ ಸೇರಿದಂತೆ ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿತು.