Advertisement

ನಟ-ನಿರ್ದೇಶಕ ಅನಿಲ ದೇಸಾಯಿ ಇನ್ನಿಲ್ಲ

10:56 AM May 07, 2019 | Suhan S |

ಧಾರವಾಡ: ಬಳ್ಳಾರಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಧಿಕಾರಿಯಾಗಿದ್ದ ರಂಗಭೂಮಿ ನಟ, ನಿರ್ದೇಶಕ ಅನಿಲ ನಾರಾಯಣರಾವ್‌ ದೇಸಾಯಿ (57) ಸೋಮವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.

Advertisement

ಮೂಲತಃ ಬಾಗಲಕೋಟೆ ಜಿಲ್ಲೆ ಸೀಮಿಕೇರಿ, ಧಾರವಾಡ ಕಲ್ಯಾಣನಗರ ನಿವಾಸಿಯಾಗಿದ್ದ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಸೋಮವಾರ ನಸುಕಿನ ಜಾವ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಮೃತರಿಗೆ ಪತಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವಿದೆ.

ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮತೆ ಮಾತಾಗಿದ್ದ ಅನಿಲ ಅವರು, ಕಳೆದ 2 ವರ್ಷಗಳ ಹಿಂದೆಯಷ್ಟೇ ಬಳ್ಳಾರಿ ಆಕಾಶವಾಣಿ ಕೇಂದ್ರಕ್ಕೆ ವರ್ಗವಾಗಿದ್ದರು. ಪ್ರಸ್ತುತ ಸಂಗೀತ-ನೃತ್ಯ ಅಕಾಡೆಮಿಯ ನಾಮ ನಿರ್ದೇಶಿತ ಸದಸ್ಯರಾಗಿದ್ದ ಅವರು, ನಮ್ಮ ಇಡೀ ಬದುಕಿನುದ್ದಕ್ಕೂ ಸಾಂಸ್ಕೃತಿಕ ಬದುಕಿನಲ್ಲಿ ಅತ್ಯಂತ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದರು. ಈಗ ಅವರ ಅಗಲಿಕೆಯಿಂದ ಗೆಳೆಯರ ಬಳಗಕ್ಕೆ ಅಪಾರ ನಷ್ಟವಾದಂತಾಗಿದೆ.

ದೇಸಾಯಿ ಬಗ್ಗೆ ಒಂದಿಷ್ಟು: 1962ರ ಅ.28ರಂದು ವಿಜಯಪುರ ಜಿಲ್ಲೆಯಲ್ಲಿ ಜನಿಸಿದ ಅನಿಲ ದೇಸಾಯಿ ಅವರು ಕಾಲೇಜು ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಪೂರೈಸಿ, ಕವಿವಿಯಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದ ಬಳಿಕ ಕೆಲ ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇದಾದ ಬಳಿಕ ಆಕಾಶವಾಣಿಗೆ ಸೇರಿದ ಅವರು, ಧಾರವಾಡ ಕೇಂದ್ರದಲ್ಲಿ ಸಂಗೀತ ಮತ್ತು ನಾಟಕ ವಿಭಾಗದ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ನಡೆದ ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Advertisement

ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು, ಜಗಜ್ಯೋತಿ ಬಸವೇಶ್ವರ, ಕರೆಯಪ್ಪನ ಕೋರಿಯೋಗ್ರಾಫಿ, ಜೀವನ ಚದುರಂಗ, ನಟ ಸಾಮ್ರಾಟ, ಖರೋಖರ್‌ ಸೇರಿದಂತೆ ಇನ್ನೂ ಹಲವು ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 200ಕ್ಕೂ ಹೆಚ್ಚು ನಾಟಕಗಳ ನಿರ್ದೇಶನ, ನಿರ್ಮಾಣ ಮಾಡಿದ ಅವರು, ಆಕಾಶವಾಣಿ ನಾಟಕ ವಿಭಾಗದ ಎ ಗ್ರೇಡ್‌ ಕಲಾವಿದರಾಗಿದ್ದರು. ಅಲೆಮಾರಿ ಕಲಾತ್ಮಕ ಚಿತ್ರ ಸೇರಿದಂತೆ ಕಿರುತೆರೆಯಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next