ಬೆಂಗಳೂರು : ಪೊಗರು ಚಿತ್ರದ ವಿವಾದದ ಕುರಿತು ಮೌನ ಮುರಿದಿರುವ ನಾಯಕ ನಟ ಧ್ರುವ ಸರ್ಜಾ ಕ್ಷಮೆ ಕೋರಿದ್ದಾರೆ.
ಇಂದು (ಫೆ.24) ಸಂಜೆ ಟ್ವಿಟರ್ ಪೋಸ್ಟ್ ಮೂಲಕ ಕ್ಷಮೆ ಯಾಚಿಸಿರುವ ಆ್ಯಕ್ಷನ್ ಪ್ರಿನ್ಸ್, ‘ನಿಮಗೆ ಬೇಸರವಾಗಿರೋ ದೃಶ್ಯಗಳನ್ನು ಕತ್ತರಿಸಿದ್ದೇವೆ. ಮತ್ತೆ ಸೆನ್ಸಾರ್ ಆದಮೇಲೆ ನಿಮ್ಮೆದುರು ಮಾತಾಡೋಣ ಎಂದು ನಾನೇ ನಿರ್ಧರಿಸಿದ್ದೆ. ಈಗ ಅದನ್ನು ಸರಿಪಡಿಸಲು ತಂತ್ರಜ್ಞರ ತಂಡ ಸಿದ್ಧವಾಗಿದೆ ಎಂದಿದ್ದಾರೆ.
‘ನಮ್ಮ ಇಡೀ ಕುಟುಂಬ ಹನುಮಭಕ್ತರು. ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತಾ, ಗೌರವಿಸುತ್ತಾ ಬದುಕುತ್ತಿದ್ದೇವೆ. ತಾತನವರ ಕಾಲದಿಂದಲೂ ಹಿಂದೂತ್ವದ ಪ್ರತಿಪಾದಕರಾಗಿಯೇ ಬದುಕಿದ್ದೇವೆ. ಕಲೆಯೇ ಧರ್ಮ, ನಾವು ಎಲ್ಲ ಧರ್ಮಗಳನ್ನು ಗೌರವಿಸಿದ್ದೇವೆ. ಚಿತ್ರದ ಕತೆ, ಪಾತ್ರಪೋಷನೆಯಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದೆ ಎನ್ನುವಂತಹ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ. ಈ ಕಾರಣಕ್ಕಾಗಿಯೇ ಬೇಷರತ್ ಕ್ಷಮೆ ಕೇಳುತ್ತೇನೆ.’ ನನ್ನ ಮನವಿಯನ್ನು ಪುರಸ್ಕರಿಸಿ, ಎಂದಿನಂತೆ ನಿಮ್ಮ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ.
ಫೆ.19 ರಂದು ತೆರೆ ಕಂಡ ಪೊಗರು ಚಿತ್ರದಲ್ಲಿಯ ಕೆಲವೊಂದು ದೃಶ್ಯಗಳು ವಿವಾದಕ್ಕೀಡಾಗಿದ್ದವು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ನಿರ್ದೇಶಕ ನಂದ ಕಿಶೋರ್ ನಿನ್ನೆ (ಫೆ.23)ಯಷ್ಟೇ ಸಿನಿಮಾದ 14 ಸೀನ್ ಗಳಿಗೆ ಕತ್ತರಿ ಹಾಕಲು ಒಪ್ಪಿಕೊಂಡಿದ್ದರು. ನಿರ್ದೇಶಕರ ಕ್ಷಮೆಯೊಂದಿಗೆ ವಿವಾದ ತಣ್ಣಗಾಯಿತು. ಈಗ ನಟ ಧ್ರುವ ಸರ್ಜಾ ಕೂಡ ಕ್ಷಮೆಯಾಚಿಸಿದ್ದಾರೆ.