ಬೆಂಗಳೂರು : ವರನಟ ಡಾಕ್ಟರ್ ರಾಜಕುಮಾರ್ ತಮ್ಮ ಅಭಿಮಾನಿಗಳನ್ನ ದೇವರು ಎಂದು ಸಂಬೋಧಿಸುತ್ತಿದ್ದರು. ಅವರಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಭಿಮಾನಿಗಳು ನಿಜವಾದ ಸೆಲೆಬ್ರಿಟಿಗಳು ಎಂದು ಕರೆದರು, ಜತೆಗೆ ಅವರನ್ನ ಸೆಲೆಬ್ರಿಟಿಗಳಂತೆಯೇ ಗೌರವಿಸಿಕೊಂಡು ಬರುತ್ತಿದ್ದಾರೆ.
ಸ್ಯಾಂಡಲ್‍ವುಡ್ ಸಾರಥಿ ದರ್ಶನ್ ಅಭಿಮಾನಿಗಳಿಗೆ ನೀಡುವ ಗೌರವ, ಪ್ರಾಮುಖ್ಯತೆ ಎಂತಹದು ಎಂಬುದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಇತ್ತೀಚಿಗೆ ನಡೆದ ರಾಬರ್ಟ್ ಚಿತ್ರದ ಗೆಲುವಿನ ಸಂಭ್ರಮ ಹಂಚಿಕೊಳ್ಳಲು ಕರೆದ ಮಾಧ್ಯಮಗೋಷ್ಠಿಯಲ್ಲಿ ದಚ್ಚು ಅಭಿಮಾನಿಗಳ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದ್ದಾರೆ. ಜತೆಗೆ ಎಂತಹ ಸಂದರ್ಭದಲ್ಲಿಯೂ ಅವರನ್ನೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿ ಬದ್ಧತೆ ಮೆರೆದಿದ್ದಾರೆ.
ಪೈರಸಿ ವಿಚಾರ ಪ್ರಸ್ತಾಪದ ವೇಳೆ ಅಭಿಮಾನಿಗಳ ಕುರಿತು ಮಾತಾಡಿರುವ ಅವರು, ರಾಬರ್ಟ್ ಚಿತ್ರದ ಲಿಂಕ್ ಶೇರ್ ಮಾಡಿದ್ದ ಒಬ್ಬ ಹುಡುಗನನ್ನ ಪತ್ತೆ ಹಚ್ಚಿದ್ದೇವು. ಆತನನ್ನು ಪೊಲೀಸ್ ಠಾಣೆಗೆ ಕರೆದು ಬುದ್ಧಿವಾದ ಹೇಳಿ ಕಳುಹಿಸಿದೇವು. ಇಷ್ಟಕ್ಕೆ ಏನೆನೋ ಮಾತಾಡಿದ್ರು. ಆದರೆ, ಹಿಂದೊಮ್ಮೆ ನಮ್ಮ ಹುಡುಗ ಬೇರೆ ಯಾವುದೋ ಸಿನಿಮಾ ಲಿಂಕ್ ಶೇರ್ ಮಾಡಿದ್ದಕ್ಕೆ ಆತನನ್ನ ಜೈಲಿನಲ್ಲಿ ಕಳುಹಿಸಿದ್ದರು. ಇದೀಗ ಇದರ ಬಗ್ಗೆ ನಾ ಯಾರ ಮುಂದೆ ಹೇಳಲಿ? ಎಂದು ಪ್ರಶ್ನಿಸಿದರು.
ಅಭಿಮಾನಿಗಳು ಎಲ್ಲರಿಗೂ ಇರುತ್ತಾರೆ. ಅವರಿಂದಲೇ ನಾನು ಅನ್ನ ತಿನ್ನುವುದು. ನಾ ಯಾವತ್ತೂ ನನ್ನ ಫ್ಯಾನ್ಸ್ ಬಿಟ್ಟುಕೊಡುವುದಿಲ್ಲ. ಯಾಕಂದರೆ ಅವರಿದ್ದರೇ ನಾವು ಎಂದರು ದಚ್ಚು ಬಾಸ್.
ಇನ್ನು ಮಾಧ್ಯಮಗೋಷ್ಠಿಯಲ್ಲಿ ಪೈರಸಿ ಬಗ್ಗೆ ಮಾತಾಡಿರುವ ದರ್ಶನ್, ಇದುವರೆಗೆ ರಾಬರ್ಟ್ ಚಿತ್ರದ 1500 ಪೈರಸಿ ಲಿಂಕ್ ಅಳಸಿಹಾಕಿದ್ದೇವೆ. ಒಳ್ಳೆಯ ಸಿನಿಮಾಗಳೆಲ್ಲವೂ ಪೈರಸಿ ಆಗುತ್ತಿವೆ. ನಮ್ಮ ಕುರುಕ್ಷೇತ್ರ ಹಾಗೂ ಯಜಮಾನ ಚಿತ್ರಗಳೂ ಪೈರಸಿ ಆಗಿದ್ದವು. ಒಳ್ಳೆಯ ಚಿತ್ರಗಳು ಎಷ್ಟೇ ಪೈರಸಿ ಆಗಿದ್ದರೂ, ನಾವೇ ಉಚಿತವಾಗಿ ಮೊಬೈಲ್‍ನಲ್ಲಿ ಕೊಡುತ್ತೇವೆಂದರೂ ಅಭಿಮಾನಿಗಳು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಾರೆ ಎಂದರು.