ಬೆಂಗಳೂರು: ಉಪಚುನಾವಣೆ ಕ್ಷೇತ್ರಗಳ ಪೈಕಿ ತುಸು ಹೆಚ್ಚೆ ರಂಗು ಪಡೆದಿರುವ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರಕ್ಕೆ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದು, ಕ್ಷೇತ್ರದಲ್ಲಿ ರೋಡ್ ಶೋ ನಡೆಯುತ್ತಿದೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ನಾನು ಪಕ್ಷ ನೋಡಿ ಪ್ರಚಾರ ಮಾಡುವುದಿಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರ ಮಾಡುತ್ತಿರುವುದು ಎಂದಿದ್ದಾರೆ.
ನಾನು ಯಾವುದೇ ಪಕ್ಷ ನೋಡಿ, ವ್ಯಕ್ತಿ ನೋಡಿ ಪ್ರಚಾರ ಮಾಡುತ್ತಿಲ್ಲ. ಮುನಿರತ್ನ ಅವರಲ್ಲಿರುವ ಮಾನವೀಯತೆ, ದೊಡ್ಡತನ ನೋಡಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ನಟ ದರ್ಶನ್ ಹೇಳಿದರು.
ಕೋವಿಡ್-19 ಸೋಂಕಿನಿಂದಾಗಿ ಲಾಕ್ ಡೌನ್ ಆರಂಭವಾಗಿತ್ತು. ಅಂತಹ ಸಂದರ್ಭದಲ್ಲಿ ಹಲವಾರು ಜನರು ಅನ್ನ, ಆಹಾರವಿಲ್ಲದೇ ಪರದಾಡಿದ್ದರು. ಆ ಸಂಕಷ್ಟದ ಸಂದರ್ಭದಲ್ಲಿ ಮುನಿರತ್ನ ಅವರು ಅನ್ನದಾಸೋಹ ನಡೆಸಿ ಕಷ್ಟದಲ್ಲಿರುವವರಿಗೆ ಊಟ ನೀಡಿದರು. ಅವರಲ್ಲಿನ ಆ ಮಾನವೀಯತೆ ದೃಷ್ಟಿ ನೋಡಿ ನಾನಿಂದು ಅವರ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ ಎಂದರು.
ಮುನಿರತ್ನ ಅವರು ಶಾಸಕರಾಗಿ, ನಿರ್ಮಾಪಕರಾಗಿ ಏನೇನು ಮಾಡಿದ್ದಾರೆ ಎಂದು ನಾನು ನೋಡುತ್ತಿಲ್ಲ, ಅವರಲ್ಲಿನ ದೊಡ್ಡತನ ನೋಡಿ ಪ್ರಚಾರ ಮಾಡುತ್ತಿದ್ದೇನೆ ಎಂದು ದರ್ಶನ್ ಹೇಳಿದರು.
ನಟ ದರ್ಶನ್ ಗೆ ನಟಿ ಅಮೂಲ್ಯ ಕೂಡಾ ಸಾಥ್ ನೀಡಿದ್ದು, ರಾಜರಾಜೇಶ್ವರಿ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೊ ನಡೆಯುತ್ತಿದೆ.