ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿರುವ 9 ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ನೀಡಿದ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ದಚ್ಚು ಮನವಿಗೆ ಅವರ ಅಭಿಮಾನಿಗಳು ಹಾಗೂ ಅಪ್ತರು ಉತ್ತಮವಾಗಿ ಸ್ಪಂದಿಸಿದ್ದು, ಪ್ರಾಣಿಗಳನ್ನು ದತ್ತು ಪಡೆಯಲು ಮುಗಿಬಿದ್ದಿದ್ದಾರೆ. ಇದರಿಂದ ಝೂಗಳಿಗೆ ಭರಪೂರ ಹಣ ಹರಿದು ಬರುತ್ತಿದೆ. ನಾಲ್ಕೇ ದಿನದಲ್ಲಿ ಬರೋಬ್ಬರಿ 70 ಲಕ್ಷ ರೂ. ಸಂಗ್ರಹಗೊಂಡಿದೆ.
ಅರಣ್ಯ ಇಲಾಖೆ ರಾಯಭಾರಿಯಾಗಿರುವ ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್, ಕೋವಿಡ್‌ನ ಈ ಸಂಕಷ್ಟದ ಸಂದರ್ಭದಲ್ಲಿ ಜನರೂ ತಮ್ಮ ಹತ್ತಿರದ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳನ್ನು ದತ್ತುಪಡೆಯಲು ಕರೆ ನೀಡಿದ್ದರು.
ಕೋವಿಡ್ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಕರ್ನಾಟಕದಲ್ಲಿ 9 ಮೃಗಾಲಯಗಳಿದ್ದು, ಇವುಗಳಲ್ಲಿ 5 ಸಾವಿರ ಪ್ರಾಣಿಗಳಿವೆ. ಇವುಗಳನ್ನು ನೋಡಲು ದೇಶದಾದ್ಯಂತದಿಂದ ಜನರು ಬರುತ್ತಿದ್ದರು. ಅವರು ಪಡೆಯುತ್ತಿದ್ದ ಟಿಕೆಟ್‌ನಿಂದ ಸಂಗ್ರಹವಾಗುತ್ತಿದ್ದ ಹಣದಿಂದ ಈ ಪ್ರಾಣಿಗಳಿಗೆ ಆಹಾರ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ವೇತನ ನೀಡಲಾಗುತ್ತಿತ್ತು. ಕೋವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಈ ಮೃಗಾಲಯಗಳು ಸಂಕಷ್ಟದಲ್ಲಿವೆ’ ಎಂದಿದ್ದರು.
ಮೈಸೂರು ಮೃಗಾಲಯಕ್ಕೆ ಪ್ರಾಣಿಗಳಿಗೆ ಆಹಾರ ನೀಡಲು ಮತ್ತು ಅವುಗಳ ನಿರ್ವಹಣೆಗಾಗಿ ವರ್ಷಕ್ಕೆ ಸುಮಾರು 4.5 ಕೋಟಿ ರೂ.ಹಣ ಬೇಕಾಗಿದೆ. ಪ್ರಾಣಿಗಳ ದತ್ತು ಪಡೆಯುವುದರಿಂದ ಹೊರೆ ತಗ್ಗಿಸುತ್ತದೆ. ಮಾನವರು ತಮ್ಮ ಕಷ್ಟಗಳನ್ನು ವ್ಯಕ್ತಪಡಿಸಬಹುದು ಮತ್ತು ಹೆಚ್ಚಿನ ಹಣ ಅಥವಾ ಆಹಾರವನ್ನು ಕೇಳಬಹುದು. ಪ್ರಾಣಿಗಳು ತಮ್ಮ ಹಸಿವನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತವೆ? ಮಾನವರಾದ ನಾವು ಅವುಗಳಿಗೆ ಪರಿಹಾರ ನೀಡಬೇಕು ಎಂದು ದರ್ಶನ್ ಹೇಳಿದ್ದರು.