ಬೆಂಗಳೂರು: ಒಂದಲ್ಲಾ ಒಂದು ವಿಚಾರದಲ್ಲಿ ಹಿಂದೂತ್ವದ ವಿರುದ್ಧ ಮಾತನಾಡಿ ವಿವಾದಕ್ಕೆ ಗುರಿಯಾಗುತ್ತಿರುವ ಸ್ಯಾಂಡಲ್ ವುಡ್ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅವರ ಸಾಗರೋತ್ತರ ವೀಸಾ (Overseas citizen of india)ವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಇದನ್ನೂ ಓದಿ:BJP ಓಡಿಸುವುದೇ ನಿಜವಾದ ದೇಶಭಕ್ತಿ; Modi ಸರ್ವಾಧಿಕಾರಿ: ಯೆಚೂರಿ ವಾಗ್ದಾಳಿ
ಹಿಂದುತ್ವದ ಕುರಿತು ಟ್ವೀಟ್ ಮಾಡಿ ಬಂಧನಕ್ಕೊಳಪಟ್ಟು ಬಿಡುಗಡೆಯಾದ ಒಂದು ವಾರದ ಬಳಿಕ ಈ ಬೆಳವಣಿಗೆ ನಡೆದಿರುವುದಾಗಿ ವರದಿಯಾಗಿದೆ.
ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಜಯಂತಿ ದಿನವಾದ ಏಪ್ರಿಲ್ 14ರಂದೇ ಕೇಂದ್ರ ಸರ್ಕಾರ ನನ್ನ ಓಐಸಿ(ಸಾಗರೋತ್ತರ ವೀಸಾ)ಯನ್ನು ರದ್ದುಗೊಳಿಸಿರುವುದಾಗಿ ಚೇತನ್ ಅಹಿಂಸಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ದ ನ್ಯೂಸ್ ಮಿನಿಟ್ ವರದಿ ಪ್ರಕಾರ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO) ಹೊರಡಿಸಿದ್ದ ಪತ್ರ ಏಪ್ರಿಲ್ 14ರಂದು ಚೇತನ್ ಕೈಸೇರಿತ್ತು. 15 ದಿನದೊಳಗೆ OIC ಕಾರ್ಡ್ ಅನ್ನು ಮರಳಿಸುವಂತೆ FRRO ಪತ್ರದಲ್ಲಿ ತಿಳಿಸಿತ್ತು.
ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಜಡ್ಜ್ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಚೇತನ್ ಅಹಿಂಸಾ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ನಂತರ ಎಫ್ ಆರ್ ಆರ್ ಓ 2022ರ ಜೂನ್ ನಲ್ಲಿ ಶೋಕಾಸ್ ನೋಟಿಸ್ ಅನ್ನು ಜಾರಿ ಮಾಡಿತ್ತು.
ನಾನು ಕಳೆದ 18 ವರ್ಷಗಳಿಂದ ದೇಶದಲ್ಲಿ ವಾಸಿಸುತ್ತಿದ್ದೇನೆ. ಹಲವಾರು ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದೇನೆ. ವಿವಾಹವಾಗಿದ್ದು, ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಯಾವುದೇ ಕಾರಣಕ್ಕೂ ಭಾರತ ಬಿಟ್ಟು ಅಮೆರಿಕಕ್ಕೆ ವಾಪಸ್ ಹೋಗಲ್ಲ ಎಂದು ಚೇತನ್ ತಿಳಿಸಿರುವುದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.