ನವದೆಹಲಿ : ನಟ ಅರುಣ್ ಗೋವಿಲ್ ರಾಜಕೀಯಕ್ಕೆ ಧುಮುಕಿದ್ದಾರೆ. ಇಂದು (ಮಾರ್ಚ್ 18) ನವದೆಹಲಿಯಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್ ರಾಮನ ಪಾತ್ರ ನಿಭಾಯಿಸಿದ್ದರು. ತಮ್ಮ ಮನೋಜ್ಞ ನಟನೆಯಿಂದ ರಾಮನ ಪಾತ್ರಕ್ಕೆ ಜೀವಕಳೆ ತುಂಬಿದ್ದರು. ಸಾಕ್ಷಾತ್ ರಾಮನಂತೆಯೇ ಅಭಿನಯಿಸಿ ಜನಮನ ಗೆದ್ದಿದ್ದರು.
ಇಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವೆ ದೇಬಶ್ರೀ ಚೌದರಿ ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ನಟ ಅರುಣ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ವಿಧಾನ ಸಭೆ ಚುನಾವಣೆ ಘೋಷಣೆಯಾಗಿದೆ. ಪಂಚರಾಜ್ಯಗಳ ಚುನಾವಣೆಗೆ ಕಣ ರಂಗೇರುತ್ತಿರುವಾಗಲೇ ಹಲವು ಸಿನಿಮಾ ತಾರೆಯರು ರಾಜಕೀಯ ಅಂಗಳಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ತಾರೆಯರು ರಾಜಕೀಯ ಪ್ರವೇಶಿಸಿದ್ದಾರೆ. ಇದೀಗ ಅವರ ಸಾಲಿಗೆ ಅರುಣ್ ಗೊವಿಲ್ ಹೊಸ ಸೇರ್ಪಡೆ.
ಇನ್ನು ಅರುಣ್ ಗೋವಿಲ್ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ? ಅವರನ್ನು ಬಿಜೆಪಿ ಯಾವ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲಿದೆ ಎಂಬುದರ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.