Advertisement

ಹಿರಿಯ ನಟ ಆರ್‌.ಎನ್‌.ಸುದರ್ಶನ್‌ ನಿಧನ

06:15 AM Sep 09, 2017 | |

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಆರ್‌.ಎನ್‌.ಸುದರ್ಶನ್‌ (78) ಶುಕ್ರವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಿಲಕನಗರದ ಸಾಗರ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ಸುದರ್ಶನ್‌, 1961ರಲ್ಲಿ ಬಿಡುಗಡೆಯಾದ “ವಿಜಯನಗರದ ವೀರಪುತ್ರ’ ಚಿತ್ರದ ಮೂಲಕ ನಾಯಕರಾಗಿ ನಟಿಸಿದರು. ಈ ಚಿತ್ರದ ವಿಶೇಷತೆಯೆಂದರೆ, ಚಿತ್ರವನ್ನು ಸುದರ್ಶನ್‌ ಅವರ ತಂದೆ ಆರ್‌. ನಾಗೇಂದ್ರ ರಾವ್‌ ನಿರ್ದೇಶಿಸಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದರೆ, ಅವರ ಸಹೋದರ ಆರ್‌.ಎನ್‌. ಕೃಷ್ಣಪ್ರಸಾದ್‌ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಇನ್ನು ಅವರ ಮತ್ತೂಬ್ಬ ಸಹೋದರರಾದ ಆರ್‌.ಎನ್‌. ಜಯಗೋಪಾಲ್‌ ಹಾಡುಗಳನ್ನು ರಚಿಸಿದ್ದರು. ನಂತರದ ದಿನಗಳಲ್ಲಿ “ಲಕ್ಷ್ಮೀ-ಸರಸ್ವತಿ’, “ಕಾಡಿನ ರಹಸ್ಯ’, “ತಂದೆ-ಮಕ್ಕಳು’, “ನಾಡಿನ ಭಾಗ್ಯ’, “ನಗುವ ಹೂವು’ ಸೇರಿ ಹಲವು ಚಿತ್ರಗಳಲ್ಲಿ ಸುದರ್ಶನ್‌ ನಾಯಕರಾಗಿದ್ದರು.

ಕ್ರಮೇಣ ಪೋಷಕ ಪಾತ್ರಗಳತ್ತ ವಾಲಿದ ಅವರು, “ಪ್ರಚಂಡ ಕುಳ್ಳ’, “ಗುರು ಜಗದ್ಗುರು’, “ಹೃದಯ ಪಲ್ಲವಿ’, “ಸೂಪರ್‌’, “ಮಠ’, “ದಶಮುಖ’, “ಚಾರುಲತಾ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದ ಸುದರ್ಶನ್‌ ಅತ್ಯುತ್ತಮ ಗಾಯಕರೂ ಹೌದು. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ “ಶುಭ ಮಂಗಳ’ ಚಿತ್ರದ “ಹೂವೊಂದು ಬಳಿ ಬಂದು …’ಹಾಡು ಅವರ ಸುಶ್ರಾವ್ಯ ಕಂಠದಿಂದ ಮೂಡಿಬಂದದ್ದು ಎನ್ನುವುದು ವಿಶೇಷ. ಕೇವಲ ಸಿನಿಮಾವಷ್ಟೇ ಅಲ್ಲದೇ, ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಸುದರ್ಶನ್‌, ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಮನೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು, ಮೂಳೆ ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ವಯೋಸಹಜ ಖಾಯಿಲೆಗಳಿಂದಾಗಿ ಅವರು ಬಳಲುತ್ತಿದ್ದರು. ಹರಿಶ್ಚಂದ್ರ ಘಾಟ್‌ನ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಸುದರ್ಶನ್‌ ಅವರು ಪತ್ನಿ ಶೈಲಶ್ರೀ, ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಸುದರ್ಶನ್‌ ನನ್ನ  ಒಳ್ಳೆಯ ಸ್ನೇಹಿತ. “ಪ್ರಚಂಡ ಕುಳ್ಳ’ ಚಿತ್ರದ ಯಶಸ್ಸಿನಲ್ಲಿ ಅವನ ಪಾತ್ರವೂ ಮುಖ್ಯವಾಗಿತ್ತು. 
“ಕಿಂಕಿಣಿ ಶರ್ಮ’ ಪಾತ್ರವನ್ನು ಸುದರ್ಶನ್‌ ಗೋಸ್ಕರವೇ ಮಾಡಿದ್ದು. ಆ ಪಾತ್ರ ಅದ್ಭುತವಾಗಿತ್ತು. ಆತನಿಗೆ ನಾಯಕ, ಖಳನಾಯಕ ಎಂಬ ಭಾವನೆ ಇರಲಿಲ್ಲ. ಒಳ್ಳೆಯ ಪಾತ್ರ ಇದ್ದರೆ ಸಾಕಿತ್ತು, ಮಾಡಿಬಿಡುತ್ತಿದ್ದ. ನನ್ನ “ಚಾರುಲತಾ’ ಸಿನಿಮಾದಲ್ಲೂ ನಟಿಸಿದ್ದ. ತಾನೊಬ್ಬ ಕಲಾವಿದನಾಗಿ ಬದುಕಬೇಕೆಂಬ ಆಸೆ ಇಟ್ಟುಕೊಂಡು, ಅಂತೆಯೇ ಬದುಕಿದ. ಒಳ್ಳೆಯ ನಟನನ್ನು ಕಳೆದುಕೊಂಡಂತಾಗಿದೆ.

– ದ್ವಾರಕೀಶ್‌, ನಟ -ನಿರ್ಮಾಪಕ-ನಿರ್ದೇಶಕ

Advertisement

ನಾನು ಕಂಡಂತೆ ಎಂದಿಗೂ ಸುದರ್ಶನ್‌ ಅವರೊಬ್ಬರನ್ನೇ ನೋಡಿಲ್ಲ. ಅವರ ಜತೆ ಪತ್ನಿ ಶೈಲಜಾ ಇರುತ್ತಿದ್ದರು. ಅವರು ಆದರ್ಶ ದಂಪತಿಗಳಾಗಿದ್ದರು. ಸಿನಿಮಾ ಇರಲಿ, ಕಿರುತೆರೆ ಇರಲಿ, ನಟನೆ ಮಾಡೋರು. ಬದುಕನ್ನು ತುಂಬ ಪ್ರೀತಿಸುತ್ತಿದ್ದರು. ತಂದೆಯನ್ನು ಕಳೆದುಕೊಂಡ ನೋವು ನಮಗಾಗಿದೆ. ಅವರ ಕುಟುಂಬವೇ ಕಲಾಕುಟುಂಬವಾಗಿತ್ತು. ಕನ್ನಡ ಚಿತ್ರರಂಗಕ್ಕೆ ಅವರ ಕುಟುಂಬದ ಕೊಡುಗೆ ಅಪಾರ.
– ಜಯಮಾಲ, ನಟಿ

ಸುದರ್ಶನ್‌ ನಾಲ್ಕು ಭಾಷೆಯಲ್ಲಿ ನಟಿಸಿದ್ದ  ಶ್ರೇಷ್ಠ ಕಲಾವಿದ.  “ವಿಜಯನಗರ ವೀರಪುತ್ರ’ ಸಿನಿಮಾದ ನಟನೆ ಇಂದಿಗೂ ಮರೆಯಲು ಸಾಧ್ಯವಿಲ್ಲ. ಇಡೀ ಕುಟುಂಬವೇ ಸಿನಿಮಾರಂಗಕ್ಕೆ ಮೀಸಲಾಗಿತ್ತು. ಅವರು  ನಟನಷ್ಟೇ ಅಲ್ಲ, ಒಳ್ಳೇ ಗಾಯಕರೂ ಹೌದು.  ಕೊನೆಯ ದಿನಗಳವರೆಗೂ ನಟಿಸುತ್ತಲೇ ಇದ್ದರು. ಸರಳವಾಗಿ ಬದುಕಿದ ಸುದರ್ಶನ್‌ ಇಲ್ಲ ಎಂಬ ನೋವು ಕನ್ನಡ ಚಿತ್ರರಂಗಕ್ಕಿದೆ.
– ಸಾ.ರಾ. ಗೋವಿಂದು, ಫಿಲ್ಮ್ ಚೇಂಬರ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next