“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕೊಡುಗೈ ರಾಮಣ್ಣ ರೈ’ ಚಿತ್ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಅನಂತ್ ನಾಗ್, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಳಕಳಿ.
ಇತ್ತೀಚೆಗೆ ನಡೆದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕೊಡುಗೈ ರಾಮಣ್ಣ ರೈ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದ ನಂತರ ಮಾಧ್ಯಮದವರ ಜೊತೆಗೆ ಮಾತನಾಡುತ್ತಾ, “ಇದೊಂದು ಮನರಂಜನಾತ್ಮಕ ಚಿತ್ರ. ಮನರಂಜನೆ ಜೊತೆಗೆ ಕನ್ನಡದ ಬಗೆಗಿನ ಕಳಕಳಿ ಈ ಚಿತ್ರದಲ್ಲಿ. ಗಡಿ ಪ್ರದೇಶ ಮತ್ತು ಅಲ್ಲಿನ ಸಮಸ್ಯೆಗಳೇನು ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾನು ಸಹ ಅದೇ ಪ್ರಾಂತ್ಯದಲ್ಲಿ ಬಾಲ್ಯವನ್ನು ಕಳೆದವನು.
ಕಾಸರಗೋಡು, ಕೇರಳಕ್ಕೆ ಸೇರ್ಪಡೆಯಾದಾಗ ನನಗೆ ಏಳೆಂಟು ವರ್ಷವಿರಬಹುದು. ಇವತ್ತು ಕನ್ನಡ ಬೋರ್ಡ್ ಇದ್ದಿದ್ದು, ನಾಳೆ ಇಲ್ಲ ಅಂದರೇನರ್ಥ? ಈ ಬಗ್ಗೆ ಹಿರಿಯರನ್ನು ಕೇಳಿದಾಗ, “ನಿಂಗೆ ಗೊತ್ತಾಗಲ್ಲಪ್ಪ’ ಎಂಬ ಉತ್ತರ ಬಂದಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಅನಂತ್ ನಾಗ್.
ಇನ್ನು ಅನಂತ್ ನಾಗ್ ಅವರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ನೆಲಕಚ್ಚಿತು. ಅದರ ಜೊತೆಗೆ ಅದು “ದಿ ಇಂಟರ್ನಿ’ ಎಂಬ ಹಾಲಿವುಡ್ ಚಿತ್ರದ ನಕಲು ಎಂಬ ವಿಷಯ ಎಲ್ಲರ ನಿರೀಕ್ಷೆಗಳಿಗೂ ತಣ್ಣೀರೆರಚಿದಂತಾಗಿತ್ತು. ಈ ಕುರಿತು ಮಾತನಾಡುವ ಅವರು, ಆ ಕುರಿತು ಸ್ವಲ್ಪ ಲಕ್ಷ್ಯ ವಹಿಸಬೇಕಿತ್ತು ಎನ್ನುತ್ತಾರೆ. “ನನ್ನದೇ ನಿರ್ಲಕ್ಷ್ಯದಿಂದ ಹಾಗಾಯ್ತು. ಸಾಮಾನ್ಯವಾಗಿ ರೀಮೇಕ್ ಅಂತ ಬಂದರೆ ನಾನು ಒಪ್ಪುವುದಿಲ್ಲ. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ತಂಡದವರು ತಾವು ಇಂಗ್ಲೀಷ್ ಚಿತ್ರದಿಂದ ಸ್ಫೂರ್ತಿ ಪಡೆದು ಚಿತ್ರ ಮಾಡುತ್ತಿರುವುದಾಗಿ ಹೇಳಿದ್ದರು. ಸಿಡಿಯನ್ನೂ ತಂದಿದ್ದರು. ನಾನೊಮ್ಮೆ ಆ ಚಿತ್ರವನ್ನು ನೋಡಬೇಕಿತ್ತು.
ನೋಡಿದರೆ ಅದೇ ಮನಸ್ಸಿನಲ್ಲುಳಿಯುತ್ತದೆ ಎನ್ನುವ ಕಾರಣಕ್ಕೆ ನಾನು ಚಿತ್ರ ನೋಡುವುದಕ್ಕೇ ಹೋಗಲಿಲ್ಲ. ಚಿತ್ರ ಬಿಡುಗಡೆಯಾಗಿ ವಿಮರ್ಶೆ ನೋಡಿದ ಮೇಲೆಯೇ ಅದು ಫ್ರೆàಮ್ ಟು ಫ್ರೆàಮ್ ರೀಮೇಕ್ ಅಂತ ಗೊತ್ತಾಗಿದ್ದು. ಬಹುಶಃ ಫ್ರೆàಮ್ ಟು ಫ್ರೆàಮ್ ಅಂತ ಗೊತ್ತಿದ್ದರೆ ಮಾಡುತ್ತಿರಲಿಲ್ಲ. ಅವರು ಸಿಡಿ ತಂದಾಗ ನಾನು ನೋಡಬೇಕಿತ್ತು. ನಾನು ನನ್ನ ಹಠದಲ್ಲಿ ಆ ಚಿತ್ರ ನೋಡಲಿಲ್ಲ. ರಾಬರ್ಟ್ ಡಿ ನೀರೋ ಮಾಡಿದ ಪಾತ್ರ ಮನಸ್ಸಿನಲ್ಲಿ ಕೂತರೆ, ಅದು ಸಬ್‌ಕಾನ್ಶಿಯಸ್ ಆಗಿ ಕಾಡುತ್ತಿರುತ್ತದೆ ಅಂತ ನೋಡಲಿಲ್ಲ. ಸ್ವಲ್ಪ ಆಸಕ್ತಿ ವಹಿಸಿ ನೋಡಬೇಕಿತ್ತು’ ಎನ್ನುತ್ತಾರೆ ಅನಂತ್ ನಾಗ್.
“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕೊಡುಗೈ ರಾಮಣ್ಣ ರೈ’ ಅಲ್ಲದೆ “ಕವಲು ದಾರಿ’ ಚಿತ್ರವೂ ಮುಗಿಯುವ ಹಂತಕ್ಕೆ ಬಂದಿದೆಯಂತೆ. ಈ ಮಧ್ಯೆ ಒಂದಿಷ್ಟು ಸಿನಿಮಾಗಳ ಆಫರ್ ಬರುತ್ತಿದ್ದು, ಇತ್ತೀಚೆಗೆ ಯಾರೋ ಮಲಯಾಳಂ ಸಿಡಿ ತೆಗೆದುಕೊಂಡು ಬಂದಿದ್ದರಂತೆ. ಆದರೆ, ಅನಂತ್ ನಾಗ್ ಅವರು ಚಿತ್ರದಲ್ಲಿ ನಟಿಸುವುದಕ್ಕೆ ನಿರಾಕರಿಸಿದ್ದಾರೆ. “ತಗೊಂಡು ಹೋಗಿ ಅಂತ ಕಳಿಸಿದೆ. ಇಷ್ಟಕ್ಕೂ ರೀಮೇಕ್ ಮಾಡುವ ಅವಶ್ಯಕತೆಯಾದರೂ ಏನಿದೆ’ ಎಂಬುದು ಅವರ ಪ್ರಶ್ನೆ.