Advertisement

ಅಹವಾಲು ಸಭೆಯಲ್ಲಿ ಕಾರ್ಯಕರ್ತರದ್ದೇ ಅಬ್ಬರ!

09:24 PM Aug 03, 2019 | Team Udayavani |

ತಿ.ನರಸೀಪುರ: ವರಣಾ ಶಾಸಕ ಡಾ|ಯತೀಂದ್ರ ಸಿದ್ದರಾಮಯ್ಯ ಅವರು ಸಾರ್ವಜನಿಕರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆ ಕರೆದಿದ್ದರು. ಆದರೆ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅವರನ್ನು ಸುತ್ತುವರಿದಿದ್ದರಿಂದ ಸಭೆ ಗಿಜಿಗಿಡುತ್ತಿತ್ತು. ಜನರಿಗೆ ಶಾಸಕರನ್ನು ಭೇಟಿ ಮಾಡಲು ಅವಕಾಶವೇ ಸಿಗಲಿಲ್ಲ, ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸಲು ಆಗಮಿಸಿದ್ದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು.

Advertisement

ವರುಣಾ ಶಾಸಕ ಡಾ.ಎಸ್‌.ಯತೀಂದ್ರ ಬಂದ ಪುಟ್ಟ, ಹೋದ ಪುಟ್ಟ ಎಂಬಂತಿತ್ತು ತಾಲೂಕು ಕಚೇರಿಯಲ್ಲಿ ಅವರ ಕಾರ್ಯವೈಖರಿ. ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಶಾಸಕರ ಕಚೇರಿಯಲ್ಲಿ ವರುಣಾ ತಾಲೂಕಿನ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಅಧಿಕಾರಿಗಳ ಸಭೆಯನ್ನು ನಡೆಸಿದ ಶಾಸಕ ಡಾ.ಎಸ್‌.ಯತೀಂದ್ರ ಅವರ ಕಾರ್ಯವೈಖರಿ ಜನರಿಗೆ ಬೇಸರ ತಂದಿತು.

ಕಾರ್ಯಕರ್ತರ ಅಬ್ಬರ: ಸಭೆಯಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದುಕೊಂಡಿದ್ದ ಸಾರ್ವಜನಿಕರ್ಯಾರೂ ಶಾಸಕರತ್ತ ಸುಳಿಯಲಿಲ್ಲ. ಅವರತ್ತು ಬರಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅವರ ಕಾಂಗ್ರೆಸ್‌ ಕಾರ್ಯಕರ್ತರ ಪಡೆ ಡಾ.ಎಸ್‌.ಯತೀಂದ್ರ ಅವರನ್ನು ಸುತ್ತುವರಿದಿತ್ತು. ಅವರನ್ನು ಸುತ್ತುವರಿದಿದ್ದವರನ್ನೇ ಬಿಟ್ಟರೆ ಮತ್ಯಾವ ಮುಖಂಡರು ಅಥವಾ ಸಾರ್ವಜನಿಕರು ಹೋಗಲು ಸಾಧ್ಯವಾಗದಷ್ಟು ದಿಗ್ಬಂಧನ ಹಾಕಿದಂತಿತ್ತು. ಸಭೆ ಅವ್ಯವಸ್ಥೆಯಿಂದ ಕೂಡಿದ್ದರಿಂದ ಶಾಸಕರ ಮೃದು ಧೋರಣೆ ಕುರಿತು ಜನರು ಅಸಹಾಯಕತೆ ವ್ಯಕ್ತಪಡಿಸಿದರು.

ಬೆರಳೆಣಿಕೆ ಅಧಿಕಾರಿಗಳು: ಶಾಸಕರ ಆಗಮನದ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪೈಕಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಿದ್ದರು. ಶಾಸಕರು ಇರುವವರೆಗೂ ಕಾದು ಕುಳಿತು, ಶಾಸಕರ ನಿರ್ಗಮನವಾಗುತ್ತಿದ್ದಂತೆ ಬಂದ ದಾರಿಗೆ ಸುಂಕವೂ ಇಲ್ಲದೆ, ಕೆಲಸವೂ ಇಲ್ಲದೇ ಅಧಿಕಾರಿಗಳು ವಾಪಸ್‌ ತೆರಳಿದ‌ರು. ಶಾಸಕರ ಎದುರು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರೇ ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡದ್ದು ಕೂಡ ವಿಶೇಷವಾಗಿತ್ತು. ಮಾಧ್ಯಮದವರು ಶಾಸಕರಿಗಾಗಿ ಕಾದು ಕುಳಿತಿದ್ದರೂ ಬಂದ ವಿಚಾರವನ್ನಾಗಲಿ, ಹೋಗುತ್ತಿರುವುದನ್ನಾಗಲಿ ಹೇಳಲೇ ಇಲ್ಲ.

ಬಹಿರಂಗವಾಗಿ ಬೇಸರ: ತಾಪಂ ಸದಸ್ಯ ಎಂ.ರಮೇಶ್‌ ಅವರು ಕೂಡ ಇದೇ ಸಂದರ್ಭದಲ್ಲಿ ತಮ್ಮ ಅಹವಾಲು ನೀಡಲು ಅವಕಾಶ ಸಿಗದಿದ್ದರಿಂದ ಬಹಿರಂಗವಾಗಿಯೇ ಅಸಮಧಾನವನ್ನು ವ್ಯಕ್ತಪಡಿಸಿದರು. ಮತ್ತೂರ್ವ ಹಿರಿಯ ಮುಖಂಡ ಬಿ.ಮಂಟೇಲಿಂಗಪ್ಪ ಕೂಡ ಕೆಲವರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

Advertisement

ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಸುಂದರಮ್ಮ ಮಾತನಾಡಿ, ಈ ಬಾರಿ ತಾಲೂಕಿನಾದ್ಯಂತ ಮುಂಗಾರು ಸಂಪೂರ್ಣವಾಗಿ ಕ್ಷೀಣಿಸಿರುವುದರಿಂದ ತಾಲೂಕನ್ನು ಬರ‌ಪೀಡಿತ ಪ್ರದೇಶವೆಂದು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಶಾಸಕ ಡಾ.ಎಸ್‌.ಯತೀಂದ್ರ ಅವರ ಗಮನಕ್ಕ ತಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಪಿ.ಎನ್‌.ನಾಗಪ್ರಶಾಂತ್‌, ತಾಪಂ ಕಾರ್ಯನಿರ್ವಹಕ ಅಧಿಕಾರಿ ಎಂ.ಜೆ.ರಾಜೇಶ್‌, ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ನಿಂಗಯ್ಯ, ಪುರಸಭೆ ಮುಖ್ಯಾಧಿಕಾರಿ ಅಶೋಕ್‌, ಸಿಡಿಪಿಒ ಬಿ.ಎನ್‌.ಬಸವರಾಜು, ಪುರಸಭಾ ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಎನ್‌.ಸೋಮು, ಎಸ್‌.ಮದನ್‌ ರಾಜ್‌, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಎಂ.ಮಹದೇವಣ್ಣ, ವರುಣಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಕುಪ್ಯ ಭಾಗ್ಯಮ್ಮ, ಗ್ರಾಪಂ ಉಪಾಧ್ಯಕ್ಷ ಚಂದ್ರಮ್ಮ, ಮುಖಂಡರಾದ ಶ್ರೀಕಂಠ, ಗುರುಸ್ವಾಮಿ, ಬನ್ನಹಳ್ಳಿಹುಂಡಿ ಪುಟ್ಟಸುಬ್ಬಯ್ಯ ಇತರರು ಹಾಜರಿದ್ದರು.

ಯತೀಂದ್ರ ಮೃದು ಧೋರಣೆ: ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ಮೃದು ಧೋರಣೆಯಿಂದ ಈ ಸಭೆ ಅವ್ಯವಸ್ಥೆಯ ಆಗರವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾರ್ಯಕರ್ತರು ಹಾಗೂ ಮುಖಂಡರು ಶಾಸಕರನ್ನು ಸುತ್ತುವರಿದಿರುತ್ತಾರೆ. ಹೀಗಾಗಿ ಜನರು ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಭೇಟಿ ಮಾಡಲು ಅವಕಾಶ ಸಿಗುವುದಿಲ್ಲ. ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಸಾರ್ವಜನಿಕ ಕೆಲಸಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ನಿರ್ಲಕ್ಷ್ಯವಹಿಸುತ್ತಾರೆ.

ಶಾಸಕ ಯತೀಂದ್ರ ಅವರು ತಮ್ಮ ಮೃದು ಧೋರಣೆಯನ್ನು ಬದಲಾಯಿಸಿಕೊಂಡು ಖಡಕ್‌ ಆದೇಶಗಳ ಮೂಲಕ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರನ್ನು ಹದ್ದುಬಸ್ತಿನಲ್ಲಿಟ್ಟು ಜನರ ಕೆಲಸ ಕಾರ್ಯಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪುತ್ರನಿಗೆ ತಂದೆ ಸಲಹೆ: ವರುಣಾದಲ್ಲಿ ಹಿಂದೊಮ್ಮೆ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಯತೀಂದ್ರ ಮೃಧು ಧೋರಣೆ ಕೈಬಿಟ್ಟು ತುಸು ಕಠಿಣ ಕ್ರಮಗಳ ಮೂಲಕ ಅಧಿಕಾರಿಗಳಿಂದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

* ಟಿ.ಎನ್‌.ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next