Advertisement

ಮಾವೋ ಮ್ಯಾನ್ಮಾರ್‌ ಸಂಚು

06:00 AM Sep 01, 2018 | Team Udayavani |

ಮುಂಬೈ/ಪುಣೆ: ನಿಷೇಧಿತ ಮಾವೋವಾದಿ ಸಂಘಟನೆಗಳು ಮ್ಯಾನ್ಮಾರ್‌ನಲ್ಲಿ ಸಭೆ ನಡೆಸಿದ್ದವು. ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳ ಜತೆಗೆ ಶಸ್ತ್ರಾಸ್ತ್ರ ಪಡೆಯುವುದು ಮತ್ತು ತರಬೇತಿ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಈ ಅಂಶ ಜೂನ್‌ನಲ್ಲಿ ರೋಣಾ ವಿಲ್ಸನ್‌ ಮನೆಯಿಂದ ವಶಪಡಿಸಿಕೊಳ್ಳಲಾಗಿದ್ದ ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು ಎಂದು ಪುಣೆ ಪೊಲೀಸರು ಹೇಳಿದ್ದಾರೆ. ಜತೆಗೆ ದೇಶದ ವಿರುದ್ಧ ಯುದ್ಧ ಸಾರಲು ಸಿದ್ಧತೆ ಮಾಡಿಕೊಂಡಿದ್ದರು ಎಂಬ ಆಘಾತಕಾರಿ ಸಂಗತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ.

Advertisement

ಮಣಿಪುರದ ಪೀಪಲ್ಸ್‌ ಲಿಬರೇಷನ್‌ ಆರ್ಮಿ, ನಿಷೇಧಿತ ಸಿಪಿಐ ಮಾವೋವಾದಿ ಮತ್ತು ಕಾಶ್ಮೀರದ ವಿವಿಧ ಸಂಘಟನೆಗಳ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಗುಪ್ತಚರ ಮೂಲಗಳು ಖಚಿತಪಡಿಸಿವೆ ಎಂದು “ಝೀ ನ್ಯೂಸ್‌’ ವರದಿ ಮಾಡಿದೆ. 

ಸಭೆಯಲ್ಲಿ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಶಸ್ತ್ರಾಸ್ತ್ರ, ಆಯುಧಗಳ ಪೂರೈಕೆ ಮತ್ತು  ತರಬೇತಿಯನ್ನು ಸಿಪಿಐ ಮಾವೋವಾದಿಗಳಿಗೆ ನೀಡಲು ಒಪ್ಪಿಕೊಂಡಿದೆ. ಭಾರತ-ನೇಪಾಳ, ಭಾರತ-ಮ್ಯಾನ್ಮಾರ್‌ ಗಡಿಗಳ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರ  ಕಳ್ಳಸಾಗಣೆ ಮಾಡುವುದಕ್ಕೆ ಇರುವ ಮೂರು ಕಳ್ಳ ದಾರಿಗಳನ್ನೂ ಗುರುತಿಸಲಾಗಿದೆ ಎಂದು ಚಾನೆಲ್‌ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಭಾರೀ ಸಂಚು- ಪೊಲೀಸರು: ಇದೇ ವೇಳೆ ಪುಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪರಮ್‌ವೀರ್‌ ಸಿಂಗ್‌ ಅವರು, ಕ್ರಾಂತಿಕಾರಿ ಲೇಖಕ ಪಿ.ವರವರ ರಾವ್‌ ಸೇರಿದಂತೆ ಐವರು ಪ್ರಧಾನಿ ಮೋದಿ ಆಡಳಿತ ಕೊನೆಗೊಳಿಸಲು ನಿರ್ಧರಿಸಿದ್ದರು. ಅದಕ್ಕೆ  ರಾಜೀವ್‌ ಗಾಂಧಿ ಹತ್ಯೆ ಮಾದರಿಯನ್ನು ಅನುಸರಿಸಲು ಮುಂದಾಗಿದ್ದರು ಎಂದಿದ್ದಾರೆ.

ಸಂಚಿಗೆ ಸಂಬಂಧಿಸಿದಂತೆ ಈಗಾಗಲೇ ಬಂಧಿತನಾಗಿರುವ ರೋನಾ ವಿಲ್ಸನ್‌ ಈ ಅಂಶವನ್ನು ಇ-ಮೇಲ್‌ ಮೂಲಕ ಮಾವೋವಾದಿ ನಾಯಕನಿಗೆ ತಿಳಿಯಪಡಿಸಿದ್ದಾನೆ ಎಂದು ಸಿಂಗ್‌ ಹೇಳಿದ್ದಾರೆ. ಭೀಮ ಕೋರೆಗಾಂವ್‌ ಹಿಂಸಾಚಾರ ಮತ್ತು ಇತರ ಸಂಚುಗಳ ಬಗ್ಗೆ ಸಾವಿರಾರು ಪುಟಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಅವರ ಯೋಜನೆಗಳನ್ನು ವಿವರಿಸಿದ್ದಾರೆ ಎಂದು ಸಿಂಗ್‌ ಹೇಳಿದ್ದಾರೆ.

Advertisement

ಆ.28ರಂದು ಪೊಲೀಸರು ಹೋರಾಟಗಾರರಾದ ಪಿ.ವರವರ ರಾವ್‌, ಸುಧಾ ಭಾರದ್ವಾಜ್‌, ವೆರ್ನಾನ್‌ ಗೊನ್ಸಾಲ್ವಿಸ್‌, ಅರುಣ್‌ ಪಿರೇರಾ, ಗೌತಮ್‌ ನವ್ಲಾಕರ್‌ರನ್ನು ಬಂಧಿಸಿದ್ದರು. ಸುಪ್ರೀಂಕೋರ್ಟ್‌  ಆ.29ರಂದು ಬಂಧಿತರಿಗೆ ಸೆ.6ರ ವರೆಗೆ ಗೃಹ ಬಂಧನ ವಿಧಿಸಿ ಆದೇಶಿಸಿತ್ತು. ಈ ಸಂದರ್ಭದಲ್ಲಿಯೇ ಪುಣೆ ಪೊಲೀಸರ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹೀಗಾಗಿ, ಪೊಲೀಸರು ಶುಕ್ರವಾರ ಮತ್ತೆ ಸುದ್ದಿಗೋಷ್ಠಿ ನಡೆಸಿ ತಮ್ಮ ಕಾರ್ಯಾಚರಣೆ ಮತ್ತು ಬಂಧಿತರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. 

“ಮಾವೋವಾದಿಗಳ ಕೇಂದ್ರ ಸಮಿತಿ ಈ ಎಲ್ಲಾ ಚಟುವಟಿಕೆಗಳ ಬಗ್ಗೆ ಪಾಸ್‌ವರ್ಡ್‌ ಆಧರಿತ ಸಂದೇಶಗಳನ್ನು ಕೊರಿಯರ್‌ ಮೂಲಕ ರವಾನಿಸಿತ್ತು. ಸದ್ಯ ನಮ್ಮಲ್ಲಿರುವ ಸಾಕ್ಷ್ಯಗಳನುಸಾರ ಬಂಧಿತರಿಗೆ ಮಾವೋವಾದಿಗಳ ಜತೆ ನಿಕಟ ಸಂಪರ್ಕ ಇತ್ತು ಎಂದು ಸಾಬೀತುಮಾಡಲು ಸಾಕು’ ಎಂದು ಸಿಂಗ್‌ ಹೇಳಿದ್ದಾರೆ. 

ಜೆಎನ್‌ಯು ವಿದ್ಯಾರ್ಥಿಗಳ ಬಳಕೆ
ನವದೆಹಲಿಯಲ್ಲಿರುವ ಜವಾಹರ್‌ಲಾಲ್‌ ನೆಹರೂ ವಿವಿ ವಿದ್ಯಾರ್ಥಿಗಳನ್ನು ಉಪಯೋಗಿಸಿ ಸದ್ಯ ಆಯ್ಕೆಯಾಗಿರುವ ಚುನಾಯಿತ ಸರ್ಕಾರವನ್ನು ಕೆಡವಿ ಹಾಕಲು ಅವರು ಯೋಚಿಸಿರುವ ಬಗ್ಗೆಯೂ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿದೆ ಎಂದಿದ್ದಾರೆ. ಇದರ ಜತೆಗೆ ವಶಪಡಿಸಿಕೊಳ್ಳಲಾಗಿರುವ ಡಿಸ್ಕ್ನಲ್ಲಿ ರಾಕೆಟ್‌ ಲಾಂಚರ್‌ ಬಳಕೆ ಬಗ್ಗೆ ಒಂದು ಕರಪತ್ರವೂ ಇತ್ತು ಎಂದು ಪರಮವೀರ್‌ ಸಿಂಗ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next