Advertisement

ಬಿಸಿಲಿನ ಝಳಕ್ಕೆ ಕಾರ್ಯಕರ್ತರು, ಮುಖಂಡರು ಹೈರಾಣು!

03:34 PM May 05, 2018 | Team Udayavani |

ಪುತ್ತೂರು: ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಬಿಸಿಲಿನ ಝಳ ಸಂಪೂರ್ಣ ಸೋಲಿಸಿದೆಯೇ ಎಂಬ ಅನುಮಾನ ಕುಂಬ್ರ, ಬಡಗನ್ನೂರು ಭಾಗದ ಜನರದ್ದು.

Advertisement

ಜನರು ಈ ರೀತಿ ಮಾತನಾಡುವುದಕ್ಕೂ ಕಾರಣ ಇದೆ. ರಾಷ್ಟ್ರೀಯ ಪಕ್ಷಗಳ ಮುಖಂಡರು ಹೇಳಿಕೊಂಡಿರುವಂತೆ, ಮನೆ ಮನೆ ಭೇಟಿ ಅಭಿಯಾನ ಎರಡು ರೌಂಡ್‌ ಪೂರ್ಣಗೊಂಡಿದೆ. ಈ ಅಭಿಯಾನದ ಪ್ರಕಾರ ಎಲ್ಲ ಮನೆ ಬಾಗಿಲಿಗೆ ತೆರಳಿ ಮತ ಯಾಚಿಸಬೇಕು. ಆದರೆ ಕೆಲವು ಮತದಾರರ ಪ್ರಕಾರ, ಇನ್ನೂ ಹಲವು ಮನೆಗಳಿಗೆ ಮುಖಂಡರು, ಕಾರ್ಯಕರ್ತರು ಬಂದೇ ಇಲ್ಲ.

ಆಧುನಿಕ ಕಾಲಘಟ್ಟದಲ್ಲಿ ಎಲ್ಲರಿಗೂ ತಮ್ಮ ಮನೆ, ಕುಟುಂಬದ್ದೇ ಚಿಂತೆ. ಇನ್ನು ಊರಿನ ಬಗ್ಗೆ ಆಲೋಚಿಸಲು ಪುರುಸೊತ್ತು ಎಲ್ಲಿದೆ? ಈ ಕಾರಣದಿಂದ ನಾಯಕರು ಉತ್ಸಾಹ ಕಳೆದು ಕೊಂಡಿದ್ದಾರೆಯೇ ಎಂಬಂತೆ ಭಾಸವಾಗುತ್ತಿದೆ ಎನ್ನುತ್ತಾರೆ ಪರ್ಪುಂಜದ ಉದಯ್‌.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 11 ಮಂದಿ ಅಭ್ಯರ್ಥಿಗಳು ಆಖಾಡದಲ್ಲಿ ಇದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕ್ಷೇತ್ರದಿಂದ ಇಷ್ಟು ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ ಎಷ್ಟೋ ಜನರಿಗೆ ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ಉಳಿದ ಯಾವುದೇ ಅಭ್ಯರ್ಥಿಗಳ ಬಗ್ಗೆ ತಿಳಿದೇ ಇಲ್ಲ. ಒಂದಿಬ್ಬರು ಜಾಹೀರಾತು ನೀಡುತ್ತಿದ್ದಾರೆ. ಆ ಮೂಲಕ ಜನರನ್ನು ತಲುಪಬಹುದು ಎನ್ನುವುದು ಅವರ ತಪ್ಪು ನಂಬಿಕೆ ಎನ್ನುತ್ತಾರೆ ಕುಂಬ್ರದ ಸೂರಜ್‌.

ಈ ವರ್ಷ ಅಬ್ಬರದ ಪ್ರಚಾರಕ್ಕೆ ಅವಕಾಶವೇ ನೀಡಿಲ್ಲ. ಬ್ಯಾನರ್‌, ಭಿತ್ತಿಪತ್ರ ಅಳವಡಿಕೆಗೆ ಅನುಮತಿ ಇಲ್ಲ. ಆದ್ದರಿಂದ ಪ್ರಚಾರದ ರಂಗು ಅಷ್ಟಾಗಿ ಕಾಣಿಸುತ್ತಿಲ್ಲ. ಪುತ್ತೂರು ಗ್ರಾಮಾಂತರ ಭಾಗದಲ್ಲಿ ಎಲ್ಲ ರಸ್ತೆಗಳು ಅಭಿವೃದ್ಧಿಗೊಂಡಿವೆ.
ಎಲ್ಲ ರಸ್ತೆಗಳಲ್ಲೂ ಶಕುಂತಳಾ ಶೆಟ್ಟಿ ಹೆಸರು ಕಂಡುಬರುತ್ತಿವೆ. ಇದನ್ನು ಹೈಜಾಕ್‌ ಮಾಡಲು ಸಂಜೀವ ಮಠಂದೂರು ಅಥವಾ ಇತರ ಅಭ್ಯರ್ಥಿಗಳು ಪ್ರಯತ್ನಿಸದೇ ಇರುವುದು ವಿಪರ್ಯಾಸ ಎನ್ನುತ್ತಾರೆ ಅಶ್ರಫ್‌.

Advertisement

ಜಾಲತಾಣದ ಚರ್ಚೆ
ರಾಷ್ಟ್ರೀಯ ನಾಯಕರು ಕನ್ನಡದಲ್ಲಿ ಭಾಷಣ ಪ್ರಾರಂಭಿಸುವ ಬಗ್ಗೆಯೂ ವಾದ- ವಿವಾದ ಕೇಳಿಬಂತು. ಕನ್ನಡ ಗೊತ್ತಿಲ್ಲದೇ ಇರುವವರು ಮಾತನಾಡಲೇ ಬಾರದು.

ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿ ಅವರು ಕನ್ನಡದಲ್ಲಿ ಮಾತನಾಡುವ ಅಗತ್ಯವೇ ಇಲ್ಲ. ರಾಹುಲ್‌ ಗಾಂಧಿ ಕನ್ನಡವನ್ನು ಸಂಪೂರ್ಣ ಜಜ್ಜಿ ಹಾಕಿದರು ಎಂದು ಒಬ್ಬರು ಹೇಳಿದರೆ, ನರೇಂದ್ರ ಮೋದಿಯವರೂ ಕಮ್ಮಿಯಿಲ್ಲ.
ಅಕ್ಷರ ಉಚ್ಚಾರಣೆಯಲ್ಲಿ ದೋಷವಿತ್ತು ಎಂದು ಇನ್ನೊಬ್ಬರು ಹೇಳಿದರು. ಇವೆರಡೂ ವಿಷಯಗಳು ಜಾಲತಾಣದಲ್ಲಿ ವೈರಲ್‌ ಆಗಿವೆ. ಆದರೆ ರಾಹುಲ್‌ ಗಾಂಧಿ ವೀಡಿಯೋವನ್ನು ಹೆಚ್ಚು ಜನರು ನೋಡಿದ್ದಾರೆ. ಇದಕ್ಕೆ ಕಾರಣ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಅಪ್‌ ಡೇಟ್‌ ಆಗಿರುವುದು ಎಂಬ ವಿಶ್ಲೇಷಣೆಯನ್ನು ಮಾಡಿದರು.

ಮಾರಾಟ ಇಲ್ಲ 
ಈ ವರ್ಷ ಅಕ್ರಮಗಳು ತುಂಬಾ ಕಡಿಮೆ. ಚುನಾವಣೆ ನಿಮಿತ್ತ ಅಧಿಕಾರಿಗಳು ಹೆಚ್ಚು ಅಲರ್ಟ್‌ ಆಗಿದ್ದಾರೆ. ಆದ್ದರಿಂದ ಮತ ಮಾರಾಟ ಆಗುವ ಸಂಭವ ತುಂಬಾ ಕಡಿಮೆ ಇರಬಹುದು. ಅಥವಾ ಆಗದೇ ಇರಲೂಬಹುದು.
-ಶಿವಪ್ರಸಾದ್‌ ಬಡಗನ್ನೂರು

ಹವಾ ಇಲ್ಲ 
ಆದರೆ ಎಲ್ಲಿಯೂ ಮುಕ್ತವಾಗಿ ಪ್ರಚಾರ ಕಾರ್ಯ ನಡೆಸುತ್ತಿಲ್ಲ ಎನ್ನುವುದು ತಿಳಿದು ಬರುತ್ತಿದೆ. ಕಾರವಾರ ಭಾಗಕ್ಕೆ ಹೋಗಿದ್ದೆ. ಎಲ್ಲ ಕಡೆಯೂ ಪಕ್ಷದ ಶಾಲು ಹಾಕಿಕೊಂಡ ಕಾರ್ಯಕರ್ತರು, ಮುಖಂಡರೇ ಕಾಣಿಸುತ್ತಿದ್ದರು. ಆದರೆ ಪುತ್ತೂರು ಗ್ರಾಮಾಂತರ ಭಾಗದಲ್ಲಿ ಅಷ್ಟು ದೊಡ್ಡ ಹವಾ ಖಂಡಿತಾ ಇಲ್ಲ.
-ಜಯಾ ಕನಕಮಜಲು

 ಗಣೇಶ ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next