Advertisement

ವರ್ಕನಳ್ಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ: ತಹಶೀಲ್ದಾರ್‌ಗೆ ಕಾರ್ಯಕರ್ತರ ಮನವಿ

01:00 PM Dec 10, 2019 | Suhan S |

ಯಾದಗಿರಿ: ಜಿಲ್ಲಾ ಕೇಂದ್ರಕ್ಕೆ ಸಮೀಪವಿರುವ ವರ್ಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಹದೆಗೆಟ್ಟ ರಸ್ತೆ ಕೂಡಲೇ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆ ಕಚೇರಿಗೆ ಬೇಲಿ ಹಚ್ಚಿ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಟಿ.ಎನ್‌. ಭೀಮುನಾಯಕ, ಜಿಲ್ಲಾ ಕೇಂದ್ರಕ್ಕೆ ಸಮೀಪದ ವರ್ಕನಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ತುಂಬಿದೆ. ಅದರ ಮಧ್ಯೆ ರಸ್ತೆಯಲ್ಲಿ ಗುಂಡಿ ಬಿದ್ದು ದಾರಿ ಯಾವುದು ಎಂಬುದನ್ನು ಗುರುತಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೈಲಾಪುರಕ್ಕೆ ಸಂಪರ್ಕ ಕಲ್ಪಿಸುವುದರ ಜತೆಗೆ ಮಸ್ಕನಳ್ಳಿ, ಹಳಿಗೇರಾ, ವರ್ಕನಳ್ಳಿ, ತಾಂಡಾ, ಆರ್‌. ಹೊಸಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಹೋಗುವ ಸಂಪರ್ಕ ರಸ್ತೆಯಾಗಿದೆ. ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ತಮ್ಮ ವಾಹನಗಳೊಂದಿಗೆ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಅಲ್ಲದೇ ರಸ್ತೆ ಅಕ್ಕಪಕ್ಕದಲ್ಲಿ ಸರ್ಕಾರವೇ ಅನುಮತಿ ನೀಡಿ ಸೇಫರ್‌ ಜೋನ್‌ ಕಂಕರ್‌ ಮಷಿನ್‌ ಮತ್ತು ಬ್ಲಾಸ್ಟಿಂಗ್‌ ಗಾಗಿ ಅನುಮತಿ ನೀಡಿದೆ.

ಭಾರಿ ಗಾತ್ರದ ವಾಹನಗಳು ಸಾವಿರಾರು ದಿನನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದೆ ಎಂದು ದೂರಿದರು. ರಸ್ತೆಯಲ್ಲಿ ಈಗಾಗಲೇ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ದಿನನಿತ್ಯ ಸಣ್ಣಪುಟ್ಟ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಲೇ ಇರುತ್ತವೆ. ಇಂತಹ ರಸ್ತೆ ದುರಸ್ತಿಗಾಗಿ ಯಾವೊಬ್ಬ ಜನಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ದುರಸ್ತಿಗಾಗಿ ಹಲವು ದಿನಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳಿಗೂ ಹಾಗೂ ಮುಖ್ಯಮಂತ್ರಿಗಳಿಗೆ ಯಾದಗಿರಿ ಪ್ರವಾಸಕ್ಕೆ ಬಂದಾಗ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಬೇಕಾಬಿಟ್ಟಿಯಾಗಿ ಅವಶ್ಯಕತೆ ಇಲ್ಲದ ಕಡೆ, ಗುಣಮಟ್ಟದ ರಸ್ತೆ ಮೇಲೆ ಕಾಮಗಾರಿ ನಿರ್ವಹಿಸಿ ಹಣ ದುರ್ಬಳಕೆ ಮಾಡುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ ದಿಂದ ರಸ್ತೆ ಸಂಪೂರ್ಣ ಹದೆಗೆಟ್ಟಿದೆ ಎಂದು ದೂರಿದರು.

ಮಕರ ಸಂಕ್ರಮಣದಂದು ಮೈಲಾಪುರ ಮಲ್ಲಯ್ಯ ದೇವರ ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ಜಾತ್ರೆಗೆ ತೆರಳಲು ಇದು ಪ್ರಮುಖ ರಸ್ತೆಯಾಗಿದೆ. ತಕ್ಷಣ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರು ಕಾಮಗಾರಿಗೆ ತಕ್ಷಣ ಟೆಂಡರ್‌ ಕರೆಯಲಾಗುವುದು ಎಂದು ಭರವಸೆ ನೀಡಿದರು.

Advertisement

ಆದರೆ ಜಾತ್ರೆಗೆ ಇನ್ನು ತಿಂಗಳು ಮಾತ್ರ ಬಾಕಿ ಇದೆ. ಅಷ್ಟರಲ್ಲಿ ಟೆಂಡರ್‌ ಪ್ರಕ್ರಿಯೆಯೇ ಮುಗಿ ಯುವುದಿಲ್ಲ. ಆದ್ದರಿಂದ ತಕ್ಷಣ ತೆಗ್ಗುಗಳನ್ನು ತುಂಬಲು ಕ್ರಮ ಕೈಗೊಳ್ಳಬೇಕು ಕಂಕರ್‌ ಹಾಗೂ ಕಲ್ಲುಗಳು ತುಂಬಿದ ಲಾರಿಗಳು ಸಂಚರಿಸುವುದರಿಂದ ರಸ್ತೆ ಹದಗೆಡುತ್ತಿದೆ. ಭಾರಿ ಸರಕು ವಾಹನಗಳ ಮಾರ್ಗ ಬದಲಿಸಿ ರಸ್ತೆ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಭೀಮುನಾಯಕ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರರು ಡಿಸಿ ಗಮನಕ್ಕೆ ತಂದು ಮಾರ್ಗ ಬದಲಾವಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next