Advertisement

ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿ; ಶ್ವೇತಾ ಜೈನ್‌

05:55 PM Mar 14, 2022 | Team Udayavani |

ಬೆಳಗಾವಿ: ಜೈನ ಧರ್ಮೀಯರು ಸಂಘಟಿತರಾಗಬೇಕು. ತಮ್ಮಲ್ಲಿ ಕರಗತವಾಗಿರುವ ನಾಯಕತ್ವ ಗುಣಗಳ ಮೂಲಕ ಸಮಾಜ ಸೇವಾ ಚಟುವಟಿಕೆಗಳನ್ನು ಸಕ್ರಿಯವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ಮೂಡುಬಿದಿರೆಯ ಹಿರಿಯ ನ್ಯಾಯವಾದಿ ಹಾಗೂ ಮಂಗಳೂರಿನ ಭಾರತೀಯ ಮಿಲನ್‌ ಸಹ ಕಾರ್ಯದರ್ಶಿ ಶ್ವೇತಾ ಜೈನ್‌ ಹೇಳಿದರು.

Advertisement

ನಗರದ ಯಳ್ಳೂರ ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯದಲ್ಲಿ ರವಿವಾರ ನಡೆದ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ ದಶಮಾನೋತ್ಸವದಲ್ಲಿ ಅವರು ಮಾತನಾಡಿದರು.

ಜೈನ ಧರ್ಮದ ವೀರ ಪರಂಪರೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಅನೇಕ ಜೈನ ಅರಸರು ಆಳಿದ್ದರು. ಅಂಥ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದು ಬೆಳಗಾವಿಯಲ್ಲಿ ಜೈನ ಮೈತ್ರಿಕೂಟ ಸ್ಥಾಪನೆ ಮಾಡಿಕೊಂಡ ಈ ಸಂಘಟನೆ ಇಂದು ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಸಂಘ-ಸಂಸ್ಥೆ ಕಟ್ಟುವುದು ಸುಲಭ. ಆದರೆ ಮುಂದುವರಿಸಿಕೊಂಡು ಹೋಗುವುದು ಕಷ್ಟ. ಉದ್ಯೋಗ ಸೇರಿದಂತೆ ವಿವಿಧ ಕೆಲಸ-ಕಾರ್ಯಕ್ಕೆ ಇಲ್ಲಿಗೆ ಬಂದು ಸಂಘ-ಸಂಸ್ಥೆ ಕಟ್ಟಿಕೊಂಡು ತಮ್ಮ ಮೂಲ
ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು.

ಜೈನ ಧರ್ಮ ಶ್ರೇಷ್ಠ ಧರ್ಮ. ಸಹಸ್ರಾರು ವರ್ಷಗಳ ಹಿಂದೆಯೇ ಪ್ರತಿಯೊಂದು ಜೀವಿಗಳಿಗೆ ಜೀವ ಇದೆ ಎಂದು ಪ್ರತಿಪಾದಿಸಿದೆ. ಮನಸ್ಸಿಗೆ ನೋವುಂಟು ಮಾಡುವುದು ಹಿಂಸೆ ಎಂದು ಭಗವಾನ್‌ ಮಹಾವೀರರು 2600 ವರ್ಷಗಳ ಹಿಂದೆ ಹೇಳಿದ್ದರು. ಅನ್ಯ ಧರ್ಮೀಯರೂ ಜೈನ ಧರ್ಮ ಶ್ರೇಷ್ಠ ಎಂದು ಹೇಳಿದ್ದಾರೆ. ಆದರೆ ಇಂದು ಜೈನ ಧರ್ಮೀಯರು ತಮ್ಮ ಧರ್ಮದ ಬಗ್ಗೆ ಅರಿತುಕೊಳ್ಳದೇ ನಡೆದುಕೊಳ್ಳುತ್ತಿರುವುದು ಕಳವಳದ ಸಂಗತಿ. ಧರ್ಮಪಾಲನೆ ಮಾಡಬೇಕು.

ನಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಉತ್ತಮ ಸಂಸ್ಕಾರ ನೀಡಿದರೆ ಅವರು ಎಂದಿಗೂ ನಮ್ಮ ಕೈ ಬಿಟ್ಟು ಹೋಗಲಾರರು. ಸಂಸ್ಕಾರ ನೀಡುವ ಕೆಲಸ ಆಗಬೇಕು. ಜೈನರಲ್ಲಿ ನಾಯಕತ್ವ ಗುಣ ಸ್ವಾಭಾವಿಕವಾಗಿದ್ದು, ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಜೈನ ಬಾಂಧವರಿಗೆ ಕಿವಿಮಾತು ಹೇಳಿದರು. ಅಂತರ್‌ ಧರ್ಮ ವಿವಾಹಗಳು ಇತ್ತೀಚೆಗೆ ಜೈನ ಧರ್ಮೀಯರಲ್ಲಿ ಹೆಚ್ಚುತ್ತಿದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುವ ಅಗತ್ಯ ಇದೆ ಎಂದು ಗಮನ ಸೆಳೆದರು.

Advertisement

ಧಾರವಾಡ ಎಸ್‌ಡಿಎಂ ಸೊಸೆ„ಟಿಯ ಕಾರ್ಯದರ್ಶಿ ವಿ. ಜೀವಂಧರ ಕುಮಾರ್‌ ಮಾತನಾಡಿ, ಜೈನರಲ್ಲಿ ಯುವಕರನ್ನು ಸಂಘಟಿಸುವ ಕೆಲಸ ಆಗಬೇಕು. ಇಂಥ ಸಂಘಟನೆಗಳ ಅವಶ್ಯಕತೆ ಇಂದು ಬಹಳ ಇದೆ. ದಕ್ಷಿಣ ಕನ್ನಡ ಜೈನ ಮೈತ್ರಿಕೂಟದಂಥ ಸಂಘಟನೆಗಳಿಗೆ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.

ಬೆಳಗಾವಿಯ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ ಸ್ಥಾಪಕಾಧ್ಯಕ್ಷ ಶಿರ್ಲಾಲು ಬಿ.ಗುಣಪಾಲ ಹೆಗ್ಡೆ ಮಾತನಾಡಿ, ಬೆಳಗಾವಿಯಲ್ಲಿ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟ 12 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ. ಹತ್ತು ಹಲವು ಸಾಮಾಜಿಕ ಕಾರ್ಯ ನಡೆಸಿಕೊಂಡು ಬರುತ್ತಿದೆ. ಒಂದು ಕುಟುಂಬದಂತೆ ಎಲ್ಲಾ ಸದಸ್ಯರು ದುಡಿಯುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿಯೂ ಜೈನ ಮೈತ್ರಿಕೂಟದ ಸೇವಾ ಕಾರ್ಯಗಳು ಸದಾ ಮುಂದುವರಿಯಲಿವೆ ಎಂದು ಹೇಳಿದರು.

ಬೆಳಗಾವಿ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ ಅಧ್ಯಕ್ಷ ಮಹಾವೀರ ಪೂವಣಿ ಅಧ್ಯಕ್ಷತೆ ವಹಿಸಿದ್ದರು. ಎಂ. ಅಜಿತ್‌ ಕುಮಾರ್‌ ಜೈನ್‌- ಶೋಭಾ ಜೈನ್‌ ದಂಪತಿ, ಅಣ್ಣಾಸಾಹೇಬ ಚೌಗುಲೆ- ಸರೋಜಿನಿ ಅಣ್ಣಾಸಾಹೇಬ ಚೌಗುಲೆ ದಂಪತಿಗಳನ್ನು ಸನ್ಮಾನಿಸಲಾಯಿತು. ರತ್ನಾ ಅಜ್ರಿ, ಎಂ.ಅಜಿತ್‌ ಕುಮಾರ್‌ ಜೈನ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next