Advertisement

ಸಹೃದಯಿ..ಕ್ರಿಯಾಶೀಲ ಯುವಕ ಶರತ್‌

03:45 AM Jul 09, 2017 | Team Udayavani |

ಮಂಗಳೂರು: ಪರರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಸಹೃದಯಿ, ಮೃದು ಸ್ವಭಾವದ ಶರತ್‌ ಊರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಕ್ರಿಯಾಶೀಲ ಯುವಕ. ಸಜೀಪಮುನ್ನೂರು ಕಂದೂರು ಬಳಿಯ”ಪಾಡಿ’ ಮನೆಯ ತನಿಯಪ್ಪ ಮಡಿವಾಳ-ನಳಿನಿ ದಂಪತಿಯ ಮೂವರು ಮಕ್ಕಳಲ್ಲಿ ಶರತ್‌ ಕೊನೆಯವರು.

Advertisement

ಇಬ್ಬರು ಸಹೋದರಿಯರು. ಒಬ್ಟಾಕೆಗೆ ಮದುವೆಯಾಗಿದೆ. ಕೃಷಿಯ ಬಗ್ಗೆ ವಿಶೇಷ ಒಲವು ಹೊಂದಿದ್ದ ಶರತ್‌ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸದ ಬಳಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮನೆಯಲ್ಲಿ ಅಡಿಕೆ ತೋಟ ಕೃಷಿಯನ್ನು ನಿರ್ವಹಿಸುವುದರ ಜತೆಗೆ ತಂದೆಯ ಲಾಂಡ್ರಿ ವ್ಯವಹಾರದಲ್ಲೂ ನೆರವಾಗುತ್ತಿದ್ದರು. ಪ್ರಗತಿಪರ ಕೃಷಿಕನಾಗಿ ಗುರುತಿಸಿಕೊಂಡಿದ್ದ ಅವರು ವಿವಿಧ ಜಾತಿಯ ಅಡಿಕೆ ಸಸಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದ ಶ್ರಮಜೀವಿ. ತೋಟದ ಮಧ್ಯೆ ವಿವಿಧ ತರಕಾರಿಗಳನ್ನು ಬೆಳೆಸುತ್ತಿದ್ದರು. ಕೆಲಸದವರ ಜತೆ ತಾನೂ ಕೃಷಿಕೆಲಸದಲ್ಲಿ ತೊಡಗುತ್ತಿದ್ದ ಅವರು ತಾನೇ ಸ್ವತಃ ಅಡಿಕೆ, ತೆಂಗಿನ ಮರಗಳಿಗೆ ಏರಿ ಅಡಿಕೆ, ತೆಂಗಿನ ಕಾಯಿ ಕೀಳುತ್ತಿದ್ದರು. ಆಯಾಸದ ಅರಿವೇ ಇಲ್ಲದ ಉತ್ಸಾಹಿ. 

ಮೃದು ಭಾಷಿಯಾಗಿದ್ದ ಶರತ್‌ ಅವರಲ್ಲಿ ಯಾರಾದರೂ ಕಷ್ಟಗಳನ್ನು ಹೇಳಿಕೊಂಡರೆ ಅದಕ್ಕೆ ಸ್ಪಂದಿಸಿ ತನ್ನ ಕೈಲಾದಷ್ಟು ನೆರವು ನೀಡುತ್ತಿದ್ದರು. ಇದನ್ನು ಅವರು ಯಾರಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ಕಷ್ಟದಲ್ಲಿರುತ್ತಿದ್ದ ಕುಟುಂಬಗಳ ಮಕ್ಕಳಿಗೆ ಶಾಲಾ ಫೀಸು, ಬಡಕುಟುಂಬಗಳ ಹೆಣ್ಮಕ್ಕಳ ಮದುವೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಸ್ನೇಹಮಯಿ ಆಗಿದ್ದ ಅವರು ಯಾರಲ್ಲೂ ಸಂಘರ್ಷಕ್ಕೆ ಇಳಿಯುವ ಸ್ವಭಾವದವರಲ್ಲ. ಅಂತ್ಯಸಂಸ್ಕಾರದ ವೇಳೆ ಇದನ್ನು ಹೇಳಿಕೊಂಡು ಕೆಲವರು ಕಣ್ಣೀರು ಸುರಿಸುತ್ತಿರುವುದು ಮನಕಲಕುತ್ತಿತ್ತು.

ಆರ್‌ಎಸ್‌ಎಸ್‌ನತ್ತ ಆಕರ್ಷಿತನಾಗಿ ಅದರ ಕಾರ್ಯಕರ್ತನಾಗಿದ್ದರೂ ಎಲ್ಲ ಧರ್ಮದವರ ಜತೆ ಅನ್ಯೋನ್ಯತೆಯಿಂದ ಇದ್ದರು. ಯಾವುದೇ ಗಲಭೆ, ಸಂಘರ್ಷಗಳಲ್ಲಿ ಭಾಗಿಯಾದವರಲ್ಲ. ಜನಪರ ಹೋರಾಟಗಳಲ್ಲಿ ಕೈಜೋಡಿಸುತ್ತಿದ್ದರು. ರೈತಪರ ಹೋರಾಟಗಳಲ್ಲೂ ಸಕ್ರಿಯರಾಗಿದ್ದ ಅವರು ತುಂಬೆ ವೆಂಟೆಡ್‌ಡ್ಯಾಂನಿಂದ ಮುಳುಗಡೆಯಾಗುವ ಪ್ರದೇಶಗಳ ರೈತರ ಹೋರಾಟದಲ್ಲಿ ನಿರತರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next