Advertisement

ಇಂದಿನಿಂದ ಸಕ್ರಿಯ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನ

11:31 PM Jul 16, 2023 | Team Udayavani |

ಉಡುಪಿ/ಕಾರ್ಕಳ/ಮಂಗಳೂರು: 2025ನೇ ಇಸವಿ ವೇಳೆಗೆ ಕ್ಷಯಮುಕ್ತ ಭಾರತ ಮಾಡುವ ದಿಟ್ಟ ಸಂಕಲ್ಪದೊಂದಿಗೆ ಕರ್ನಾಟಕ ಸರಕಾರ ಆರೋಗ್ಯ ಇಲಾಖೆ ಜು. 17ರಿಂದ ಜೂ. 2ರ ತನಕ ರಾಜ್ಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನವನ್ನು ಹಮ್ಮಿಕೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೂಡ ಸೋಮವಾರದಿಂದ ಈ ಚಟುವಟಿಕೆ ನಡೆಯಲಿದೆ.

Advertisement

ಆರೋಗ್ಯ ಇಲಾಖೆಯ ವಿಶೇಷ ತರಬೇತಿ ಹೊಂದಿದ ತಂಡಗಳು ಆಯ್ದ ಹೈರಿಸ್ಕ್ ಪ್ರದೇಶ ಹಾಗೂ ಗುರುತಿಸಿರುವ ಮನೆಗೆ ಭೇಟಿ ನೀಡಿ ಕ್ಷಯರೋಗದ ತಪಾಸಣೆ, ರೋಗ ಪತ್ತೆ ಹಚ್ಚುವಿಕೆ, ಚಿಕಿತ್ಸೆ ನೀಡುವುದು ಹಾಗೂ ಕ್ಷಯರೋಗದ ಕುರಿತು ಅರಿವು ಮೂಡಿಸಲಿವೆ.

ಕಳೆದ ಎರಡು ವರ್ಷಗಳ ಹಿಂದೆ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದು ಗುಣ ಮುಖರಾಗಿರುವವರಿಗೆ ಕ್ಷಯ ಮರು ಕಳಿಸುವ ಅಪಾಯ ಹೆಚ್ಚು ಇರುತ್ತದೆ.

ಈ ದಿಸೆಯಲ್ಲಿ ಅವರನ್ನು ತಂಡ ತಪಾಸಣೆ ನಡೆಸಲಿದೆ. ರೋಗನಿರೋ ಧಕ ಶಕ್ತಿ ಕಡಿಮೆ ಇರುವವರಲ್ಲಿ ಕ್ಷಯ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಎಲ್ಲೆಲ್ಲಿ ತಂಡ ಭೇಟಿ
ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಕಲ್ಲುಕೋರೆ, ಗಣಿಗಾರಿಕೆ, ಕಾರ್ಖಾನೆ ಹಾಗೂ ಕೈಗಾರಿಕೆಗಳು, ಮೀನುಗಾರಿಕೆ ಪ್ರದೇಶ, ಕೊಳಚೆ ಪ್ರದೇಶ, ವಲಸಿಗರು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆರೋಗ್ಯ ಸೇವೆ ವಂಚಿತ ಜನರು, ಸಾರಿಗೆ ವ್ಯವಸ್ಥೆ ಇಲ್ಲದೆ ತಲುಪಲಾಗದ ಹಳ್ಳಿಗಳು, ಸಂಪ್ರದಾಯವಾದಿಗಳು, ಕಳೆದ ಎರಡು ವರ್ಷಗಳಲ್ಲಿ ಅತೀ ಹೆಚ್ಚು ಕ್ಷಯ ಪ್ರಕರಣ ಕಂಡು ಬಂದ ಪ್ರದೇಶಗಳು, ನಿರಾಶ್ರಿತರು, ವೃದ್ಧಾಶ್ರಮಗಳು, ಬೀಡಿ ಕಾರ್ಮಿಕರು, ನೇಕಾರರು, ಹತ್ತಿ ಬಟ್ಟೆ ತಯಾರಕರು, ಬುಡಕಟ್ಟು ಜನಾಂಗ ಹಾಗೂ ಅಪಾಯಕಾರಿ ಹಂತದಲ್ಲಿ ಇರುವ ಆಯ್ದ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ಈ ಆಂದೋಲನ ಕಾರ್ಯಕ್ರಮ ನಡೆಯಲಿದೆ.

Advertisement

ನಿರ್ಲಕ್ಷಿಸಿದರೆ ಅಪಾಯ
ಈ ರೋಗದ ಕುರಿತು ನಿರ್ಲಕ್ಷ್ಯ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕ್ಷಯರೋಗದ ಪರೀಕ್ಷೆ ಹಾಗೂ ಚಿಕಿತ್ಸೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯಲಿದೆ. ಪ್ರಸ್ತುತ ಜಿಲ್ಲೆಯಲ್ಲಿ 500ರಿಂದ 600 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ 1,400ರಿಂದ 1,500ರಷ್ಟು ಪ್ರಕರಣಗಳು ವರದಿಯಾಗುತ್ತಿದ್ದು, ಈ ಪೈಕಿ ಶೇ. 90ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ.

ರೋಗ ಲಕ್ಷಣಗಳೇನು?
ಎರಡು ವಾರಗಳಿಗಿಂತ ಹೆಚ್ಚು ಸತತ ಕಫ‌ ಸಹಿತ ಕೆಮ್ಮು, ಸಂಜೆ ವೇಳೆ ಬಿಟ್ಟು ಬಿಟ್ಟು ಬರುವ ಜ್ವರ, ಹಸಿವು ಆಗದಿರುವುದು, ತೂಕ ಕಡಿಮೆ ಆಗುವುದು, ರಾತ್ರಿ ವೇಳೆ ಬೆವರುವುದು, ಕೆಮ್ಮುವಾಗ ಎದೆ ನೋವು ಕಾಣಿಸಿಕೊಳ್ಳುವುದು, ಕಫ‌ದಲ್ಲಿ ರಕ್ತ ಬೀಳುವುದು ಇವಿಷ್ಟು ಕ್ಷಯ ರೋಗದ ಲಕ್ಷಣಗಳು ಇಂತಹ ರೋಗ ಲಕ್ಷಣ
ಇರುವವರು ವಿಶೇಷ ತಂಡಗಳು ಮನೆ ಭೇಟಿನೀಡಿದಾಗ ಸಹಕಾರ ನೀಡಿ ಪರೀಕ್ಷೆಗೆ ಒಳ ಪಡಬೇಕು. ಕ್ಷಯರೋಗ ಮುಖ್ಯವಾಗಿ ಶ್ವಾಸಕೋಶ ಅಲ್ಲದೆ ದೇಹದ ಇತರ ಭಾಗಗಳನ್ನು ಬಾಧಿಸುತ್ತದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಕೆಮ್ಮುವಾಗ, ಸೀನುವಾಗ ಗಾಳಿಯ ಮೂಲಕ ತುಂತುರು ಹನಿಗಳ ಜತೆಗೆ ಹರಡುತ್ತದೆ. ಕ್ಷಯರೋಗಕ್ಕೆ ಯಾರು ಕೂಡ ಭಯಪಡುವ ಅಗತ್ಯ ಇಲ್ಲ ಇದೊಂದು ಸಂಪೂರ್ಣ ಗುಣಪಡಿಸಬಹುದಾಗಿದೆ.

4.5 ಲಕ್ಷಕ್ಕೂ ಅಧಿಕ ತಪಾಸಣೆ ಗುರಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3.5 ಲಕ್ಷ ಮಂದಿ ಮತ್ತು ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಯನ್ನು ತಪಾಸಣೆ ನಡೆಸಲು ಗುರಿ ನಿಗದಿಪಡಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಸದ್ಯ 1,078 ಕ್ಷಯ ರೋಗ ಪ್ರಕರಣಗಳು ದಾಖಲೆಯಲ್ಲಿವೆ. ಉಡುಪಿ ಜಿಲ್ಲೆಯಲ್ಲಿ 400ಕ್ಕೂ ಅಧಿಕ ತಂಡ ರಚನೆ ಮಾಡಲಾಗಿದೆ. 800 ಮಂದಿ ಸಿಬಂದಿಗಳಿದ್ದು, ಒಂದು ತಂಡದಲ್ಲಿ ಇಬ್ಬರು ಇರಲಿದ್ದಾರೆ. ಅವರು ಮನೆಗಳಿಗೆ ಬಂದಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ| ಚಿದಾನಂದ ಸಂಜು ಮತ್ತು ಡಾ| ಬದ್ರುದ್ದೀನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next