Advertisement

ಸಕ್ರಿಯ ಕ್ಷಯ ರೋಗ ಪತ್ತೆ ಅಭಿಯಾನ

06:00 AM Jul 01, 2018 | |

ಕ್ಷಯ ರೋಗವು ನಮ್ಮ ದೇಶದಲ್ಲಿ ಇನ್ನು ನಿಯಂತ್ರಣಕ್ಕೆ ಬಾರದಿರಲು ಹಲವಾರು ಕಾರಣಗಳಿವೆ.ಅವುಗಳಲ್ಲಿ ಮುಖ್ಯವೆಂದರೆ ಇತ್ತೀಚಿನವರೆಗೆ ನಮ್ಮಲ್ಲಿ  ನಿರ್ದಿಷ್ಟ ಸೂಕ್ಷ್ಮವಾದ ಪರೀಕ್ಷಾ  ವಿಧಾನ (Diagnostic Test) ಇಲ್ಲದೇ ಇರುವುದು, ಕ್ಷಯ ರೋಗದ ಲಕ್ಷಣಗಳಿರುವ ರೋಗಿಗಳಿಗೆ ಮುಖ್ಯವಾಗಿ ಕಫ‌ ಪರೀಕ್ಷೆ ಮಾಡಿಸದೇ ಇರುವುದು, ಕ್ಷಯ ರೋಗ ಒಂದು ವೇಳೆ ಪತ್ತೆಯಾದಲ್ಲಿ ರೋಗಿಯು ಅಗತ್ಯವಾದ ಕನಿಷ್ಟ 6 ತಿಂಗಳುಗಳ ನಿಗಧಿಯಾದ ಚಿಕಿತ್ಸೆ ಪಡೆದುಕೊಳ್ಳದೇ ಇರುವುದು. ಸದ್ಯ ನಮ್ಮ ದೇಶದಲ್ಲಿ ಸಾಮಾನ್ಯ 1 ಲಕ್ಷ ಜನ ಸಂಖ್ಯೆಗೆ 200-250 ಕ್ಷಯ ರೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 2016ರಲ್ಲಿ  15 ಲಕ್ಷ ರೋಗಿಗಳನ್ನು ಮಾತ್ರ ಪತ್ತೆ ಹಚ್ಚಿ, ಉಚಿತ ಚಿಕಿತ್ಸೆ ನೀಡಲಾಗಿದೆ. 

Advertisement

ಅಂದರೆ ಸರಿಸುಮಾರು ಇನ್ನು 10 ಲಕ್ಷ ರೋಗಿಗಳು ಕಾರ್ಯಕ್ರಮದ ಅಡಿಯಲ್ಲಿ ಚಿಕಿತ್ಸೆ ಪಡೆದುಕೊಂಡಿಲ್ಲ, ಅಥವಾ ಕಾರ್ಯಕ್ರಮಕ್ಕೆ  notification  ಆಗಿರುವುದಿಲ್ಲ. ಅಂತೆಯೇ ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ಸುಮಾರು 70,000 ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗಿದೆ. ಹಾಗೂ ಖಾಸಗಿ ಆಸ್ಪತ್ರೆ/ವೈದ್ಯರು ಸುಮಾರು 12,000 ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಿದ್ದಾರೆ. 


ಅಂದಾಜಿನ ಪ್ರಕಾರ ರಾಜ್ಯದಲ್ಲಿ ಇನ್ನೂ ಸರಿ ಸುಮಾರು 25,000-30,000 ರೋಗಿಗಳ ಪತ್ತೆ ಹಾಗೂ ಚಿಕಿತ್ಸೆ ಆಗಬೇಕಿತ್ತು. ಅಂದರೆ ಪ್ರತಿ ವರ್ಷ ರಾಜ್ಯದಲ್ಲಿ ಸಾವಿರಾರು ಹಾಗೂ ದೇಶದಲ್ಲಿ  ಲಕ್ಷಾಂತರ ಕ್ಷಯ ರೋಗಿಗಳು ರೋಗ ಪತ್ತೆ ಹಾಗೂ ಸರಿಯಾದ ಚಿಕಿತ್ಸೆಗಳಿಂದ ವಂಚಿತರಾಗುತ್ತಿದ್ದಾರೆ. ಒಬ್ಬ ಕ್ಷಯ ರೋಗಿಯ ಒಂದು ವರ್ಷ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ, ತನ್ನ  ಪರಿಸರದಲ್ಲಿ ಸರಿ ಸುಮಾರು ಇತರ 10-15 ಜನರಿಗೆ ಸೋಂಕು ಹಂಚಿಸುವ ಅಪಾಯವಿದೆ. ಅಲ್ಲದೇ ಆ ರೋಗಿಯು ಚಿಕಿತ್ಸೆಗೆ ಕಷ್ಟವಾದ Drug Resistant TB ರೋಗಿಯಾಗಿ ಬದಲಾಗುವ ಸಾಧ್ಯತೆಗಳಿರುತ್ತವೆ.

ಇದನ್ನು ಮನಗೊಂಡ ಕೇಂದ್ರ ಸರಕಾರದೇಶದಾದ್ಯಂತ ಸಕ್ರಿಯ ಕ್ಷಯ ರೋಗ ಪತ್ತೆ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನದಡಿಯಲ್ಲಿ ಕರ್ನಾಟಕದಲ್ಲಿ ಜುಲೈ 2ರಿಂದ 16ರ ವರೆಗೆ ಆರೋಗ್ಯ ಕಾರ್ಯಕರ್ತರು ರೋಗ ಹೆಚ್ಚು ಕಂಡು ಬರುವ ಪ್ರದೇಶಗಳಲ್ಲಿ ಮನೆ – ಮನೆ ಭೇಟಿ ನೀಡಿ, ಕ್ಷಯ ರೋಗ ಲಕ್ಷಣಗಳಿರುವ ವ್ಯಕ್ತಿಗಳನ್ನು ವಿಚಾರಿಸಿ ಪರೀಕ್ಷೆ ನಡೆಸಲಿದ್ದಾರೆ.

ಸಮುದಾಯದಲ್ಲಿರುವ ಈ ಯಾವುದೇ ಒಂದು ಅಥವಾ ಅದಕ್ಕಿಂತ ಹೆಚ್ಚು ಲಕ್ಷಣಗಳಿರುವ ವ್ಯಕ್ತಿಗಳಿಂದ 2 ಕಫ‌ದ ಮಾದರಿಗಳನ್ನು 2 ಸಲ ಸಂಗ್ರಹಿಸಿ ಸಮೀಪದ ಆರೋಗ್ಯ ಕೇಂದ್ರದ ಪ್ರಯೋಗ ಶಾಲೆಗೆ ಕಳಿಸಿ ಕ್ಷಯ ರೋಗ ಕ್ರಿಮಿಗಳಿಗಾಗಿ ಪರೀಕ್ಷೆ ಮಾಡಲಾಗುವುದು.

ಈ 2 ಕಫ‌ದ ಮಾದರಿಗಳಲ್ಲಿ ಅಥವಾ ಯಾವುದೇ ಒಂದು ಅಥವಾ ಎರಡು ಕಫ‌ದ ಮಾದರಿಯಲ್ಲಿ ಕ್ಷಯ ರೋಗಕಾರಕ ಕ್ರಿಮಿಗಳಿರುವುದು ಪತ್ತೆಯಾದರೆ, ಆ ವ್ಯಕ್ತಿಯನ್ನು ಕ್ಷಯ ರೋಗಿ ಎಂದು ಪರಿಗಣಿಸಿ ಅವರಿಗೆ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ಉಚಿತವಾದ ಚಿಕಿತ್ಸೆಯ ವ್ಯವಸ್ಥೆ ನೀಡಲಾಗುವುದು. ಕ್ಷಯರೋಗ ಲಕ್ಷಣಗಳಿರುವ ವ್ಯಕ್ತಿಗೆ ಕಫ‌ ಪರೀಕ್ಷೆಯಲ್ಲಿ ರೋಗಾಣುಗಳು ಕಂಡು ಬಾರದೇ ಇದ್ದಲ್ಲಿ ಅವರಿಗೆ ಎದೆಗೂಡಿನ ಎಕ್ಸ್‌-ರೇ ಪರೀಕ್ಷೆಗೆ ಒಳಪಡಿಸಲಾಗುವುದು. ಹಾಗೂ ಎಕ್ಸ್‌ – ರೇ ಯಾವುದೇ ಚಿಹ್ನೆಗಳು ಕಂಡು ಬಂದಲ್ಲಿ ರೋಗಿಯ ಕಫ‌ವನ್ನು ಅತ್ಯಾಧುನಿಕವಾದ ಹಾಗೂ ಇತ್ತೀಚೆಗೆ ಜನರ ಸೇವೆಗೆ ಪ್ರತೀ ಜಿಲ್ಲೆಯಲ್ಲಿ ಲಭ್ಯವಿರುವ ಅತ್ಯಾಧುನಿಕ  CBNAAT (Gene Xpert) ವಿಧಾನದಿಂದ ಉಚಿತವಾಗಿ ಪರೀಕ್ಷೆ ಮಾಡಲಾಗುವುದು. ಈ ವಿಧಾನದಿಂದ ಕಫ‌ದಲ್ಲಿ  ಕ್ಷಯ ರೋಗಾಣುಗಳಿರುವುದು ಕಂಡು ಬಂದಲ್ಲಿ ರೋಗಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ರೋಗಾಣುವಿನ Sensitivity pattern ಆಧಾರಿಸಿ ಕನಿಷ್ಠ ಆರು ತಿಂಗಳು ಚಿಕಿತ್ಸೆ ನೀಡಲಾಗುವುದು.

Advertisement

ಕಫ‌ ಪರೀಕ್ಷೆ,ಎಕ್ಸ್‌-ರೇ ಹಾಗೂ ಇಆNಅಅಖ ಪರೀಕ್ಷೆಯಲ್ಲಿ ಕ್ಷಯ ರೋಗವಿಲ್ಲ ಎಂದು ಖಾತ್ರಿಯಾದಲ್ಲಿ ಅವರಿಗೆ ಇತರೇ ಶ್ವಾಸಕೋಶದ ಖಾಯಿಲೆ ಎಂದು ಪರಿಗಣಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು.

ಚಿಕ್ಕ ಮಕ್ಕಳು ಹಾಗೂ ಎಚ್‌ ಐ ವಿ  ಸೋಂಕಿನಲ್ಲಿ ಕ್ಷಯ ರೋಗದ ಲಕ್ಷಣಗಳಿದ್ದರೆ  ಅಂಥವರ ಕಫ‌ದ ಮಾದರಿಗಳನ್ನು ನೇರವಾಗಿ   CBNAAT ಪರೀಕ್ಷೆಗೆ ಒಳಪಡಿಸಿ ಅತೀ ಶೀಘ್ರವಾಗಿ ಸರಿಯಾದ ರೋಗ ಚಿಕಿತ್ಸೆ ಆರಂಭಿಸಲಾಗುವುದು.
ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದಲ್ಲಿ ಈ ಎಲ್ಲ ಪರೀಕ್ಷೆಗಳು ಮತ್ತು ಚಿಕಿತ್ಸೆ ಉಚಿತವಾಗಿ ಲಭ್ಯವಿದ್ದು ರೋಗಿಗಳು ಹೆಚ್ಚಾಗಿ ಪೌಷ್ಠಿಕಾಂಶಗಳ ಕೊರತೆಯಿಂದ ಬಳಲುತ್ತಿರುವುದರಿಂದ ರೂ. 500ನ್ನು ಪ್ರತಿ ತಿಂಗಳು ಚಿಕಿತ್ಸೆ ಮುಗಿಯುವವರೆಗೆ ಪೌಷ್ಠಿಕ ಅಂಶ ಭತೃಗಾಗಿ ನೀಡಲಾಗುವುದು.

ಸಾರ್ವಜನಿಕರು ತಮ್ಮ ನೆರೆಹೊರೆಯಲ್ಲಿ ಯಾವುದೇ ವ್ಯಕ್ತಿಯ ಕ್ಷಯ ರೋಗದ ಲಕ್ಷಣಗಳಿಂದ ಬಳಲುತ್ತಿದ್ದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ನೀಡಿ, ರೋಗ ನಿಯಂತ್ರಣ ಅಭಿಮಾನದಲ್ಲಿ  ಭಾಗಿಯಾಗಿ 2030 ರ ಒಳಗೆ ಕ್ಷಯ ರೋಗ ಮುಕ್ತ ಮಾಡುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳೋಣ. 

ಈ ಕಾರ್ಯಕ್ರಮವು ದೇಶದಾದ್ಯಂತ ಹೆಚ್ಚಾಗಿ ರೋಗ ಕಂಡುಬರುವ ವಲಯದಲ್ಲಿರುವ ಸುಮಾರು 12 ಕೋಟಿ ರೋಗಲಕ್ಷಣಗಳಿರುವ ವ್ಯಕ್ತಿಗಳನ್ನು ಪರೀಕ್ಷಿಸಿ ಅಗತ್ಯವಾಗುವ ಸರಿಸುಮಾರು 60 ಲಕ್ಷ ಅಂತಹ ವ್ಯಕ್ತಿಗಳ ಕಫ‌ ಪರೀಕ್ಷೆ  ನಡಿಸಿ, 3 ಲಕ್ಷ  ಹೊಸ ರೋಗಿಗಳನ್ನು ಪತ್ತೆಹಚ್ಚಿ ಅವರಿಗೆ ಸಂಪೂರ್ಣ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದೆ.

ಕಾರ್ಯಕ್ರಮದಡಿಯಲ್ಲಿ  ಕ್ಷಯ ರೋಗದ ಮುಖ್ಯ ಲಕ್ಷಣಗಳೆಂದರೆ
1. 2 ವಾರಕ್ಕಿಂತಲೂ ಹೆಚ್ಚು ಸಮಯದಿಂದ ಕೆಮ್ಮು ಮತ್ತು ಕಫ‌.
2. 2 ವಾರಕ್ಕಿಂತಲೂ ಹೆಚ್ಚು ಸಮಯದಿಂದ ಜ್ವರ
3. ದೇಹದ ತೂಕ ಕಡಿಮೆಯಾಗುತ್ತಿರುವುದು.
4. ತಿಂಗಳುಗಳಿಗಿಂತ ಹೆಚ್ಚು ಸಮಯದಿಂದ ಎದೆ ನೋವು ಇರುವುದು.

– ಡಾ| ಅಶ್ವಿ‌ನಿ ಕುಮಾರ್‌ ಗೂಪಾಡಿ,
ಅಡಿಶನಲ್‌ ಪ್ರೊಫೆಸರ್‌, 
ಕಮ್ಯುನಿಟಿ ಮೆಡಿಸಿನ್‌,ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮ
ಕೆ.ಎಂ.ಸಿ. ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next