Advertisement

ಸಕ್ರಿಯವಾಗಿದೆ ಆನ್‌ಲೈನ್‌ ವಂಚಕರ ಜಾಲ

01:48 AM Oct 09, 2020 | Team Udayavani |

ಉಡುಪಿ: 25 ಲಕ್ಷ ರೂ., 50 ಲಕ್ಷ ರೂ. ಗೆದ್ದಿದ್ದೀರಿ ನಿಮಗೆ ಶುಭಾಶಯಗಳು! ಹಣ ಪಡೆಯಲು ಈ ಸಂಖ್ಯೆಗೆ ಕರೆ ಮಾಡಿ ಅಥವಾ ಈ ಲಿಂಕ್‌ ಅನ್ನು ಒತ್ತಿ ಎಂದು ಸಂದೇಶ ನೋಡಿ ಹಳ್ಳಕ್ಕೆ ಬೀಳುವವರ ಸಂಖ್ಯೆ ಹೆಚ್ಚಿದೆ. ತಂತ್ರಜ್ಞಾನ ಬೆಳೆದಷ್ಟು ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಿದ್ದು, ಕೋವಿಡ್‌ ಸಂಕಷ್ಟ ಕಾಲದಲ್ಲಿ ಉದ್ಯೋಗವಿಲ್ಲದ ಮಂದಿ ಇಂತಹ ಜಾಲದಲ್ಲಿ ಸಕ್ರಿಯವಾಗಿದ್ದಾರೆ. ಪೊಲೀಸರಿಗೂ ಇವರ ಜಾಲ ಭೇದಿಸುವುದು ತಲೆನೋವಾಗಿದೆ.

Advertisement

12 ಲ.ರೂ.ಆಸೆಗೆ 26 ಲ.ರೂ.ಕಳೆದುಕೊಂಡರು!
ಉಡುಪಿಯ ಕೆ. ನಾಗರಾಜ್‌ ಭಟ್‌ ಎಂಬವರಿಗೆ ನ್ಯಾಪ್‌ಟಾಲ್‌ ಕಂಪೆನಿಯ ಹೆಸರಿನಲ್ಲಿ ಒಂದು ಸ್ಕ್ರ್ಯಾಚ್‌ ಕೂಪನ್‌ ಪೋಸ್ಟ್‌ ಬಂದಿತ್ತು. 12 ಲ.ರೂ.ವಿಜೇತರಾಗಿದ್ದೀರಿ ಎಂದು ನಮೂದಿಸ ಲಾಗಿತ್ತು. ಅದರಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ರಿಜಿಸ್ಟ್ರೇಶನ್‌ ಹಣ ಪಾವತಿಸುವಂತೆ ಬ್ಯಾಂಕ್‌ ಖಾತೆ ವಿವರ ನೀಡಿದ್ದರು. ಅದರಂತೆ 2019ರ ಎ.4ರಂದು 12 ಸಾವಿರ ರೂ. ಪಾವತಿಸಿದ್ದರು. ಅನಂತರ ಆರೋಪಿಗಳಾದ ಅಮಿತ್‌ ಬಿಸ್ವಾಸ್‌, ಚೇತನ್‌ ಕುಮಾರ್‌ ಅವರು ಬೇರೆ ಸಂಖ್ಯೆಗಳಿಂದ ಕರೆ ಮಾಡಿ ತಾವು ನ್ಯಾಪ್ಟಲ್‌ ಕಂಪೆನಿಯಿಂದ ಮಾತನಾಡುವುದು ಎಂದು ನಂಬಿಸಿದ್ದರು. ಬಳಿಕ 2019ರ ಎ.4ರಿಂದ ಜು.28ರ ನಡುವೆ ಜಿ.ಎಸ್‌.ಟಿ. ತೆರಿಗೆ, ವೆರಿಫಿಕೇಶನ್‌ ಚಾರ್ಜ್‌, ಸಬ್‌ಚಾರ್ಜ್‌ ಎಂದು ಒಟ್ಟು 26,47,650 ರೂ.ಯನ್ನು ಅವರು ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಸೆನ್‌ ಪೊಲೀಸರು ಕೇಸು ದಾಖಲಿಸಿದ್ದಾರೆ.

ಉತ್ತರ ಭಾರತದಿಂದಲೇ ಕೃತ್ಯ
ಸೈಬರ್‌ ವಂಚಕರು 10ಕ್ಕೂ ಅಧಿಕ ಬ್ಯಾಂಕ್‌ ಅಕೌಂಟ್‌ ಸಂಖ್ಯೆಗಳ ಮೂಲಕ ಹಣ ಕಳುಹಿಸುವಂತೆ ತಿಳಿಸಿದ್ದರು. ಕೋಲ್ಕತಾ, ಪಶ್ಚಿಮ ಬಂಗಾಳ ಒಡಿಶಾ, ಜೈಪುರ, ಹೊಸದಿಲ್ಲಿ, ರಾಜಸ್ಥಾನ ಭಾಗ ಗಳಿಂದ ವಿವಿಧ ಮೊಬೈಲ್‌ ಸಂಖ್ಯೆಗಳಿಂದ ಅಕೌಂಟ್‌ ನಂಬರ್‌ಗಳನ್ನು ಪಡೆದು ಆರೋಪಿಗಳು ವಂಚಿಸುತ್ತಿದ್ದರು. ಜಮೆ ಮಾಡಿದ ಹಣವೆಲ್ಲ ಎಲ್ಲರಿಗೂ ಹಂಚಿ ಹೋಗಿರುವ ಸಾಧ್ಯತೆಗಳಿವೆ.  ಚೈನ್‌ಲಿಂಕ್‌ ವ್ಯವಹಾರಗಳ ಮೂಲಕ ಆರೋಪಿಗಳು ಅನಾಮಧೇಯ ಖಾತೆ ಗಳಿಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದರ ಜಾಡು ಹಿಡಿದು ಹೊರಟರೆ ಸಮರ್ಪಕ ದಾಖಲೆಗಳೂ ಪೊಲೀಸರಿಗೆ ಲಭ್ಯವಾಗುತ್ತಿಲ್ಲ.

ಹಿಂದಿ ಮಾತು
ಸಾಮಾನ್ಯವಾಗಿ ಈ ರೀತಿ ವಂಚನೆ ಮಾಡುವವರು ಹಿಂದಿ ಭಾಷೆಯಲ್ಲಿ ವ್ಯವಹಾರ ನಡೆಸುತ್ತಾರೆ. ಕೆಲವರು ಈ ಅಕ್ರಮಕ್ಕೆ ಯುವತಿಯರನ್ನು ಬಳಸುತ್ತಿದ್ದು, ಕರೆ ಮಾಡಿ ವಿಶ್ವಾಸ ಗಳಿಸಿ ಮಾಹಿತಿ ಪಡೆದುಕೊಳ್ಳುತ್ತಾರೆ. ವಾಹನ ಮಾರಾಟ ಇತ್ಯಾದಿ ಸುಳ್ಳು ಹೇಳಿ ವ್ಯವಹಾರಗಳನ್ನು ಕುದುರಿಸುತ್ತಾರೆ.

ಹಣ ವಸೂಲಿ ಸವಾಲು!
ಪರಿಚಯ ಇಲ್ಲದವರ ಬ್ಯಾಂಕ್‌ ಅಕೌಂಟ್‌ಗೆ ಹಾಕಿದ ಹಣದ ಮೂಲ ಹುಡುಕುವುದೇ ಸಮಸ್ಯೆ. ತಜ್ಞ ಖದೀಮರು ಆ್ಯಪ್‌ಗ್ಳ ಮೂಲಕವೇ ನಕಲಿ ಖಾತೆ ಸೃಷ್ಟಿ ಮಾಡಿ ಜನರನ್ನು ವಂಚಿಸುತ್ತಿದ್ದಾರೆ. ಅದರಲ್ಲಿ ಪೂರ್ಣ ವಿವರಗಳು ಇರುವುದಿಲ್ಲ. ವಂಚಕರ ಜಾಲವೂ ದೊಡ್ಡದಿದೆ. ವಂಚನೆ ನಡೆದ ತತ್‌ಕ್ಷಣ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಬಹುದು ಎನ್ನುತ್ತಾರೆ ಬ್ಯಾಂಕ್‌ ಸಿಬಂದಿಯೋರ್ವರು.

Advertisement

ತತ್‌ಕ್ಷಣ ದೂರು ನೀಡಿ
ಮೊಬೈಲ್‌ ಸಹಿತ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವಾಗ ಆದಷ್ಟು ಎಚ್ಚರದಿಂದ ಇರುವುದು ಉತ್ತಮ. ಅನ್ಯ ವ್ಯಕ್ತಿಗಳೊಂದಿಗೆ ಮಾತುಕತೆ, ಹಣಕಾಸು ವ್ಯವಹಾರ ಮಾಡಿ ವಿನಾಕಾರಣ ಹಣ ಕಳೆದುಕೊಳ್ಳಬೇಡಿ. ವಂಚನೆಗೊಳಗಾದ ತತ್‌ಕ್ಷಣವೇ ಸೆನ್‌ಪೊಲೀಸ್‌ ಠಾಣೆ ಅಥವಾ ಸಮೀಪದ ಠಾಣೆಗೆ ದೂರು ನೀಡಿದರೆ ಉತ್ತಮ.
-ರಾಮಚಂದ್ರ ನಾಯಕ್‌,  ಇನ್‌ಸ್ಪೆಕ್ಟರ್‌, ಸೆನ್‌ ಪೊಲೀಸ್‌ ಠಾಣೆ ಉಡುಪಿ

ಸಾರ್ವಜನಿಕರಿಗೆ ಸೂಚನೆ
 ದೂರವಾಣಿ ಮೂಲಕ ಪಿನ್‌ ನಂಬರ್‌ ಸಹಿತ ಇತರ  ಪಾಸ್‌ವರ್ಡ್‌ಗಳನ್ನು ನೀಡಬೇಡಿ.
 ಅಶ್ಲೀಲ ಸಂದೇಶ ಕ್ಲಿಕ್‌ ಮಾಡುವ ಮುನ್ನ ಎಚ್ಚರ.
 ಆ್ಯಪ್‌ ಉಪಯೋಗಿಸುವ ಮುನ್ನ ಮಾಹಿತಿ ಸಂಗ್ರಹಿಸಿ.
 ಸ್ಪ್ಯಾಮ್‌ ಸಂಖ್ಯೆಗಳಿಂದ ಕರೆ ಬಂದಾಗ ಎಚ್ಚರದಿಂದ ವ್ಯವಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next