Advertisement
ಮಲೆನಾಡಿನ ಪುಟ್ಟ ಹಳ್ಳಿ ಧರೇಮನೆ. ಅಲ್ಲೊಂದು ಹುಲ್ಲು ಹೊದೆಸಿದ ಮಣ್ಣಿನ ಮನೆ. ಸುತ್ತಲೂ ಕಾಡು, ಮನೆ ಎದುರಿಗೆ ಅಡಿಕೆ ತೋಟ. ಅಬ್ಬಿ ನೀರು ಕಾಡಿನ ಒಳಗಿಂದ ಅಡಿಕೆಯ ದಬ್ಬೆಯಲ್ಲಿ ಹರಿದು ಅಂಗಳವನ್ನು ಸೇರುವ ಜಾಗದಲ್ಲೊಂದು ದೊಡ್ಡ ನೀರಿನ ಬಾನಿ. ಮನೆಯ ಅಂಗಳವನ್ನು ಸಾರಿಸಿ ಒಪ್ಪ ಮಾಡಲಾಗಿದೆ. ಒಂದೇ ಒಂದು ತರಗೆಲೆಯೂ ಅಲ್ಲಿ ಬಿದ್ದಿಲ್ಲ. ಅಂಗಳದಿಂದ ಕಾಡಿಗೆ ಹತ್ತಿ ಹೋಗುವ ಜಾಗದಲ್ಲಿ ಐದಾರು ಚಿಕ್ಕ ಮೆಟ್ಟಿಲು. ಅದನ್ನೂ ಸಾರಿಸಿ ನುಣ್ಣಗೆ ಮಾಡಲಾಗಿದೆ. ಅಲ್ಲೂ ಚಿಕ್ಕ ಕಸವಿಲ್ಲ. ನೀರು ಕಾಯಿಸಲು ಅಂಗಳದಲ್ಲೇ ಹಂಡೆ ಇಡಲಾಗಿದೆ. ಆ ಒಲೆಗೆ ಊದು ಕೊಳವೆಯಲ್ಲಿ ಗಾಳಿ ಊದುತ್ತಾ ಕೂತಿದ್ದಾಳೆ ಅವಳು. ಜಾನಕಜ್ಜಿ.
Related Articles
ಮಲೆನಾಡಿನ ತಪ್ಪಲಿನಲ್ಲಿ ಜೀವನ ಕಳೆಯುತ್ತಿದ್ದ ಜಾನಕಜ್ಜಿ, ಜಗತ್ತೇ ಅಚ್ಚರಿ ಪಡುವ ಸಾಧನೆಗೈದ ಜೊಹಾನ್ನ, ಒಂದೇ ಎನಿಸುವುದು ಅವರ ಜೀವನಪ್ರೀತಿಗೆ. ತಮಿಳುನಾಡಿನ ನಾನಮ್ಮಳ್ 99ರ ಹರೆಯದಲ್ಲೂ ಯೋಗದ ಕಠಿಣ ಆಸನಗಳನ್ನು ಮಾಡುತ್ತಾ ಬೆರಗು ಮೂಡಿಸುತ್ತಾರೆ. ಗಿಡಗಳನ್ನು ನೆಟ್ಟು ಬೆಳೆಸುತ್ತಾ ಮನೆಮಾತಾದ ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಪ್ರಶಸ್ತಿ ಪಡೆಯುವಾಗ ರಾಷ್ಟ್ರಪತಿಗಳಿಗೆ ಆಶೀರ್ವಾದ ಮಾಡುವ ಫೋಟೊ ಕಂಡು ಹುಬ್ಬೇರಿಸುತ್ತೇವೆ. ಆಕೆಗೀಗ 107 ವರ್ಷ!
Advertisement
ನಮ್ಮಲ್ಲೂ ಇದ್ದಾರೆ…ನಮ್ಮ ಊರುಗಳಲ್ಲೇ ಅನೇಕ ಮನೆಗಳಲ್ಲಿ ಇಂಥ ಲವಲವಿಕೆಯ ಅಜ್ಜಿಯರಿದ್ದಾರೆ. ಮದುವೆ ಮನೆಗಳಲ್ಲಿ ಓಡಾಡುತ್ತಾ, ಅಷ್ಟೂ ಕೆಲಸದ ಜವಾಬ್ದಾರಿ ಹೊರುವ ಸರಸ್ವತಜ್ಜಿ, ಮಕ್ಕಳು-ಮೊಮ್ಮಕ್ಕಳು ದೂರದೂರಿಂದ ಮನೆಗೆ ಬಂದಾಗ ಮುತುವರ್ಜಿ ವಹಿಸಿ ಅವರಿಗೆ ಇಷ್ಟವಾದ ಖಾದ್ಯಗಳನ್ನು ಮಾಡಿ ಬಡಿಸುವ ಜೊತೆಗೆ ರೆಸಿಪಿ ಹೇಳುವ ಗೌರಜ್ಜಿ, ಇಷ್ಟಕ್ಕೆ, ಇಷ್ಟೇ ಉಪ್ಪು-ಖಾರ ಹಾಕಿದರೆ ಹೀಗೇ ರುಚಿ ಬರುತ್ತದೆ ಎಂದು ಕುಂತಲ್ಲೇ ನಳಪಾಕ ತಯಾರು ಮಾಡುವ ಗಂಗಜ್ಜಿ, ಸಣ್ಣಪುಟ್ಟ ಖಾಯಿಲೆಗಳಿಗೆ ನಾರು-ಬೇರು ತೇಯ್ದು ವಾಸಿ ಮಾಡುವ ಲಲಿತಜ್ಜಿ, ಎಳೆಯ ಶಿಶು-ಬಾಳಂತಿ ಆರೈಕೆಗಳಿಗೆ ಸದಾ ಮುಂದೆ ನಿಲ್ಲುವ ಭಾರತಜ್ಜಿ ಅಂಥವರು ಪ್ರತಿ ಊರಲ್ಲೂ ಇದ್ದಾರೆ. ಸಂಪ್ರದಾಯ-ಆಚಾರಗಳ ಅಷ್ಟೂ ನಿಯಮಗಳು ಇವರಿಗೆ ಬಾಯಿಪಾಠ. ಭಜನೆ-ಹಳೇ ಹಾಡುಗಳು ಇವರ ಮೆದುಳ ಪ್ಲೇಯರ್‌ನಿಂದ ಇರೇಸ್ ಆಗುವುದೇಇಲ್ಲ. ವಯಸ್ಸಾಗೋದು ಅಂದ್ರೆ?
ವಯಸ್ಸೆಂದರೆ ಸಂಖ್ಯೆಯಷ್ಟೇ ಎನ್ನುವುದು ಶತಃಸಿದ್ಧ. ಎಲ್ಲಿ ಚುರುಕಾದ ಮನಸ್ಸಿದೆಯೋ ಅಲ್ಲಿ ಚುರುಕಾದ ದೇಹವೂ ಇರಬಲ್ಲದು. ಎಲ್ಲಿ ದೇಹ ಚುರುಕೋ ಅಲ್ಲಿ ಮನಸ್ಸೂ ಖುಷ್. ಆದರೂ, ವಯಸ್ಸಾದಂತೆ ತಾನೇ ತಾನಾಗಿ ಕ್ರಿಯಾಶೀಲತೆ ಕಡಿಮೆ ಆಗೋದಿಲ್ಲವೇ? ಹೇಗೆ ಈ ಅಜ್ಜಿಯರೆಲ್ಲಾ ಇಷ್ಟು ಲವಲಕೆಯಿಂದ ಇರುತ್ತಾರೆ? ಮಜಾ ಏನು ಗೊತ್ತಾ, ಏರುವ ವಯಸ್ಸಿಗೂ, ಕ್ರಿಯಾಶೀಲತೆಗೂ ಸಂಬಂಧವೇ ಇಲ್ಲ. 25ರ ಹುಡುಗಿ ಬರೀ ಟಿವಿ, ಮೊಬೈಲ್, ಊಟ-ತಿಂಡಿ ತಿಂದು ಉಂಡಾಡಿಗುಂಡಿಯಂತೆ ಇರುತ್ತಾಳಲ್ಲ. ಚಿಕ್ಕ ವಯಸ್ಸಿನ ಆಕೆಯ ಕಾಲ ಬುಡದಲ್ಲೇ ಜಗತ್ತಿನ ಅಷ್ಟೂ ಕ್ರಿಯೇಟಿವಿಟಿ ಇರೋದಿಲ್ಲ ಯಾಕೆ? ಯಾಕಂದ್ರೆ, ಕ್ರಿಯಾಶೀಲತೆ ಎನ್ನುವುದು ಪಕ್ಕಾ ವೈಯಕ್ತಿಕ ಶಕ್ತಿ. ನಮ್ಮನ್ನು ನಾವು ರೂಪಿಸಿಕೊಳ್ಳುವುದರಲ್ಲೇ ಈ ಕ್ರಿಯಾಶೀಲತೆಯ ಮಟ್ಟ ಇರುವುದು. ಹಾಗಾಗಿ ಅಯ್ಯೋ, ಎಪ್ಪತ್ತಾಯಿತು, ಇನ್ನು ನನ್ನ ಕಥೆ ಮುಗೀತು ಎಂಬುದು ಭ್ರಮೆ. 20, 40, 80 ಸಂಖ್ಯೆಗಳಷ್ಟೇ
ಮನೋವಿಜ್ಞಾನ ಒಂದು ಕುತೂಹಲಕಾರಿ ಸಂಗತಿ ತಿಳಿಸುತ್ತದೆ. ನಮಗೆ 20 ವರ್ಷವಾಗುತ್ತಿದ್ದಂತೆ ಮನೋಚಟುವಟಿಕೆಯ ಮಟ್ಟ ಹೆಚ್ಚುತ್ತಾ ಹೋಗಿ ಸುಮಾರು 40ರ ವಯಸ್ಸು ದಾಟುತ್ತಿದ್ದಂತೆ ಅದರ ಕ್ಲೈಮ್ಯಾಕ್ಸ್ ಹಂತ ತಲುಪುತ್ತದಂತೆ. ಅದಾದ ಮೇಲೆ ನಿಧಾನಗತಿಯಲ್ಲಿ ಈ ಶಕ್ತಿ ಇಳಿಮುಖವಾಗುತ್ತದೆ. ಆದರೆ 80 ವರ್ಷ ತಲುಪಿದ ಮೇಲೂ ಮನೋಚಟುವಟಿಕೆಯ ಮಟ್ಟ, 40ರಲ್ಲಿದ್ದಷ್ಟು ಸಾಮರ್ಥ್ಯದ ಅರ್ಧದಷ್ಟು ಇದ್ದೇ ಇರುತ್ತದಂತೆ. ಹಾಗಾಗಿಯೇ ಕನಸಿನ ಕನ್ಯೆ ಹೇಮಾಮಾಲಿನಿ 70ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟುತ್ತಾರೆ, ರಾಜಕೀಯವಾಗಿ ತೊಡಗಿಸಿಕೊಂಡು ಲೋಕಸಭಾ ಸದಸ್ಯೆಯೂ ಆಗುತ್ತಾರೆ. ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಸಾಮಾಜಿಕ ಕೆಲಸಗಳಲ್ಲಿ ಉತ್ಸಾಹದಿಂದ ತೊಡಗಿಕೊಂಡಿರುವ ಸುಧಾ ಮೂರ್ತಿಯವರಿಗೆ ಈಗ 68ರ ಹರೆಯ. ಬಾಲಿವುಡ್‌ನ ಎವರ್‌ಗ್ರೀನ್ ಸುಂದರಿ ರೇಖಾ ತನ್ನ 64ನೇ ವಯಸ್ಸಿನಲ್ಲಿ ವೇದಿಕೆ ಏರಿದಾಗಲೂ ಅದೇ ಹಳೇ ಝಲಕ್ ಅವರ ಕಣ್ಣಲ್ಲಿ ನರ್ತಿಸುತ್ತದೆ. 93ರ “ಏರು’ ವಯಸ್ಸಲ್ಲಿ ಬ್ರಿಟನ್‌ನ ಲೋರ್ನಾ ಪೇಜ್ ಬರೆದ ಮೊದಲ ಕಾದಂಬರಿ ಸೂಪರ್ ಹಿಟ್‌ಆಗುತ್ತದೆ. ಕ್ರಿಕೆಟ್ ಅಂಗಳದಲ್ಲಿ 87 ವರ್ಷದ ಚಾರುಲತಾ ಪಟೇಲ್ ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಾರೆ. ಇವರೆಲ್ಲಾ ಬಹಳ ದೂರದವರು ಅಂತೀರಾ? ನನ್ನ ಸಂಬಂಧಿ ಅಜ್ಜಿಯೊಬ್ಬರಿಗೆ 80 ವಯಸ್ಸು. ಈಗಲೂ ಬೇಸಿಗೆ ಬಂತೆಂದರೆ ಮೈಯೆಲ್ಲಾ ಹುರುಪು ಆಕೆಗೆ. ಹಲಸಿನ ಹಪ್ಪಳಕ್ಕೆ ಬೇಕಾದ ಸಿದ್ಧತೆಯನ್ನು ಒಬ್ಬಳೇ ಮಾಡಿ, ಹಪ್ಪಳಗಳನ್ನು ಬಿಸಿಲಲ್ಲಿ ತೆಳ್ಳಗೆ ಹರಗುತ್ತಾಳೆ. ಎಷ್ಟೆಲ್ಲಾ ಹಪ್ಪಳ ಮಾಡಿದ್ದೀಯಲ್ಲ? ಎಂದರೆ, ಈ ಸರಿ ಹೆಚ್ಚಾಗಿಲ್ಲ, ಬರೀ 800 ಆಯ್ತು ಎನ್ನುತ್ತಾಳೆ! ಅಪ್ಪೆಮಿಡಿ ಉಪ್ಪಿನಕಾಯಿ, ಬಾಳೆಕಾಯಿ-ಹಲಸಿನ ಕಾಯಿ ಚಿಪ್ಸ್, ಮಾವಿನಹಣ್ಣಿನ ಜ್ಯಾಮ್, ತೋಟದಿಂದ ಕೊಯ್ದು ತಂದ ಎಲೆಗಳಿಂದ ಗೊಜ್ಜು, ಚಟ್ನಿ, ತಂಬುಳಿ ಮಾಡುತ್ತಾಳೆ. ಮಧ್ಯಾಹ್ನ ಊಟವಾದ ಕೂಡಲೇ ಥಟ್ಟನೆ ಹೋಗಿ ಸಣ್ಣಗೆ ನಿದ್ರೆ ಮಾಡಿ, ನಾಲ್ಕು ಗಂಟೆಗೆ ಎದ್ದು ಸಂಜೆಯ ಕೆಲಸ- ಮರುದಿನಕ್ಕೆ ದೋಸೆಗೆ ಬೀಸುವುದು, ಹೂವು ಕಟ್ಟುವುದು… ಒಂದಿನಿತೂ ಬಿಡುವಿಲ್ಲ ಆಕೆಗೆ. ಬಿಪಿಗೆ ಮಾತ್ರೆ-ಕೈಯಗಂಟು ಆಗಾಗ ನೋವು ಬರುವುದಷ್ಟೇ ಅವಳ ಕಂಪ್ಲೇಂಟ್ಸ್. ರಾತ್ರಿ ಬೇಗ ಊಟ ಮಾಡಿ, ನಿದ್ರೆ ಬಂದ ಕೂಡಲೇ ಮಲಗಿ, ಆರೋಗ್ಯಕ್ಕೆ ಹಿತವಾದ ಆಹಾರವನ್ನು ಹಿತವಾಗಿ ಸೇವಿಸುವುದೇ ಅವಳ ಚಟುವಟಿಕೆಯ ಗುಟ್ಟು. ವಯಸ್ಸಾದಾಗ ಹೇಗಿರಬೇಕು? ಎಂಥ ಆಹಾರ ತಿನ್ನಬೇಕು ಅಂತೆಲ್ಲಾ ಗೂಗಲ್ ಮಾಡದೆಯೂ ಆರಾಮಾಗಿದ್ದಾಳೆ ನನ್ನಜ್ಜಿ. ಬಿದ್ದೀಯಬ್ಬೇ ಅನ್ಬೇಡಿ!
ಮುದುಕರು ಎಂದರೆ ಕೈಲಾಗದವರು ಎಂದು ಭಾವಿಸುತ್ತೇವೆ. ಸುಖಾಸುಮ್ಮನೆ “ಏಜಿಂಗ್ ಸಮಸ್ಯೆ’ಗಳೆಂದು ಹೆದರಿಸಿ, ಅವರನ್ನು ಮೂಲೆಗುಂಪು ಮಾಡುತ್ತೇವೆ. ಅದನ್ನು ಬಿಟ್ಟು, ಚಟುವಟಿಕೆಯಿಂದ ಇರಲು ಹಿರಿಯರನ್ನು ಪ್ರೇರೇಪಿಸಬೇಕು. ಯಾಕಂದ್ರೆ, ವಯಸ್ಸಾಗುತ್ತಿದ್ದಂತೆ ಮೆದುಳಿನ ಮುಂಭಾಗ (ಫ್ರಾಂಟಲ್ ಲೋಬ್) ಕೊಂಚ ಸಡಿಲವಾಗುವ ಕಾರಣ, ಕ್ರಿಯೇಟಿವಿಟಿಯೂ ವೃದ್ಧಾಪ್ಯದ ಜೊತೆಗೆ ಏರುತ್ತದೆ. ನಿವೃತ್ತಿಯ ನಂತರ ಕೆಲವರು ತುಂಬಾ ಕ್ರಿಯಾಶೀಲರಾಗುವುದಕ್ಕೆ, ಅವರಿಗೆ ಸಿಕ್ಕಿದ ಫ್ರೀ ಟೈಮ್ ಅಷ್ಟೇ ಕಾರಣವಲ್ಲ; ಬದಲಾಗುತ್ತಿರುವ ಮೆದುಳಿನ ಶಕ್ತಿಯನ್ನು ಅವರು ದುಡಿಸಿಕೊಂಡದ್ದೂ ಕಾರಣ. ಹೊಸ ಯೋಚನೆಗಳತ್ತ, ಒಂದಷ್ಟು ಸ್ವಂತ ಗುರಿಯತ್ತ ಸದಾ ನಮ್ಮನ್ನು ಒಡ್ಡಿಕೊಂಡರೆ ವಯಸ್ಸು ನಮ್ಮಿಂದ ಏನನ್ನೂ ಕಿತ್ತುಕೊಳ್ಳುವುದಿಲ್ಲ, ಬದಲಿಗೆ ಹೆಚ್ಚೆಚ್ಚು ಕೊಡುತ್ತದೆ; ಬೆಳೆಸುತ್ತದೆ. 2050ರ ವೇಳೆಗೆ ಭಾರತದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 34 ಕೋಟಿಗೆ ಏರಲಿದೆಯಂತೆ. ಅದು ವಿಷಾದದ ವಿಚಾರವಾಗದೆ ನಮ್ಮ ದೇಶವೆಷ್ಟು ಕ್ರಿಯಾಶೀಲ ಎಂದು ಭಾರತ ಹೆಮ್ಮೆಯಿಂದ ಹೇಳಿಕೊಳ್ಳುವ ವಿಚಾರವಾಗಲಿ. ಜಾನಕಜ್ಜಿ, ಸುಧಾ ಮೂರ್ತಿ, ಸಾಲುಮರ ದತಿಮ್ಮಕ್ಕರು ಮನೆಮನೆಗಳಲ್ಲೂ ಇರುವಂತಾಗಿ, ಮುಖಕ್ಕಷ್ಟೇ ವಯಸ್ಸು, ಹೃದಯಕ್ಕಿನ್ನೂ ಹರೆಯ ಎನ್ನಲಿ! ಜೀವನಶೈಲಿಯೂ ಕಾರಣ
ಸಂಶೋಧನೆಗಳ ಪ್ರಕಾರ ವಯಸ್ಸಾದಂತೆ ಆಗುವ ಬಹಳಷ್ಟು ದೈಹಿಕ ಮತ್ತು ಮನಸ್ಸಿನ ಬದಲಾವಣೆಗೆ, ಜೀವನಶೈಲಿಯೂ ಪ್ರಮುಖ ಕಾರಣ. ಕುಳಿತೇ ಇದ್ದರೆ ಹೇಗೆ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆಯೋ, ಹಾಗೆಯೇ ಕೆಲಸವಿಲ್ಲದ ಮೆದುಳಲ್ಲೂ ಕೊಬ್ಬು ತುಂಬುತ್ತದೆ. ಮೆದುಳಿನ ಜೀವಕೋಶಗಳಲ್ಲಿ ತುಂಬಿಕೊಳ್ಳುವ ಕೊಬ್ಬು ಅಲ್ಲಿನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ವಯಸ್ಸಾದಂತೆ ಸಾಯುವ ಮೆದುಳಿನ ಜೀವಕೋಶ (ನ್ಯೂರಾನ್) ತನ್ನ ಕೆಲಸದಲ್ಲಿ ಹಿಂದೆ ಬೀಳುತ್ತದೆ. ಈ ವಯಸ್ಸಲ್ಲಿ ಸಾಯುವ ನ್ಯೂರಾನ್‌ಗಳು ಮೊದಲಿನಂತೆ ಮತ್ತೆ ರೂಪುಗೊಳ್ಳುವುದಿಲ್ಲ. ಇದನ್ನೆಲ್ಲಾ ತಡೆಯಲು, ದೈಹಿಕವಾಗಿ ಚುರುಕಾಗಿರುವುದೇ ಪರಿಹಾರ. ವ್ಯಾಯಾಮ, ನಡಿಗೆಯಿಂದ ಮೆದುಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆಯಾಗುತ್ತದೆ. ಜೊತೆಗೆ, ಉತ್ತಮ ಆಹಾರ ಸೇವಿಸಿದರೆ, ಜ್ಞಾಪಕ ಶಕ್ತಿ ಚೆನ್ನಾಗಿರುವ ಜೊತೆಗೆ ದೇಹದ ತೂಕವೂ ಏರುವುದಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಮನಸ್ಸನ್ನು ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿಸಿದರೆ ದೇಹಕ್ಕೆ ವಯಸ್ಸಾಗಿದ್ದು ಅರಿವಿಗೇ ಬರುವುದಿಲ್ಲ. -ಶ್ರೀಕಲಾ ಡಿ.ಎಸ್.