Advertisement

ಸರ್ಕಾರ ರಕ್ಷಿಸಲು ಸಕ್ರಿಯರಾದ ಡಿಕೆಶಿ

01:25 AM May 29, 2019 | Team Udayavani |

ಬೆಂಗಳೂರು: ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಂಗಳವಾರ ಬೆಂಗಳೂರಿಗೆ ಆಗಮಿಸಿ, ಆಪರೇಷನ್‌ ಕಮಲದ ಆತಂಕದಲ್ಲಿರುವ ಮೈತ್ರಿ ಸರ್ಕಾರದ ರಕ್ಷಣೆಗೆ ಮುಂದಾಗಿದ್ದಾರೆ.

Advertisement

ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್‌ ಅವರನ್ನು ತಮ್ಮ ನಿವಾಸಕ್ಕೆ ಕರೆಯಿಸಿ ಮೈತ್ರಿ ಸರ್ಕಾರದ ಜತೆಗೆ ಮುಂದುವರಿಯುವಂತೆ ಸೂಚನೆ ನೀಡಿದ್ದಾರೆ. ಸರ್ಕಾರದ ಆರಂಭದಲ್ಲಿ ನಾಗೇಶ್‌ ಬಹಿರಂಗವಾಗಿ ಮೈತ್ರಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ, ನಂತರ ಕಾಂಗ್ರೆಸ್‌ ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ಗುಂಪಿನೊಂದಿಗೆ ಸೇರಿಕೊಂಡು ರಾಜ್ಯ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದುಕೊಂಡಿದ್ದರು.

ಪ್ರಸ್ತುತ ವಿಧಾನಸಭೆಯಲ್ಲಿ ಇಬ್ಬರು ಪಕ್ಷೇತರ ಶಾಸಕರಿದ್ದು, ಈಗಾಗಲೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ರಾಣೆಬೆನ್ನೂರು ಶಾಸಕ ಆರ್‌. ಶಂಕರ್‌ ಅವರೊಂದಿಗೆ ಮಾತುಕತೆ ನಡೆಸಿ, ಸಚಿವ ಸ್ಥಾನ ನೀಡುವ ಭರವಸೆ ನೀಡಿ, ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಈಗ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಮ್ಮ ಆಪ್ತರಾಗಿರುವ ನಾಗೇಶ್‌ ಅವರನ್ನು ಸರ್ಕಾರಕ್ಕೆ ಬೆಂಬಲಿಸುವಂತೆ ಹೇಳಿದ್ದಾರೆ. ಸರ್ಕಾರಕ್ಕೆ ಬೆಂಬಲ ನೀಡಲು ಸಚಿವ ಸ್ಥಾನ ನೀಡುವಂತೆ ನಾಗೇಶ್‌ ಬೇಡಿಕೆ ಇಟ್ಟಿದ್ದಾರೆ.

ಸದ್ಯ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳಲ್ಲಿ ತಮ್ಮ ಪಾಲಿನ ಒಂದು ಸ್ಥಾನ ಹಾಗೂ ಜೆಡಿಎಸ್‌ ಬಳಿ ಇರುವ ಎರಡು ಸ್ಥಾನ ಭರ್ತಿ ಮಾಡಲು ಮೈತ್ರಿ ಪಕ್ಷಗಳ ನಾಯಕರು ನಿರ್ಧರಿಸಿರುವುದರಿಂದ, ಸಿ.ಎಸ್‌.ಶಿವಳ್ಳಿ ಅವರ ನಿಧನದಿಂದ ಖಾಲಿಯಾಗಿರುವ ಸ್ಥಾನವನ್ನು ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್‌.ಶಂಕರ್‌ ಅವರಿಗೆ ನೀಡಲು ಈಗಾಗಲೇ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ನಾಗೇಶ್‌ಗೆ ಸಚಿವ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್‌ನಲ್ಲಿ ಯಾವುದೇ ತೀರ್ಮಾನವಾಗಿಲ್ಲ ಎಂದು ತಿಳಿದು ಬಂದಿದೆ.

ಸಿಎಂ ಭೇಟಿ: ಸರ್ಕಾರಕ್ಕೆ ಬೆಂಬಲ ಸೂಚಿಸಲು ಸಚಿವ ಸ್ಥಾನಕ್ಕೆ ನಾಗೇಶ್‌ ಬೇಡಿಕೆ ಇಟ್ಟಿದ್ದರಿಂದ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿಸಿ ದ್ದಾರೆ. ಸದ್ಯ ಜೆಡಿಎಸ್‌ ಕೋಟಾದಲ್ಲಿ ಖಾಲಿ ಇರುವ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ನಾಗೇಶ್‌ಗೆ ನೀಡುವ ಬಗ್ಗೆ ಮುಖ್ಯಮಂತ್ರಿ ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇದೇ ಸಂದರ್ಭದಲ್ಲಿ ಬಿಜೆಪಿಯ ಆಪರೇಷನ್‌ ಕಮಲಕ್ಕೆ ಪ್ರತಿತಂತ್ರ ರೂಪಿಸುವ ಕುರಿತು ಡಿ.ಕೆ. ಶಿವಕುಮಾರ್‌ ಹಾಗೂ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು, ಯಾವುದೇ ಕಾರಣಕ್ಕೆ ಕಾಂಗ್ರೆಸ್‌ ಶಾಸಕರು ಪಕ್ಷ ತೊರೆಯದಂತೆ ನೋಡಿಕೊಂಡು ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪುಟ್ಟರಂಗಶೆಟ್ಟರಿಗೆ ಸಿದ್ದರಾಮಯ್ಯ ತರಾಟೆ
ಮೈಸೂರು: ನಗರದಲ್ಲಿ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ ಅವರು ಪುಟ್ಟರಂಗಶೆಟ್ಟಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನಗರದ ಟಿ.ಕೆ.ಲೇ ಔಟ್ ಬಡಾವಣೆಯ ತಮ್ಮ ನಿವಾಸಕ್ಕೆ ಮಂಗಳವಾರ ಆಗಮಿಸಿದ ಸಚಿವ ಪುಟ್ಟರಂಗಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದು, ‘ಏನಯ್ನಾ ಪುಟ್ಟರಂಗಶೆಟ್ಟಿ, ನಿನ್ನ ಕ್ಷೇತ್ರದಲ್ಲಿ ಧ್ರುವಂಗೆ ಕಡಿಮೆ ಲೀಡ್‌ ಬಂದಿದೆಯಂತೆ? ನೀನು ಲೀಡ್ರಾ? ನಿನ್ನ ಕ್ಷೇತ್ರದಲ್ಲೇ ಲೀಡ್‌ ಕೊಡಿಸಲಿಕ್ಕಾಗಲಿಲ್ಲ ಅಂದ್ರೆ ಹೆಂಗಯ್ನಾ?’ ಎಂದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಧ್ರುವ ನಾರಾಯಣ ಸೋಲಿನ ಕುರಿತು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಮರು ಮಾತಿಲ್ಲದೆ ಸಚಿವ ಪುಟ್ಟರಂಗಶೆಟ್ಟಿ ಅಲ್ಲಿಂದ ಕಾಲ್ಕಿತ್ತರು.

ಅಮಾನತು ವಾಪಸ್‌: ಹೈಕಮಾಂಡ್‌ಗೆ ಬಿಟ್ಟಿದ್ದು
ಕಂಪ್ಲಿ: ರೆಸಾರ್ಟ್‌ನಲ್ಲಿ ಶಾಸಕರ ಮಧ್ಯೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ತಮ್ಮನ್ನು ಪಕ್ಷದಿಂದ ಮಾಡಿರುವ ಅಮಾನತು ವಾಪಸ್‌ ತೆಗೆದುಕೊಳ್ಳುವಂತೆ ನಾನು ಮನವಿ ಮಾಡಿಕೊಳ್ಳುವುದಿಲ್ಲ. ಅಮಾನತು ವಾಪಸ್‌ ಪಡೆಯುವುದು, ಬಿಡುವುದು ಕಾಂಗ್ರೆಸ್‌ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಶಾಸಕ ಜೆ.ಎನ್‌. ಗಣೇಶ್‌ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತದಾರರು ಲೀಡ್‌ ಕೊಟ್ಟಿದ್ದಾರೆ. ಚುನಾವಣೆ ಸಮಯದಲ್ಲಿ ಕ್ಷೇತ್ರದಿಂದ ದೂರ ಇದ್ದಾಗ ಕೂಡ, ಮತದಾರರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಒಂದು ವೇಳೆ ತಾವು ಕ್ಷೇತ್ರದಲ್ಲೇ ಇದ್ದಿದ್ದರೆ ಕಾಂಗ್ರೆಸ್‌ಗೆ 40 ಸಾವಿರ ಮತಗಳ ಲೀಡ್‌ ಕೊಟ್ಟು, ವಿ.ಎಸ್‌. ಉಗ್ರಪ್ಪರನ್ನು ಗೆಲ್ಲಿಸಿಕೊಂಡು ಬರುತ್ತಿದ್ದೆ ಎಂದರು. ಕಾಂಗ್ರೆಸ್‌ ನಿರ್ಲಕ್ಷ್ಯ ತೋರಿದ್ದರಿಂದ ಬಳ್ಳಾರಿ ಕ್ಷೇತ್ರ ಕೈ ತಪ್ಪಿದೆ. ತಾವು ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಇಲ್ಲದಿದ್ದರೂ ಸಹಿತ ಕ್ಷೇತ್ರದ ಜನತೆ ತಮ್ಮ ಮೇಲಿನ ಅಭಿಮಾನದಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಅಧಿಕ ಮತ ನೀಡಿರುವುದನ್ನು ಪಕ್ಷದ ಮುಖಂಡರು ಗಮನಿಸಬೇಕಿದೆ ಎಂದರು.

ಗೌಡರ ಆಶೀರ್ವಾದ ಪಡೆದ ಸಂಸದ ಡ್ಯಾನಿಶ್‌
ಬೆಂಗಳೂರು: ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದರು. ಜೆಡಿಎಸ್‌ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಎಸ್‌ಪಿ ಸೇರಿ ಉತ್ತರಪ್ರದೇಶದ ಅಮ್ರಾಹ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಅವರು ದೇವೇಗೌಡರ ನಿವಾಸಕ್ಕೆ ಆಗಮಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಡ್ಯಾನಿಶ್‌ ಅಲಿ, ದೇವೇಗೌಡರು ನನ್ನ ನಾಯಕರು, ರಾಷ್ಟ್ರೀಯ ನಾಯಕರು. ಅವರ ಸಮ್ಮತಿ ಪಡೆದೇ ನಾನು ಬಿಎಸ್‌ಪಿಗೆ ಹೋಗಿದ್ದೆ. ಸಂಸದನಾಗಿ ಆಯ್ಕೆಯಾಗಿ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ಸೋಲು ಅನುಭವಿಸಿರುವುದು ನನಗೆ ತೀವ್ರ ನೋವು ತಂದಿದೆ. ಅವರು ಸಂಸತ್‌ನಲ್ಲಿ ಇದ್ದರೆ ನಮಗೆಲ್ಲಾ ಶಕ್ತಿ ಇರುತ್ತಿತ್ತು ಎಂದು ತಿಳಿಸಿದರು.

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ದರ್ಶನಾಪುರ

ಶಹಾಪುರ: ‘ಎಲ್ಲ ಕಾಂಗ್ರೆಸ್‌ ಶಾಸಕರೂ ಸಚಿವ ಸ್ಥಾನದ ಆಕಾಂಕ್ಷಿಗಳೇ. ನಾನೂ ಆಕಾಂಕ್ಷಿ. ಆದರೆ, ಯಾವ ಮಾನದಂಡ ಅನುಸರಿಸಿ ಸಚಿವ ಸ್ಥಾನ ಕೊಡಲಾಗುತ್ತದೆ ಎಂಬುದು ಗೊತ್ತಿಲ್ಲ’ ಎಂದು ಶಾಸಕ ಶರಣ ಬಸಪ್ಪಗೌಡ ದರ್ಶನಾಪುರ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಬುಧವಾರ ಶಾಸಕಾಂಗ ಪಕ್ಷದ ಸಭೆ ಇದೆ. ಆದರೆ, ಸಚಿವ ಸ್ಥಾನದ ಬಗ್ಗೆ ನನಗೇನೂ ತಿಳಿದಿಲ್ಲ. ಯಾದಗಿರಿ ಜಿಲ್ಲೆಗೆ ಒಂದೂ ಸಚಿವ ಸ್ಥಾನ ನೀಡಿಲ್ಲ. ಇದನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರರ ಗಮನಕ್ಕೆ ತಂದಿದ್ದೇನೆ. ಅವಕಾಶ ಕೊಟ್ಟರೆ ಸಂತೋಷ. ಸಮರ್ಪಕವಾಗಿ ನಿಭಾಯಿಸುತ್ತೇನೆ. ಆದರೆ ಪಕ್ಷ ಬಿಡುವ, ದ್ರೋಹ ಬಗೆಯುವ ಕೆಲಸವನ್ನು ಎಂದಿಗೂ ಮಾಡಲ್ಲ. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ಇದರಲ್ಲಿ ಎರಡು ಮಾತಿಲ್ಲ’ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next