Advertisement

ಸಕ್ರಿಯಗೊಂಡ ಮೀನುಗಾರಿಕೆ: ಬೆಸ್ತರಲ್ಲಿ ಹೊಸ ಚೈತನ್ಯ

10:08 PM Aug 01, 2019 | Sriram |

ಕಾಸರಗೋಡು: ಐವತ್ತೆರಡು ದಿನಗಳ ರಜೆಯ ಬಳಿಕ ಆ. 1ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡಿದ್ದು, ಮೀನುಗಾರಿಕೆ ಯಲ್ಲಿ ತೊಡಗಿರುವ ಬೆಸ್ತರಿಗೆ ಹೊಸ ಚೈತನ್ಯ ಬಂದಿದೆ. ಗುರುವಾರ ಬಹುತೇಕ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕಿಳಿದಿದ್ದು, ಮೀನುಗಾರಿಕೆ ಮತ್ತೆ ಆರಂಭಿಸಿವೆ. ಶೆಡ್‌ಗಳಲ್ಲಿದ್ದ ಅಥವಾ ಲಂಗರು ಹಾಕಿ ದಡದಲ್ಲಿ ನಿಲ್ಲಿಸಿದ್ದ ಬೋಟ್‌ಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯೂ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಕಾಸರಗೋಡಿನಲ್ಲೂ ಆಳ ಸಮುದ್ರ ಮೀನುಗಾರಿಕೆ ಸಕ್ರಿಯಗೊಳ್ಳಲಿದೆ.

Advertisement

ಆಳ ಸಮುದ್ರದತ್ತ ಮೀನುಗಾರರು
ಜು. 31ರ ಮಧ್ಯರಾತ್ರಿ ಟ್ರಾಲಿಂಗ್‌ ನಿಷೇಧ ಕಾಲಾವಧಿ ಕೊನೆಗೊಂಡಿದ್ದು, ಬೆಸ್ತರಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ. ಕಳೆದ 52 ದಿನಗಳಿಂದ ಸಾಂಪ್ರದಾಯಿಕ ದೋಣಿಗಳಲ್ಲಿ ಬಲೆ ಬೀಸಿ ಸಮುದ್ರ ದಡದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೆಸ್ತರು ಇದೀಗ ಆಳ ಸಮುದ್ರಕ್ಕೆ ತೆರಳುತ್ತಿದ್ದಾರೆ.

ಮೀನು ಖರೀದಿ ಸಕ್ರಿಯ
ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಭಾರೀ ಮೀನು ಸಹಿತ ದಡ ಸೇರಿವೆ. ಬೋಟ್‌ಗಳಲ್ಲಿ ಬಂದ ಮೀನು ಖರೀದಿಸಲು ನೂರಾರು ಮಂದಿ ಮಹಿಳೆಯರು ಸಮುದ್ರ ಕಿನಾರೆಗೆ ತಲುಪಿದ್ದು, ಮೀನು ಖರೀದಿಯಲ್ಲಿ ಸಕ್ರಿಯರಾಗಿದ್ದಾರೆ. ಮೀನು ಖರೀದಿಸಿ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಸಣ್ಣ ಮತ್ತು ದೊಡ್ಡ ಗಾತ್ರದ ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿವೆ.

ಮುಂದಿನ ಕೆಲವೇ ದಿನಗಳಲ್ಲಿ ಎಲ್ಲ ಬೋಟ್‌ಗಳೂ ಕೂಡ ಮೀನುಗಾರಿಕೆಗೆ ತೆರಳಲಿವೆ. ಟ್ರಾಲಿಂಗ್‌ ನಿಷೇಧದ ಬಳಿಕ ಮೀನುಗಾರಿಕೆಗೆ ತೆರಳಿದ ಯಾಂತ್ರೀಕೃತ ದೋಣಿಗಳಿಗೆ ಪ್ರಥಮ ದಿನ ಸಾಕಷ್ಟು ಸಿಗಡಿ ಮತ್ತು ಬೆರಕೆ ಮೀನಿನ ಮರಿಗಳು ಲಭಿಸಿವೆ. ಚೆರ್ವತ್ತೂರಿನ ಮಡಕರ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿ ನಿಂತಿದ್ದ ಎಲ್ಲ ದೋಣಿಗಳು ಮೀನುಗಾರಿಕೆಗೆ ತೆರಳಲು ಉತ್ಸುಕತೆಯಲಿವೆ. ಈಗಾಗಲೇ ಹಲವು ದೋಣಿಗಳು ಸಮುದ್ರಕ್ಕಿಳಿದಿವೆ. ಕಾಸರಗೋಡು ಜಿಲ್ಲೆಯ ಮೀನುಗಾರರ ಜತೆಯಲ್ಲಿ ಇತರ ರಾಜ್ಯಗಳ ಕಾರ್ಮಿಕರು ಮೀನುಗಾರಿಕೆಗೆ ಸಾಗುತ್ತಿದ್ದಾರೆ.

ಶೀಘ್ರ ಯಾಂತ್ರೀಕೃತ ದೋಣಿಗಳು ಸಮುದ್ರಕ್ಕೆ
ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಯಾಂತ್ರೀಕೃತ ದೋಣಿಗಳು ಸಮುದ್ರಕ್ಕಿಳಿಯುವ ಮೂಲಕ ಮೀನು ಮಾರುಕಟ್ಟೆಯೂ ಸಕ್ರಿಯವಾಗಲಿದೆ. ಇದೇ ವೇಳೆ ಅನ್ಯ ರಾಜ್ಯಗಳಿಂದ ಬರುವ ಮೀನುಗಳಿಗೆ ವಿಷಾಂಶವುಳ್ಳ ರಾಸಾಯನಿಕ ವಸ್ತುಗಳನ್ನು ಹಾಕುತ್ತಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಮೀನು ಮಾರುಕಟ್ಟೆ ಹಿನ್ನಡೆ ಅನುಭವಿಸಿತ್ತು. ಆದರೆ ಇದೀಗ ರಾಜ್ಯದಲ್ಲಿ ಮೀನುಗಾರಿಕೆ ಆರಂಭಗೊಂಡಿರುವುದರಿಂದ ಕೇರಳದ ಮೀನುಗಾರರು ಬಲೆ ಬೀಸಿ ಪಡೆದ ಮೀನುಗಳು ಮಾರುಕಟ್ಟೆಗೆ ಬರಲಿವೆ. ಇದರಿಂದಾಗಿ ಮತ್ತೆ ಮೀನು ಮಾರುಕಟ್ಟೆ ಹಿಂದಿನಂತೆ ಹಬ್ಬದ ವಾತಾವರಣಕ್ಕೆ ಮರಳಲಿದೆ.

Advertisement

ಕೆಲವು ದಿನಗಳ ವರೆಗೆ ಮೀನಿನ ದರ ದುಬಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮೀನು ಮಾರಾಟಗಾರರು ಹೇಳುತ್ತಿದ್ದಾರೆ.

ಟ್ರಾಲಿಂಗ್‌ ನಿಷೇಧದ ಬಳಿಕ ಆ. 1ರಿಂದ ಮತ್ತೆ ಆಳ ಸಮುದ್ರ ಮೀನುಗಾರಿಕೆ ಆರಂಭಗೊಂಡಿದ್ದು, ಬೆಸ್ತರಲ್ಲಿ ಹೊಸ ಚೈತನ್ಯ ಮೂಡಿದೆ. ಕಾಸರಗೋಡು ಜಿಲ್ಲೆಯ ಮಡಕರ ಮೀನುಗಾರಿಕಾ ಬಂದರು ಮತ್ತೆ ಸಕ್ರಿಯಗೊಂಡಿದೆ. ಅದೇ ರೀತಿಯಲ್ಲಿ ಕಾಸರಗೋಡು ಕಡಪ್ಪುರದಲ್ಲೂ ಮೀನುಗಾರಿಕೆಗೆ ತೆರಳಿದ ದೋಣಿಗಳು ದಡ ಸೇರಿದ್ದು, ಮೀನು ಮಾರಾಟಗಾರರು ಮೀನು ಖರೀದಿಸಲು ದೋಣಿಗಳಿಗೆ ಮುತ್ತಿಗೆ ಹಾಕುತ್ತಿರುವ ದೃಶ್ಯ ಕಂಡು ಬಂತು.

ಚಿತ್ರ : ಶ್ರೀಕಾಂತ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next