Advertisement

ಕೋವಿಡ್ ನಿಯಂತ್ರಣ: ವಾರ್ಡ್‌-ಗ್ರಾಮ ಮಟ್ಟದಲ್ಲಿ ಕಾರ್ಯಪಡೆಗಳು

09:27 PM May 02, 2021 | Team Udayavani |

ಮಹಾನಗರ: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈರಸ್‌ ಸರಪಳಿ ತುಂಡರಿಸಲು, ಸಮುದಾಯ ಮಟ್ಟದಲ್ಲಿ ಸೋಂಕು ಹರಡುವುದನ್ನು ವ್ಯವಸ್ಥಿತವಾಗಿ ತಡೆಗಟ್ಟಲು ತಳಮಟ್ಟದಲ್ಲಿ ಸಾರ್ವಜನಿಕ ಸಹಯೋಗವನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಕಳೆದ ವರ್ಷ ಕೊರೊನಾ ಮೊದಲ ಅಲೆ ಕಾಣಿಸಿಕೊಂಡಿದ್ದ ವೇಳೆ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ರಚಿಸಲಾಗಿದ್ದ ಕಾರ್ಯಪಡೆಗಳನ್ನು ಇದೀಗ ಮತ್ತೆ ಸಕ್ರಿಯಗೊಳಿಸಲಾಗುತ್ತಿದ್ದು, ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಕಾರ್ಯಾನಿರತವಾಗಲಿವೆ.

Advertisement

ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 285 ವಾರ್ಡ್‌ಗಳಲ್ಲಿ ಕಾರ್ಯಪಡೆಗಳನ್ನು ರಚಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದ್ದು, ಈಗಾಗಲೇ ಕೆಲವೆಡೆ ರಚನೆಯಾಗಿವೆ. ಗ್ರಾಮೀಣಮಟ್ಟದಲ್ಲಿ ಜಿಲ್ಲೆಯ ಒಟ್ಟು 226 ಗ್ರಾ.ಪಂ. ಮಟ್ಟದಲ್ಲಿ ಹಾಗೂ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಕಾರ್ಯಪಡೆಗಳು ಅಸ್ತಿತ್ವಕ್ಕೆ ಬಂದಿವೆ. ಆ ಮೂಲಕ ಕೊರೊನಾ ನಿಯಂತ್ರಣ ಜಾಗೃತಿ ಕಾರ್ಯದಲ್ಲಿ ನಿರತವಾಗಿವೆ.

ಕಾರ್ಪೋರೆಟರ್‌ಗೆ ವಾರ್ಡ್‌ ಕಾರ್ಯಪಡೆ ನೇತೃತ್ವ ಪಾಲಿಕೆಗಳಲ್ಲಿ ಆಯಾ ವಾರ್ಡ್‌ನ ಕಾರ್ಪೋರೆಟರ್‌ಗೆ ವಾರ್ಡ್‌ ಕಾರ್ಯ ಪಡೆಯ ನೇತೃತ್ವವನ್ನು ವಹಿಸಿ ಕೊಡಲಾ ಗುತ್ತಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾ ಯತ್‌ಗಳಲ್ಲಿ ಆಯಾಯಾ ವಾರ್ಡ್‌ನ ಸದಸ್ಯರು ಕಾರ್ಯಪಡೆಯ ಮುಖ್ಯ ಸ್ಥರಾಗಿರುತ್ತಾರೆ. ಮಹಾನಗರ ಪಾಲಿಕೆ, ನಗರಾಡಳಿತ ಸಂಸ್ಥೆಗಳ ಅಧಿಕಾರಿಗಳು, ಸ್ಥಳೀಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಯರು, ಸ್ವಯಂಸೇವಾ ಸಂಸ್ಥೆಗಳ ಪ್ರತಿ ನಿಧಿಗಳು, ನಾಗರಿಕ ಪ್ರತಿನಿಧಿಗಳು  ಕಾರ್ಯ ಪಡೆಯ ಸದಸ್ಯರಾಗಿರುತ್ತಾರೆ.

ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರು ಕಾರ್ಯ ಪಡೆಯ ಮುಖ್ಯಸ್ಥರಾಗಿರುತ್ತಾರೆ. ಉಪಾಧ್ಯಕ್ಷರು, ಗ್ರಾಮ ಪಂಚಾಯತ್‌ ಸದಸ್ಯರು, ವೈದ್ಯಾಧಿಕಾರಿ, ಅಂಗನವಾಡಿ ಕಾರ್ಯಕರ್ತೆ ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಗ್ರಾಮಕರಣಿಕರು, ಪಿಡಿಒ ಸದಸ್ಯರಾಗಿರುತ್ತಾರೆ.

ಕಾರ್ಯಪಡೆಯ ಕಾರ್ಯಗಳು :

Advertisement

ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ತೊಳೆಯುವುದು ಮುಂತಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಈ ಮೂಲಕ ವೈರಾಣು ಹರಡುವಿಕೆಯ ಸರಪಳಿ ಮುರಿಯುವುದು (ಚೈನ್‌ಬ್ರೆಕ್‌) .

ಜ ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಪ್ರತಿಯೋರ್ವರಲ್ಲೂ ಜಾಗೃತಿ ಮೂಡಿಸುವುದು ಹಾಗೂ ಲಸಿಕೆ ಪಡೆದುಕೊಳ್ಳುವಂತೆ ಪ್ರೇರೇಪಿಸುವುದು.

ಸ್ವಚ್ಛತೆ, ನೈರ್ಮಲೀಕರಣ, ಸೋಂಕು ನಿವಾರಕ ದ್ರಾವಣ ಸಿಂಪಡನೆ, ಜೈವಿಕ ವೈದ್ಯಕೀಯ ತ್ಯಾಜ್ಯ ಒಳಗೊಂಡತೆ ತ್ಯಾಜ್ಯ ಸಂಗ್ರಹಣೆ ಕೆಲಸಗಳನ್ನು ನಗರ ಸ್ಥಳೀಯ ಸಂಸ್ಥೆ ಸಮರ್ಪಕವಾಗಿ ನಿರ್ವಹಿಸುವುದನ್ನು ಖಾತ್ರಿ ಪಡಿಸಿಕೊಳ್ಳುವುದು. ರೋಗಿಗಳಿಗೆ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಸುಲಭವಾಗಿ ಲಭಿಸುವಂತೆ ಸಹಾಯ ಮಾಡುವುದು.

ಕೋವಿಡ್ ಸೋಂಕು ಲಕ್ಷಣ ಕಾಣಿಸಿಕೊಂಡವರು ಕೋವಿಡ್‌ ಆರೈಕೆ ಕೇಂದ್ರಗಳು ಅಥವಾ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು. ರೋಗ ಲಕ್ಷಣ ಲಕ್ಷಣಗಳಿಲ್ಲದೆ ಮನೆಯಲ್ಲೇ ಹೋಂ ಕ್ವಾರೆಂಟೈನ್‌ಗೊಳಗಾದವರು ಸೂಕ್ತ ನಿಬಂಧನೆಗಳನ್ನು ಪಾಲನೆ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಳ್ಳುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲಿದೆ.

ಜಿಲ್ಲೆಯಲ್ಲಿ ನಗರಾಡಳಿತ ಸಂಸ್ಥೆಗಳಿಗೆ ಸಂಬಂಧಪಟ್ಟು ಎಲ್ಲ ವಾರ್ಡ್‌ಗಳಲ್ಲೂ ವಾರ್ಡ್‌ಮಟ್ಟದ ಕಾರ್ಯಪಡೆಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಕಾರ್ಯಪಡೆಗಳು ವಾರ್ಡ್‌ಮಟ್ಟದಲ್ಲಿ ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಲಿವೆ. ಗ್ರಾಮೀಣ ಮಟ್ಟದಲ್ಲಿ ಗ್ರಾ.ಪಂ. ಮಟ್ಟದಲ್ಲಿ ಕೊರೊನಾ ಕಾರ್ಯಪಡೆಗಳಿರುತ್ತವೆ.  -ಗಾಯತ್ರಿ ನಾಯಕ್‌, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next