Advertisement

ಅಪರಾಧ ಚಟುವಟಿಕೆ ಬಗ್ಗೆ ನಿರ್ಲಕ್ಷ್ಯ ತೋರಿದ್ರೆ ಕ್ರಮ: ಸಚಿವ ಆರಗ ಜ್ಞಾನೇಂದ್ರ

10:18 PM Dec 26, 2022 | Team Udayavani |

ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರ ಮತ್ತು ದೃಶ್ಯಗಳ ವೀಕ್ಷಣೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಸೈಬರ್‌ ಅಪರಾಧ ಚಟುವಟಿಕೆಗಳ ಬಗ್ಗೆ ಪೊಲೀಸರು ನಿರ್ಲಕ್ಷ್ಯ ವಹಿಸಿದರೆ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

Advertisement

ಪರಿಷತ್‌ನಲ್ಲಿ ಸೋಮವಾರ ಕಾಂಗ್ರೆಸ್‌ ಸದಸ್ಯ ಪಿ. ಆರ್‌. ರಮೇಶ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ದೃಶ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗೆ ಸಂಬಂಧಿಸಿ 562 ಎಫ್ಐಆರ್‌ಗಳು ದಾಖಲಾಗಿವೆ. ಜತೆಗೆ ಕೇಂದ್ರ ಸರಕಾರ ಸ್ಥಾಪಿಸಿದ ನ್ಯಾಷನಲ್‌ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌ನಲ್ಲಿ ಇದುವರೆಗೆ 80,379 ದೂರುಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಅಶ್ಲೀಲ ದೃಶ್ಯಗಳು ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಾಗಾಗಿ ಸೈಬರ್‌ ಅಪರಾಧಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸೈಬರ್‌ ಕ್ರೈಂ ವಂಚನೆಗೊಳಗಾದವರ ಅನುಕೂಲಕ್ಕಾಗಿ ಸರಕಾರ ಪ್ರತಿ ಜಿಲ್ಲೆಯಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಒಂದೊಂದು ಸೈಬರ್‌ ಠಾಣೆಗಳನ್ನು ತೆರೆಯಲಾಗಿದೆ.

ರಾಜಧಾನಿ ಬೆಂಗಳೂರು ಸಹಿತ 8 ವಿಭಾಗಗಳಲ್ಲಿ ಸಹ ಸೈಬರ್‌ ಪೊಲೀಸ್‌ ಠಾಣೆಗಳನ್ನು ಆರಂಭಿಸಲಾಗಿದೆ. ಜಿಲ್ಲಾವಾರು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳನ್ನು ಆರಂಭಿಸಲಾಗಿದೆ. ಅಲ್ಲದೆ ರಾಜ್ಯದ ಸಿಒಡಿ ಹಾಗೂ ಸೈಬರ್‌ ಪೊಲೀಸರಿಗೆ ಅಹಮದಾಬಾದ್‌ ಎಫ್ಎಸ್‌ಎಲ್‌ ಅಧ್ಯಯನ ಕೇಂದ್ರಕ್ಕೆ ಕಳುಹಿಸಿ ತರಬೇತಿ ನೀಡಲಾಗುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸೈಬರ್‌ ಅಪರಾಧ ತಡೆಗೆ ಸಾರ್ವಜನಿಕರ ಜವಾಬ್ದಾರಿ ಅಧಿಕವಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next