Advertisement

ಜಾತಿ ಪ್ರಮಾಣ ಪತ್ರ ಗೊಂದಲ ನಿವಾರಣೆಗೆ ಕ್ರಮ

05:00 PM Sep 24, 2018 | Team Udayavani |

ಬಳ್ಳಾರಿ: ಹೂಗಾರ ಸಮುದಾಯಕ್ಕೆ 2ಎ ಪ್ರಮಾಣ ಪತ್ರ ನೀಡುವಲ್ಲಿ ಇರುವ ಗೊಂದಲಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಮೇಲ ಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಶಾಸಕಜಿ.ಸೋಮಶೇಖರರೆಡ್ಡಿ ಭರವಸೆ ನೀಡಿದರು. 

Advertisement

ನಗರದ ಡಾ| ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅಖೀಲ ಕರ್ನಾಟಕ ಹೂಗಾರ ಮಹಾಸಭಾ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಲಾಗಿದ್ದ ಸರ್ವ ಸದಸ್ಯರ 7ನೇ ವಾರ್ಷಿಕ ಮಹಾಸಭೆ ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಹೂಗಾರ ಸಮುದಾಯ 2ಎ ಮೀಸಲಾತಿಯಡಿ ಬರುತ್ತದೆ. ಜಾತಿ ಪ್ರಮಾಣ ಪತ್ರ ವಿತರಿಸುವಲ್ಲಿ ತಹಶೀಲ್ದಾರ್‌ರು ಸೃಷ್ಟಿಸುತ್ತಿರುವ ಗೊಂದಲಗಳ ಬಗ್ಗೆ ನನ್ನ ಗಮನಕ್ಕಿಲ್ಲ. ಸರ್ಕಾರದ ಮೀಸಲಾತಿ ಆದೇಶದಂತೆ ಅಧಿಕಾರಿಗಳು ಪ್ರಮಾಣ ಪತ್ರಗಳನ್ನು ವಿತರಿಸಬೇಕು. ಈ ಕುರಿತು ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಇರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಇನ್ನು ಸಮುದಾಯದಲ್ಲಿ ವಸತಿ ರಹಿತ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿದಲ್ಲಿ ನಗರ ಹೊರವಲಯದ ಮುಂಡ್ರಿಗಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳನ್ನು ವಿತರಿಸಲಾಗುವುದು. ಅನರ್ಹರಿಗೆ ಅವಕಾಶವಿಲ್ಲ. 

ಈಗಾಗಲೇ ಮುಂಡ್ರಿಗಿಯಲ್ಲಿ 5616 ಮನೆಗಳ ನಿರ್ಮಾಣಕೆಕ ಟೆಂಡರ್‌ ಕರೆಯಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 19 ಕೋಟಿ ರೂ. ವೆಚ್ಚದಲ್ಲಿ ಜಮೀನು ಖರೀದಿಸಲಾಗಿದ್ದು, ಇದೀಗ 300 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದ ಶಾಸಕ ಸೋಮಶೇಖರರೆಡ್ಡಿ, ಹೂ ಮಾರಾಟಕ್ಕೆ ನಿಗದಿತ ಸ್ಥಳ, ಮಾರುಕಟ್ಟೆ ನಿರ್ಮಾಣಕ್ಕೆ ಬೇಡಿಕೆಯಿದೆ. ಶೀಘ್ರದಲ್ಲೇ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಹೂಗಾರ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಗುರುಲಿಂಗಪ್ಪ ಮಾತನಾಡಿ, ಸಮುದಾಯದವರು ಆರ್ಥಿಕ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಬೇಕು. ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿ, ಹೂಗಾರ ಸಮುದಾಯದವರ ಮನಸ್ಸು ಹೂವಿನಂತೆ. ಎಲ್ಲ ಸಮುದಾಯದವರನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ಯಾವತ್ತೂ ಜಾತಿ ಭೇದ ಮಾಡೋಲ್ಲ. ಸಣ್ಣ ಸಮುದಾಯವೆಂದು ಬೇಡಿಕೆ ಸಲ್ಲಿಸದಿದ್ದರೇ ಯಾರೂ ನಮ್ಮನ್ನು ಗುರುತಿಸುವುದಿಲ್ಲ. ಇಲ್ಲಿವರೆಗೆ ಎಲ್ಲ ಸರ್ಕಾರಗಳು ಪ್ರತಿಯೊಂದು ಸಮುದಾಯದ ಅಭಿವೃದ್ಧಿಗಾಗಿ ಮಂಡಳಿ ರಚಿಸಿದೆ. ಆದರೆ ಹೂಗಾರ ಸಮುದಾಯಕ್ಕೆ ರಚನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಹೋರಾಟದ
ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದರು.

ಎಮ್ಮಿಗನೂರು ಹಂಪಿ ಸಾವಿರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಕ್ಯಾದಿಗೆಹಾಳ್‌ ಶಿವಲಿಂಗಪ್ಪ ತಾತ, ಕುರೇಕೋಪ್ಪದ ಎಚ್‌.ಎಂ.ಶರಣ ಬಸಯ್ಯ ಸ್ವಾಮೀಜಿ, ಉರವಕೊಂಡದ ಡಾ| ಕರಿಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ರಾಮಲಿಂಗಪ್ಪ ಹೂಗಾರ, ಮುಖಂಡರಾದ ಮಲ್ಲನಗೌಡ, ಶ್ರೀನಿವಾಸ್‌ ಮೋತ್ಕರ್‌, ಜಿ.ಪಂಪಾಪತಿ, ಗುರುಮೂರ್ತಿ, ಶ್ರೀಧರ್‌, ಜೆ.ರುದ್ರಪ್ಪ, ವಿಶ್ವನಾಥ್‌ ಇದ್ದರು. ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಈಶ್ವರಪ್ಪ ಹೂಗಾರ ಅವರು ಮಹಾಸಭೆಯ ವಾರ್ಷಿಕ ವರದಿ ಮಂಡಿಸಿದರು. ಜಿ.ಮಲ್ಲಿಕಾರ್ಜುನ, ಟಿ.ಎಂ.ಬಸವರಾಜ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next