ಸಕಲೇಶಪುರ: ಕಾಡಾನೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅರಣ್ಯ ಸಚಿವರು ಹಾಗೂ ಅಧಿಕಾರಿಗಳ ಜತೆ ಶೀಘ್ರವಾಗಿ ಮಾತುಕತೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.
ಕೋವಿಡ್ 19- ಮುನ್ನೆಚ್ಚರಿಕೆ ವಹಿಸಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಕೋವಿಡ್ 19 ಟಾಸ್ಕ್ಫೋರ್ಸ್ ಹಾಗೂ ವಿವಿಧ ಇಲಾಖೆಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಕಲೇಶಪುರ ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮದಿಂದಾಗಿ ಈವರೆಗೂ ಕೋವಿಡ್ 19 ಸೋಂಕು ಕಂಡು ಬಂದಿಲ್ಲ. ಇನ್ನಷ್ಟು ಮುನ್ನೆಚ್ಚರಿಕೆ ವಹಿಸುವ ಮೂಲಕ ಕೋವಿಡ್ 19 ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಇಲಾಖೆಯ ಪ್ರಗತಿಯ ಕುರಿತು ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಮಹೇಶ್ ತಾಲೂಕಿನಲ್ಲಿ ಒಟ್ಟು 445 ಹಳ್ಳಿಗಳು ಹಾಗೂ ನಗರದ 23 ವಾರ್ಡಗಳಲ್ಲಿ ಹಲವಾರು ಜನರ ತಪಾಸಣೆ ನಡೆಸಲಾಗಿದೆ. 110ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಜೊತೆಗೆ 258 ಅಂಗನವಾಡಿ ಕಾರ್ಯಕರ್ತೆಯರು 29 ಆರೋಗ್ಯ ಸಹಾಯಕರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ವೈದ್ಯರ ಹುದ್ದೆ ಭರ್ತಿ ಮಾಡಲು ಕ್ರಮ: ತಾಲೂಕಿನಲ್ಲಿ ಒಟ್ಟು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು ಒಂದು ಸಾರ್ವ ಜನಿಕ ಆಸ್ಪತ್ರೆ ಇದೆ. ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರ ಕೊರತೆ ಇದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ವೈದ್ಯರ ಕೊರತೆ ಬಗ್ಗೆ ಮಾತ ನಾಡಿದ ಸಚಿವರು ಖಾಲಿ ಇರುವ ವೈದ್ಯರ ಹುದ್ದೆಗಳ ಭರ್ತಿ ಮಾಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನಿವಾರಿಸುವ ಕುರಿತು ಆರೋಗ್ಯ ಸಚಿವರೊಡನೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು. ರಾಷ್ಟ್ರೀಯ ಹೆದ್ದಾರಿ 75ರ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿರುವ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದರು. ಡೀಸಿ ಗಿರೀಶ್, ಜಿಪಂ ಮುಖ್ಯ ಕಾರ್ಯದರ್ಶಿ ಪರಮೇಶ್, ಎಸ್ಪಿ ಶ್ರೀನಿವಾಸ್ ಗೌಡ, ತಾಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಮಂಜುನಾಥ್, ತಾಪಂ ಇಒ ಹರೀಶ್ ಮೊದಲಾದವರಿದ್ದರು.