ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇವೆ. ಇದಕ್ಕೆ ವಿಶೇಷ ಆಯುಕ್ತರ ನೇಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ನಗರದ ಅಭಿವೃದ್ಧಿಗೆ 6 ಸಾವಿರ ಕೋಟಿ ರೂ. ನೀಡಲಾಗಿದೆ. 1800 ಕೋಟಿ ರೂ ರಾಜಕಾಲುವೆ ನಿರ್ವಹಣೆಗೆ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮೆಟ್ರೋ ಮೂರನೇ ಹಂತದ ಯೋಜನೆಗೆ ಅನುಮೋದನೆ ಕೊಡಲಾಗಿದೆ. ದೀರ್ಘಕಾಲದ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆಸಿಡ್ ದಾಳಿಗೆ ಒಳಗಾದ ಹೆಣ್ಣು ಮಕ್ಕಳ ಜೀವನವೇ ಹಾಳಾಗಿ ಹೋಗುತ್ತದೆ. ಅವರಿಗಾಗಿ 3 ಸಾವಿರ ಧನ ಸಹಾಯವನ್ನು 10 ಸಾವಿರ ಮಾಡಿದ್ದೇವೆ. ಜನ ಕಷ್ಟದಲ್ಲಿದ್ದಾಗ ಅದನ್ನು ನಿವಾರಣೆ ಮಾಡುವ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ಬಿಬಿಎಂಪಿಯಿಂದ ಕಾಂಗ್ರೆಸ್ ಕಾಲದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗಿದೆ. ಇದೆಲ್ಲವನ್ನೂ ತನಿಖೆಗೆ ಹೇಳಿದ್ದೇನೆ. ಎಸಿಬಿ ಮಾಡಿದ್ದೇ ಕಾಂಗ್ರೆಸ್ ಮೇಲಿನ ಮೇಲಿನ ಅಕ್ರಮ ಮುಚ್ಚಿಕೊಳ್ಳುವುದಕ್ಕೆ. 59 ಆರೋಪಗಳನ್ನು ಮುಚ್ಚಿ ಹಾಕಿದರು. ಅತಿ ದೊಡ್ಡ ಡಿ ನೋಟಿಫಿಕೇಷನ್ ಹಗರಣ ಅಂದರೆ ರಿಡೂ ಹಗರಣ. ಸುಳ್ಳು ಆರೋಪ ಮಾಡುವುದು, ಸುಳ್ಳು ವದಂತಿಯನ್ನು ಹಬ್ಬಿಸುವುದು ಮತ್ತು ಪೋಸ್ಟರ್ ಹಚ್ಚುವುದು ನಿಮಗೆ ಶೋಭೆ ತರಲ್ಲ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆ ತೆಗೆದುಕೊಂಡರು.
ಮರೀನಾ
ಕರಾವಳಿಯಲ್ಲಿ ಮರೀನಾ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿಆರ್ ಝೆಡ್ ಮಾರ್ಗಸೂಚಿ ಪ್ರಕಾರ ಬೈಂದೂರು ಬಳಿ ಮರೀನಾ ಮಾಡಲಾಗುತ್ತಿದೆ. ಇದರಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ. ಅದಕ್ಕೆ ಡಿಪಿಆರ್ ಸಹ ಮಾಡಿ ಜಾರಿ ಕೊಡುತ್ತಿದ್ದೇವೆ. ಬಂದರುಗಳಲ್ಲಿ ಡ್ರಜ್ಜಿಂಗ್ ಮಾಡಲು ಕ್ರಮ ಕೈಗೊಂಡಿದ್ದೇವೆ. ಸಾಗರಮಾಲಾ ಯೋಜನೆಯಡಿ 100 ಡೀಪ್ ಸೀ ಫಿಶಿಂಗ್ ಬೋಟ್ ಗಳಿಗೆ ಅನುಮೋದನೆ ಕೊಡಲಾಗುತ್ತಿದೆ ಎಂದು ತಿಳಿಸಿದರು.