ನೆಲಮಂಗಲ: ಪುರಸಭೆ ಉನ್ನತೀಕರಣಗೊಂಡು ನಗರಸಭೆಯಾಗಿ ಬದಲಾವಣೆಯಾದ ನಂತರ ಸೃಷ್ಟಿಯಾದ ಅನೇಕ ಗೊಂದಲಗಳಿಗೆ ಸ್ಪಷ್ಟನೆ ಕೇಳಿ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ವಾರ್ಡ್‌ವಾರು ಮರು ವಿಂಗಡಣೆ ಕೆಲಸ ಅಂತಿಮ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಪಿ. ಎನ್.ರವೀಂದ್ರ ತಿಳಿಸಿದರು.
ನಗರಸಭೆ ಕಚೇರಿಗೆ ಭೇಟಿ ನೀಡಿ ಪೌರಾಯುಕ್ತರು ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳ ಒತ್ತಡದಲ್ಲಿ ಆಡಳಿತಾಧಿಕಾರಿಯಾದ ನಂತರ ನಗರಸಭೆಗೆ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಸೋಮವಾರ ನಗರಸಭೆ ವ್ಯಾಪ್ತಿಯ ಪರಿಶೀಲನೆಗಾಗಿ ಬಂದಿದ್ದೇನೆ. ಅನೇಕ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದು, ಶೀಘ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲಿ ಶಂಕುಸ್ಥಾಪನೆ ಮಾಡಲಿದ್ದು, ಆರಂಭದಲ್ಲಿ 5 ಕೋಟಿ ರೂ. ಹಣ ಬಳಕೆ ಮಾಡಿಕೊಳ್ಳಲಿದ್ದೇವೆ ಎಂದರು.
ಕೆರೆ ಕಾಮಗಾರಿ ಆರಂಭ: ನಗರದಲ್ಲಿನ ಅಮಾನಿಕೆರೆಯಲ್ಲಿ ಗಲೀಜು ನೀರು ತುಂಬಿ ಜನರಿಗೆ ಸಮಸ್ಯೆಯಾಗುತ್ತಿರುವಬಗ್ಗೆ ಮಾಹಿತಿ ಬಂದಿದ್ದು, ಈಗಾಗಲೇ ಸರ್ಕಾರದಿಂದ ಬಿಡುಗಡೆಯಾದ 1 ಕೋಟಿ ರೂ. ಖರ್ಚುಮಾಡಿರುವ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗಿದೆ. ಹಾಗೂಎನ್‌ಪಿಎಯಿಂದ 4 ಕೋಟಿ ಅನುದಾನವಿದ್ದು, ಕೆರೆಯ ಹೂಳೆತ್ತುವುದು, ರಸ್ತೆ,ಸ್ವಚ್ಛತೆ, ಪಾರ್ಕ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆರಂಭಿಸಲಾಗುವುದು. ಹಾಗೂ ಸಾಮಾಜಿಕ ಸೇವಾ ಯೋಜನೆಯಡಿ ಯಾವುದಾದರೂ ಸಂಸ್ಥೆಗಳು ಸಹಕರಿಸಿದರೆ, ಕೆರೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ತನಿಖಾ ಅಧಿಕಾರಿಗಳ ನೇಮಕ: ನಗರಸಭೆ ವ್ಯಾಪ್ತಿಯ ಕಿರು ನೀರು ಸರಬರಾಜು ಕಚೇರಿಯ ಆವರಣದಲ್ಲಿದ್ದ ಮರಗಳನ್ನು ಅಧಿಕಾರಿಗಳಿಗೆ ಮಾಹಿತಿ ನೀಡದೇ ತೆರವು ಮಾಡಿರುವ ಬಗ್ಗೆ “ಉದಯವಾಣಿ’ ಸುದ್ದಿ ಪ್ರಕಟ ಮಾಡಿದ ಬೆನ್ನಲ್ಲೆ ತನಿಖಾ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಂತಿಮ ವರದಿಯ ನಂತರ ಅದರಲ್ಲಿ ಪಾಲುದಾರರಾದ ಪ್ರತಿಯೊಬ್ಬರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಗೊಂದಲ ಬೇಡ: ಆಡಳಿತ ಮಂಡಳಿ ಸಭೆಯಾಗುವರೆಗೂ ಯಾರು ಸದಸ್ಯರಾಗಿ ಅಧಿಕಾರ ಚಲಾಯಿಸುವಂತಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಜಿಲ್ಲಾಧಿಕಾರಿಯಾದ ನಮ್ಮನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿದ್ದು, ಯಾವುದೇ ತೀರ್ಮಾನ ಗಳನ್ನು ಅಧಿಕಾರಿಗಳೆ ಮಾಡುತ್ತಾರೆ. ಇದರ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಈ ವೇಳೆ ನಗರಸಭೆ ಪೌರಾಯುಕ್ತ ಎಲ್. ಮಂಜುನಾಥ್ ಸ್ವಾಮಿ, ಕಂದಾ ಯ ಅಧಿಕಾರಿ ಸವಿತಾ. ನಗರಸಭೆ ಅಭಿ ಯಂತರ ಎಂ.ಬಿ.ನಾಗರಾಜ್, ಸಾರ್ವ ಜನಿಕರು ಉಪಸ್ಥಿತರಿದ್ದರು.
ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ : ನಗರಸಭೆ ಆಡಳಿತಾಧಿಕಾರಿಯಾದ ನಂತರ ತಾಲೂಕಿಗೆ ಮೊದಲ ಬಾರಿ ಆಗಮಿಸಿದ ಜಿಲ್ಲಾಧಿಕಾರಿಗಳು ಸೋಮವಾರ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ನಗರಸಭೆ ಕಚೇರಿಗೆ ಆಗಮಿಸಿ 1 ಗಂಟೆ ವರೆಗೂ ಅಧಿಕಾರಿಗಳ ಜತೆ ಚರ್ಚೆ ನಡೆಸಿ, ನಂತರ ನಗರಸಭೆ ವ್ಯಾಪ್ತಿಯ ಕೆರೆಗಳು ಹಾಗೂ ಸಾರ್ವಜನಿಕರ ದೂರಿನ ಮೇರೆಗೆ ವಿವಿಧ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಸಂಪೂರ್ಣ ನಗರಸಭೆ ವ್ಯಾಪ್ತಿಯ ಪ್ರದೇಶಗಳನ್ನು ಸುತ್ತುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದರು.