Advertisement

ಸೀತಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಕ್ರಮ

02:06 PM Aug 31, 2020 | Suhan S |

ಕೋಲಾರ: ತಾಲೂಕಿನ ಸೀತಿ ದೇವಾಲಯದ ಈ ಸುಂದರ ಪ್ರದೇಶದಲ್ಲಿ ಉದ್ಯಾನ, ಮಕ್ಕಳ ಮನರಂಜನೆಗಾಗಿ ಆಟೋಪಕರಣಗಳ ಅಳವಡಿಸುವ ಮೂಲಕ ಎಲ್ಲರ ಸಹಕಾರದಿಂದ ಇದನ್ನು ಜಿಲ್ಲೆಯ ಪ್ರಮುಖ ಪ್ರವಾಸಿತಾಣ ವಾಗಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

Advertisement

ತಾಲೂಕಿನ ಸೀತಿ ಬೆಟ್ಟದಲ್ಲಿ ಕೋಲಾರ ಜಿಲ್ಲಾಡಳಿತ, ಅರಣ್ಯ ಇಲಾಖೆ, ಆಯಿಸ್ಕಾ ಇಂಟರ್‌ ನ್ಯಾಷನಲ್‌ ಕರ್ನಾಟಕ ವಲಯ ಇವರ ಸಂಯುಕ್ತಾಶ್ರಯದಲ್ಲಿ ಅಂತರ ರಾಷ್ಟ್ರೀಯ ಜೀವಿ ವೈವಿಧ್ಯ ವರ್ಷಾಚರಣೆ ಅಂಗವಾಗಿ ಸೀತಿ ಬೆಟ್ಟಕ್ಕೆ ಹಸಿರು ಹೊದಿಕೆ ಹಾಗೂ “ಬೋಳು ಬೆಟ್ಟಕ್ಕೆ ಬನದ ಮೆರಗು’ ಎಂಬ ನಿವೃತ್ತ ಐಎಎಸ್‌ ಅಧಿಕಾರಿ ಅಮರನಾರಾಯಣ ಅವರ ಪರಿಕಲ್ಪನೆಯಲ್ಲಿ ಸೀತಿ ಬೆಟ್ಟದಲ್ಲಿ ವಿವಿಧ ಜಾತಿಯ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಸೀತಿ ಬೆಟ್ಟದ ಬೈರವೇಶ್ವರ ಸನ್ನಿಧಿ ಸಹಾ ಒಂದು ಪ್ರವಾಸಿ ತಾಣವಾಗಿದೆ. ಆದ್ದರಿಂದ ಬೆಟ್ಟದ ಕೆಳಗೆ ಉತ್ತಮ ಪಾರ್ಕ್‌ ವ್ಯವಸ್ಥೆ ಮಾಡುತ್ತೇವೆ, ಜೊತೆಗೆ ಪುಟಾಣಿ ಮಕ್ಕಳಿಗೆ ಆಟೋಪಕರಣಗಳನ್ನು ವ್ಯವಸ್ಥೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಆಶ್ವಾಸನೆ ನೀಡಿ ಅಕ್ಟೋಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದರು.

ಬೆಟ್ಟದಲ್ಲಿ ಚಾರಣ: ದೇವಾಲಯದಿಂದ ಬೆಟ್ಟದ ಮೇಲಕ್ಕೆ 1 ಕಿ.ಮೀ. ದೂರ ಚಾರಣ ಮಾಡಿ, ಅಲ್ಲಿನ ಸ್ಥಿತಿ ಗಮನಿಸಿದ ಡೀಸಿ, ಓರ್ವ ಚಾರಣ ಮಾಡುವ ಕ್ರೀಡಾಪಟುವಿನಂತೆ ಬೆಟ್ಟದಲ್ಲಿ ಸುತ್ತಾಡಿ, ಇಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಅರಿತುಕೊಂಡರು. ದೇವಾಲಯಕ್ಕೆ ಉತ್ತಮವಾದ ಕಾಂಪೌಂಡ್‌, ಕುಡಿಯುವ ನೀರಿನ ವ್ಯವಸ್ಥೆ, ರಾತ್ರಿ ಸಮಯದಲ್ಲಿ ಬೆಳಕಿರಲು ಹೈಮಾಸ್ಕ್ ಸೈಟ್‌ನ್ನು ಹಾಕಲಾಗಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ ಎಂದರು.

ಸೀತಿ ಬೆಟ್ಟ ಸ್ವಚ್ಛತೆಗೆ ಸೂಚನೆ: ಸೀತಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ಸ್ವತ್ಛತೆ ಇಲ್ಲದೆ ಗಬ್ಬು ನಾರುತ್ತಿರುವ ದೃಶ್ಯ ಕಂಡ ಜಿಲ್ಲಾಧಿಕಾರಿ, ಇಂತಹ ಸುಂದರ ಪರಿಸರವಿರುವ ತಾಣದ ಪಕ್ಕದಲ್ಲಿ ಸ್ವತ್ಛತೆಯೂ ಅಗತ್ಯವಾಗಿದೆ ಎಂದರು. ನಿವೃತ್ತ ಐಎಎಸ್‌ ಅಧಿಕಾರಿ ಅಮರನಾಥ್‌, ಪರಿಸರ ಸಂರಕ್ಷಣೆಯ ಕಾಳಜಿಯಿಂದ ಗುಡ್ಡದಲ್ಲಿ ಸಾವಿರ ಗಿಡ ನೆಡುವ ಕಾರ್ಯ ಮಾಡುತ್ತಿದ್ದು, ಈ ಗಿಡಗಳನ್ನು ಉಳಿಸಿ ಬೆಳೆಸುವ ಕಾಯಕ್ಕೆ ಸಹಕಾರ ಕೋರಿದರು.

Advertisement

ಜಿಪಂ ಉಪಕಾರ್ಯದರ್ಶಿ ಕೆ,ಪಿ ಸಂಜೀವಪ್ಪ, ಸಹಾಯಕ ಯೋಜನಾಧಿಕಾರಿ ಗೋವಿಂದ ಗೌಡ, ವಸಂತ್‌ ಗೌಡ, ಅರಣ್ಯ ಇಲಾಖೆ ದೇವರಾಜು, ಹರ್ಷವರ್ಧನ್‌, ಬಿಂದು, ಇಒ ಬಾಬು, ಕೋಲಾರ ಐಇಸಿ ಸಂಯೋಜಕ ಭಾಸ್ಕರ ರೆಡ್ಡಿ, ಗ್ರಾಪಂ ಪಿಡಿಒ ಲಕ್ಷ್ಮೀಪತಿ, ಟ್ರಸ್ಟ್‌ನ ಅಧ್ಯಕ್ಷ ತಮ್ಮಯ್ಯ, ಸೀತಿಹೊಸೂರು ಮುರಳಿಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next