ಚೇಳಾೖರು: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಕೊಠಡಿಗಳ ನೆಲ ಸಂಪೂರ್ಣ ಹಾಳಾಗಿದ್ದು, ಶಾಸಕರ ಅನುದಾನದಿಂದ ಸರಿಪಡಿಸುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಉಮಾನಾಥ ಕೋಟ್ಯಾನ್ ಭರವಸೆ ನೀಡಿದರು.
ಕಾಲೇಜಿಗೆ ಭೇಟಿ ನೀಡಿದ ಅವರಿಗೆ ಕಾಲೇಜಿನ ಪ್ರಾಂಶುಪಾಲ ಜಯಾನಂದ ಸುವರ್ಣ ಅವರು ಕಾಲೇಜಿಗೆ ಬೇಕಾದ ಮೂಲಸೌಕರ್ಯ ಹಾಗೂ ವಿವಿಧ ಸಮಸ್ಯೆಗಳನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕರು, ಈ ಬಗ್ಗೆ ಶಿಕ್ಷಣ ಆಯುಕ್ತರಲ್ಲಿ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಕಾಲೇಜಿನ ಮುಂಭಾಗದಲ್ಲಿ ಹಳೆಯ ಕಟ್ಟಡ ಇದ್ದು, ಅಪಾಯದ ಸ್ಥಿತಿಯಲ್ಲಿದೆ. ಈ ಕಟ್ಟಡದಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ತೊಂದರೆಯಾಗುವ ಬಗ್ಗೆ ಪ್ರಾಂಶುಪಾಲರು ದೂರು ನೀಡಿದಾಗ, ತತ್‌ಕ್ಷಣ ಶಾಸಕರು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ 15 ದಿನಗಳ ಒಳಗೆ ಕಟ್ಟಡ ಕೆಡವಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ತಾಲೂಕು ಪಂಚಾಯತ್ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಚೇಳಾೖರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೆಂಕಟೇಶ ಶೆಟ್ಟಿ, ಸದಸ್ಯ ಚಂದ್ರಶೇಖರ್ ಹೆಬ್ಟಾರ್ ಮುಂತಾದವರು ಉಪಸ್ಥಿತರಿದ್ದರು.