Advertisement

ಅಪಘಾತ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಿ

02:07 PM Feb 04, 2021 | Team Udayavani |

 

Advertisement

 

 

ಧಾರವಾಡ: ರಾಷ್ಟ್ರೀಯ ಹೆದ್ದಾರಿ 4 ರ ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆಯಲ್ಲಿ ಅಪಘಾತಗಳನ್ನು ಕಡಿಮೆಗೊಳಿಸಲು ಓವರ್‌  ಟೇಕಿಂಗ್‌ ನಿಷೇಧ ವಲಯ, ಅಪಘಾತ ವಲಯಗಳಲ್ಲಿ ವೇಗ ನಿಯಂತ್ರಣ ಕುರಿತ ಸೂಚನಾ ಫಲಕಗಳು, ರಬ್ಬರ್‌ ಸ್ಟ್ರಿಪ್‌ಗಳ ವಿಭಜಕಗಳನ್ನು ಫೆ.15ರೊಳಗೆ ಸಾಕಷ್ಟು ಸಂಖ್ಯೆಯಲ್ಲಿ ಅಳವಡಿಸಿ ವರದಿ ನೀಡಬೇಕೆಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷ ಡಿಸಿ ನಿತೇಶ ಪಾಟೀಲ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಸಂಜೆ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಜಿಲ್ಲಾ ರಸ್ತೆ  ರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್‌ ರಸ್ತೆಯಲ್ಲಿ 2020 ರಲ್ಲಿ 42  ಅಪಘಾತಗಳು ಸಂಭವಿಸಿ 16 ಜನ ಮೃತಪಟ್ಟಿದ್ದರೆ 61 ಜನ ಗಾಯಗೊಂಡಿದ್ದಾರೆ. ಪ್ರಸಕ್ತ 2021ರಲ್ಲಿ ಇಲ್ಲಿಯವರೆಗೆ 02  ಅಪಘಾತಗಳು ಸಂಭವಿಸಿ 12 ಜನ ಮೃತಪಟ್ಟಿದ್ದು, 09 ಜನ ಗಾಯಗೊಂಡಿದ್ದಾರೆ.

Advertisement

ಸರ್ವೋತ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ ಅಪಘಾತಗಳನ್ನು ಕಡಿಮೆಗೊಳಿಸಲು ವೇಗ  ನಿಯಂತ್ರಿಸುವಿಕೆ, ಸ್ಪೀಡ್‌ ಬ್ರೇಕರ್‌ ಅಳವಡಿಕೆ, ಓವರ್‌ಟೇಕಿಂಗ್‌ ನಿಷೇಧ ವಲಯ, ರಬ್ಬರ್‌ ಸ್ಟ್ರಿಪ್‌ ವಿಭಜಕಗಳ ಅಳವಡಿಸಲು  ಕಳೆದ ಜ.18ರಂದು ನಡೆದ ಸಭೆಯಲ್ಲಿ ಸೂಚಿಸಲಾಗಿತ್ತು. ಅದರ ಪ್ರಕಾರ ಇಲ್ಲಿಯವರೆಗೆ ವೇಗ ನಿಯಂತ್ರಣ ಕುರಿತು 40  ಫಲಕಗಳನ್ನು ಅಳವಡಿಸಲಾಗಿದೆ. ಇನ್ನೂ 85 ಫಲಕಗಳನ್ನು, 1200 ರಬ್ಬರ್‌ ಸ್ಟ್ರಿಪ್‌ ವಿಭಜಕಗಳನ್ನು ಫೆ.15ರೊಳಗೆ  ಅಳವಡಿಸಬೇಕು. ಟೋಲ್‌ ಸಂಗ್ರಹಣಾ ಕೇಂದ್ರದಲ್ಲಿ ರಸ್ತೆ ಸುರಕ್ಷತೆ ಕುರಿತ ಧ್ವನಿ ಸಂದೇಶಗಳು ( ಜಿಂಗಲ್‌)ವಾಹನ ಚಾಲಕರನ್ನು ಜಾಗೃತಿಗೊಳಿಸಲು ಬಿತ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

2020ರಲ್ಲಿ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ ಕಾರಿಡಾರ್‌ ವ್ಯಾಪ್ತಿಯಲ್ಲಿ 97ಅಪಘಾತಗಳು ಸಂಭವಿಸಿ 24 ಜನ ಮೃತಪಟ್ಟಿದ್ದರೆ 70 ಜನ ಗಾಯಗೊಂಡಿದ್ದಾರೆ. ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಜರುಗಿಸಬೇಕು. ಕಾರಿಡಾರ್‌ನಲ್ಲಿ ಸಂಚರಿಸುವ ಅನ ಧಿಕೃತ ವಾಹನಗಳಿಗೆ ಕಡಿವಾಣ ಹಾಕಬೇಕು. ಪಾದಚಾರಿ ಮಾರ್ಗಗಳ ಒತ್ತುವರಿ ಮಾಡಿಕೊಂಡವರನ್ನು ನಿರಂತರ ಗಸ್ತು ಕಾರ್ಯದ ಮೂಲಕ ತೆರವುಗೊಳಿಸಬೇಕು. ಒತ್ತುವರಿದಾರರ ವಾಹನಗಳು ಹಾಗೂ ವ್ಯಾಪಾರ ಸಾಮಗ್ರಿ ವಶಪಡಿಸಿಕೊಳ್ಳಲು ಟೋವಿಂಗ್‌ ವಾಹನ ನೀಡಲಾಗುವುದು ಎಂದರು.

ಹು-ಧಾ ಬಸ್‌ ತ್ವರಿತ ಸಾರಿಗೆ ಸೇವೆ (ಬಿಆರ್‌ ಟಿಎಸ್‌) ಕಾರಿಡಾರ್‌ ಮತ್ತು ಪಾದಚಾರಿ ಮಾರ್ಗದಲ್ಲಿ ಅತಿಕ್ರಮಣ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಾದಚಾರಿ ಮಾರ್ಗ ಒತ್ತುವರಿದಾರರನ್ನು ತೆರವುಗೊಳಿಸಲು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಎಲ್ಲ ನೆರವು ನೀಡಲಿದೆ ಎಂದರು.

ಇದನ್ನೂ ಓದಿ :ತೇಜಸ್ ನಲ್ಲಿ ತೇಜಸ್ವಿ: ಯುದ್ಧ ವಿಮಾನದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದ ಸಂಸದ

ಹು-ಧಾ ನಗರ ಪೊಲೀಸ್‌ ಆಯುಕ್ತ ಲಾಬೂರಾಮ್‌ ಮಾತನಾಡಿ, ಹುಬ್ಬಳ್ಳಿಯ ಬಂಕಾಪೂರ ಚೌಕ್‌, ಹಳೇ ದುರ್ಗದ ಬೈಲ್‌, ನ್ಯೂ  ಇಂಗ್ಲಿಷ್‌ ಶಾಲೆ ಸೇರಿದಂತೆ ಅವಳಿ ನಗರದ ಜನನಿಬಿಡ ರಸ್ತೆಗಳಲ್ಲಿ ಸಾರಿಗೆ ಸಂಸ್ಥೆಯ ಕೋರಿಕೆಯ ನಿಲುಗಡೆ ಸ್ಥಳಗಳನ್ನು ಬದಲಿಸಲು ಈ ಹಿಂದಿನ ಸಭೆಯಲ್ಲಿ ನಿರ್ಧರಿಸಿದಂತೆ ಮಾರ್ಪಡಿಸಬೇಕು. ಈ ಕುರಿತು ಫಲಕಗಳನ್ನು ಹಾಕಿ ಸಾರ್ವಜನಿಕ  ಪ್ರಯಾಣಿಕರಿಗೆ ಮಾಹಿತಿ ನೀಡಬೇಕು. ಎಚ್‌ಡಿಬಿಆರ್‌ಟಿಎಸ್‌ ಕಾರಿಡಾರ್‌ ಹಾಗೂ ಮಿಶ್ರ ಪಥಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಹೆಚ್ಚು ಜನಜಾಗೃತಿ ಮೂಡಿಸಬೇಕು. ಅತಿಕ್ರಮಣಕಾರರನ್ನು ತೆರವುಗೊಳಿಸಲು ಪೊಲೀಸ್‌ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಇದೇ ಸಂದರ್ಭದಲ್ಲಿ 32 ನೇ ರಸ್ತೆ ಸುರಕ್ಷತಾ ಮಾಸಾಚರಣೆಯ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪೊಲೀಸ್‌  ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್‌, ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಎಸಿ ಡಾ|ಬಿ.ಗೋಪಾಲಕೃಷ್ಣ, ಹುಬ್ಬಳ್ಳಿ-ಧಾರವಾಡ ಪೂರ್ವ ವಿಭಾಗದ ಆರ್ಟಿಒ ಅಪ್ಪಯ್ಯ ನಾಲತ್ವಾಡಮಠ, ಹು-ಧಾ ಪಶ್ಚಿಮ ವಿಭಾಗದ ಆರ್‌ಟಿಒ ಶಂಕ್ರಪ್ಪ ಬಿ, ಲೋಕೋಪಯೋಗಿ ಹೆದ್ದಾರಿ ವಿಭಾಗದ ಕಾರ್ಯ ನಿರ್ವಾಹಕ ಇಂಜನಿಯರ್‌ ಆರ್‌.ಕೆ.ಮಠದ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶೋಭಾ ಕೆ.ಪೋಳ, ಪ್ರಾದೇಶಿಕ ಸಾರಿಗೆ ಇಲಾಖೆಯ ದಿನಮಣಿ, ಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next