ಹುಬ್ಬಳ್ಳಿ: ವಯೋವೃದ್ಧರು ಒಂದೆಡೆ ಕುಳಿತುಕೊಳ್ಳದೆ ಸದಾ ಕ್ರಿಯಾಶೀಲರಾಗಿರಬೇಕು ಎಂದು ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ ಹೇಳಿದರು.
ಹೊಸೂರ ವೃತ್ತದಲ್ಲಿರುವ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು. ಎಲ್ಲ ನಿವೃತ್ತ ನೌಕರರು ಹಾಗೂ ನಾಗರಿಕರು ಕೂಡಿಕೊಂಡು ನಿರ್ಮಿಸಿರುವ ಈ ವೇದಿಕೆಯಲ್ಲಿ ಇಂದು ಸಾವಿರಾರು ಜನರು ಸದಸ್ಯತ್ವ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ. ಇಂದಿನ ಯುವಕರನ್ನು ನೋಡಿದರೆ ಅವರ ಮುಂದೆ ನೀವೆಲ್ಲರೂ ನವತರುಣರೇ ಆಗಿದ್ದೀರಿ. ನಿಮ್ಮ ದೇಹಕ್ಕೆ ವಯಸ್ಸಾಗಿದೆ ಹೊರತು ಮನಸ್ಸಿಗಲ್ಲ ಎಂದರು.
ಜಿಲ್ಲೆಯಲ್ಲಿ ಹಿರಿಯರ ಮೇಲೆ ಮಕ್ಕಳ ದೌರ್ಜನ್ಯ ಕುರಿತು 27 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಈಗಾಗಲೇ ಸುಮಾರು 18ಕ್ಕೂ ಹೆಚ್ಚು ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಉತ್ತಮ ಹುದ್ದೆಯಲ್ಲಿರುವ ಮಕ್ಕಳು ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು, ಮನೆಯಿಂದ ಹೊರಹಾಕುವುದು, ದೌರ್ಜನ್ಯ ಎಸಗುವುದು ಮಾಡುತ್ತಿದ್ದಾರೆ. ಇಂತಹ ಕೃತ್ಯ ತಡೆ ಹಾಗೂ ಹಿರಿಯ ನಾಗರಿಕರ ರಕ್ಷಣೆಗಾಗಿ ಒಂದು ವೇದಿಕೆ ನಿರ್ಮಿಸಲಾಗಿದೆ. ಅಲ್ಲಿ ನಿಮ್ಮ ದೂರು ನೀಡಿದಲ್ಲಿ 60 ದಿನಗಳಲ್ಲಿ ಅದಕ್ಕೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಹೇಳಿದರು.
ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಕ್ಕೆ ನೀಡಿರುವ ಜಾಗದಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳು ಕಂಡು ಬಂದಿದ್ದು ಅವುಗಳನ್ನು ಬಗೆಹರಿಸಿಕೊಡುವಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಭಾರತದ ಉತ್ತಮ ನಾಗರಿಕ ಪ್ರಶಸ್ತಿ ಪಡೆದ ಟಾಕಪ್ಪ ಯಲ್ಲಪ್ಪ ಕಲಾಲ ಅವರನ್ನು ಸನ್ಮಾನಿಸಲಾಯಿತು. ಪಿ.ಎಸ್. ಧರಣೆಪ್ಪನವರ, ಎಫ್.ಎ. ಶೇಖ್, ಗದಗ ಜಿಲ್ಲೆ ಅಧ್ಯಕ್ಷ ಬಿ.ಬಿ. ಹೂಗಾರ, ಗಾಯಕವಾಡ, ಡಾ| ಡಿ.ಜಿ. ಪಾಟೀಲ, ಪ್ರೊ| ಎಂ.ಪಿ. ಕುಂಬಾರ, ರಮಾ ನೀಲಪ್ಪಗೌಡರ, ಶಂಕರ ಮಲಕಣ್ಣವರ, ಫಕ್ಕೀರಪ್ಪ ಇನ್ನಿತರರಿದ್ದರು.
ಲಕ್ಷ್ಮೀ ಮಂಗಳವೇಡಿ ಪ್ರಾರ್ಥಿಸಿದರು. ಗಾಮನಗಟ್ಟಿ ಸ್ವಾಗತಿಸಿದರು. ಮಂಗಳೂರಮಠ ವಂದಿಸಿದರು.