Advertisement

ವಿದೇಶೀ ಉದ್ಯೋಗ ಏಜೆನ್ಸಿಗಳ ವಂಚನೆ ತಡೆಗೆ ಕ್ರಮ

01:00 AM Oct 15, 2019 | Team Udayavani |

ಮಂಗಳೂರು: ವಿದೇಶದಲ್ಲಿ ಉದ್ಯೋಗಗಳಿಸುವ ಆಕಾಂಕ್ಷಿಗಳಿಗೆ ನೆರವಾಗಲು ಮತ್ತು ಅವರಿಗೆ ಆಗುತ್ತಿರುವ ವಂಚನೆ ತಡೆಗಟ್ಟಲು ಪ್ರತ್ಯೇಕ ಅಂತಾರಾಷ್ಟ್ರೀಯ ವಲಸೆ ಕೇಂದ್ರ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ.

Advertisement

ಖಾಸಗಿ ಏಜೆನ್ಸಿಗಳ ಮೂಲಕ ವಿದೇಶ ದಲ್ಲಿ ಉದ್ಯೋಗ ಪಡೆದು, ಆ ಬಳಿಕ ವಂಚನೆ ಗೊಳಗಾಗುವ ಹಲವು ಪ್ರಕರಣಗಳು ನಡೆದಿರುವುದರಿಂದ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ. ವಿದೇಶಿ ಉದ್ಯೋಗದ ಆಮಿಷ ತೋರಿಸಿ ಅಮಾಯಕರನ್ನು ವಂಚಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ಅಧಿಕೃತ ವಲಸೆ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ.

ಕೌಶಲಾಭಿವೃದ್ಧಿ ಮತ್ತು ಉದ್ಯಮ ಶೀಲತಾ ಇಲಾಖೆಯಡಿ ಈ ಕೇಂದ್ರಗಳು ಆರಂಭವಾಗಲಿದ್ದು, ಪ್ರಾರಂಭಿಕ ಸಿದ್ಧತೆ ನಡೆಸಲಾಗುತ್ತಿದೆ. ಕೇಂದ್ರ ವಿದೇಶಾಂಗ ಇಲಾಖೆಯಡಿ ಇವು ಈಗಾಗಲೇ ನೋಂದಣಿಯಾಗಿವೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಮತ್ತು ಇತರ ನಾಲ್ಕು ಕಡೆಗಳಲ್ಲಿ ಪ್ರಾದೇಶಿಕ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಕೇರಳದಲ್ಲಿ ನೋರ್ಕಾ ರೂಟ್ಸ್‌ ಸಂಸ್ಥೆಯ ಮೂಲಕ ಎನ್‌ಆರ್‌ಐ ಉದ್ಯೋಗಿಗಳಿಗೆ ಅಲ್ಲಿನ ಸರಕಾರ ಬಲ ನೀಡಿದಂತೆಯೇ ಇಲ್ಲೂ ಎಮಿಗ್ರೇಷನ್‌ ಸೆಂಟರ್‌ಗಳು ಕಾರ್ಯನಿರ್ವಹಿಸಲಿವೆ.

ನೋಂದಾಯಿತ ಕಂಪೆನಿ ಜತೆ ಒಪ್ಪಂದ
ವಿದೇಶದಲ್ಲಿ ಮತ್ತು ಹೊರರಾಜ್ಯಗಳಲ್ಲಿ ಅಧಿಕೃತವಾಗಿ ನೋಂದಣಿಯಾದ ಕಂಪೆನಿಯ ಜತೆಗೆ ಐಎಂಸಿಕೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಮೂಲಕ ಕನ್ನಡಿಗ ಉದ್ಯೋಗಾಕಾಂಕ್ಷಿಗಳಿಗೆ ವಿದೇಶಿ ಉದ್ಯೋಗಗಳ ಮಾಹಿತಿ ಒದಗಣೆ ಮತ್ತು ಸಹಕಾರವನ್ನು ಐಎಂಸಿಕೆ ನೀಡಲಿದೆ.

ಐಎಂಸಿಕೆ ಅರಂಭವಾದ ಬಳಿಕ ಪೂರ್ಣ ಪ್ರಮಾಣದ ವೆಬ್‌ಸೈಟ್‌ ಕೂಡ ಚಾಲ್ತಿಯಲ್ಲಿರುತ್ತದೆ. ಇದರ ಮೂಲಕ ಉದ್ಯೋಗದ ಮಾಹಿತಿ ಪಡೆಯಬಹುದು. ಜತೆಗೆ ವಿದೇಶದ ನೋಂದಣಿಯಾದ ವ್ಯಕ್ತಿ, ಕಂಪೆನಿ ಮಾಹಿತಿಯೂ ಇರಲಿದೆ. ಇದರಿಂದ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದ ಬಳಿಕ ಅವರು ಇರುವ ಊರು ಮತ್ತು ಉದ್ಯೋಗದ ಬಗ್ಗೆಯೂ ಅಪ್‌ಡೇಟ್‌ ಪಡೆಯಲು ಸಾಧ್ಯ. ಜತೆಗೆ ಆಯಾ ದೇಶದ ಕಾನೂನು, ಸಂಸ್ಕೃತಿ, ಸ್ಥಿತಿಗತಿ, ಹವಾಮಾನ ಸೇರಿದಂತೆ ಪ್ರತಿ ವಿಚಾರದ ಬಗ್ಗೆಯೂ ಈ ಕೇಂದ್ರಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.

Advertisement

ಮಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ
“ಇಂಟರ್‌ನ್ಯಾಷನಲ್‌ ಎಮಿ ಗ್ರೇಶನ್‌ ಸೆಂಟರ್‌’ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುತ್ತದೆ. ಮಂಗಳೂರು, ಗುಲ್ಬರ್ಗ, ಧಾರವಾಡ, ಹುಬ್ಬಳ್ಳಿಗಳಲ್ಲಿ ಪ್ರಾದೇಶಿಕ ಕಚೇರಿ ಆರಂಭಿಸಲು ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆ ತೀರ್ಮಾನಿಸಿದೆ. ಕೌಶಲಾಭಿವೃದ್ಧಿ ನಿಗಮವೇ ನೇಮಕಾತಿ ಏಜೆನ್ಸಿ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ವಿದೇಶ ಉದ್ಯೋಗಾರ್ಥಿಗಳು ವಿದ್ಯಾರ್ಹತೆ, ಉದ್ಯೋಗ ಪಡೆಯ ಬಯಸುವ ರಾಷ್ಟ್ರ ಸೇರಿದಂತೆ ಸಮಗ್ರ ಮಾಹಿತಿ ನೋಂದಣಿ ಮಾಡಬೇಕು. ಬಳಿಕ ವಿದೇಶಗಳಲ್ಲಿ ಉದ್ಯೋಗಾವಕಾಶ ಇದ್ದರೆ ಐಎಂಸಿಕೆ ಸಂಪರ್ಕಿಸಲಿದೆ.

ಎಮಿಗ್ರೇಷನ್‌ ಶೀಘ್ರ ಆರಂಭ
ವಿದೇಶಗಳಲ್ಲಿ ಕೆಲಸ ಪಡೆಯುವ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವುದಕ್ಕಾಗಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯಡಿ ಇಂಟರ್‌ನ್ಯಾಷನಲ್‌ ಎಮಿಗ್ರೇಶನ್‌ ಸೆಂಟರ್‌ ಶೀಘ್ರದಲ್ಲಿ ಆರಂಭವಾಗಲಿದೆ. ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
-ರಾಘವೇಂದ್ರ
ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ)

  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next