Advertisement

ಮೀನುಗಾರರ “ಉಳಿತಾಯ ಹಣ’ಪಾವತಿಗೆ ಕ್ರಮ: ಸಚಿವ ಕೋಟ

09:38 PM Apr 18, 2020 | Sriram |

ಕುಂದಾಪುರ: ಮೀನುಗಾರರಿಗೆ ಆರ್ಥಿಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ 3 ವರ್ಷಗಳಿಂದ ನೀಡಬೇಕಿರುವ “ಉಳಿತಾಯ ಪರಿಹಾರ ಯೋಜನೆ’ಯ ಕೇಂದ್ರದಿಂದ ಸಿಗಬೇಕಿರುವ 5.5 ಕೋರೂ. ಹಣವನ್ನು ಕಳೆದ ತಿಂಗಳು ಬಿಡುಗಡೆ ಮಾಡಿದ್ದು, ರಾಜ್ಯದ 5.5 ಕೋ.ರೂ. ಪಾಲನ್ನು ಕೂಡ ಬಿಡುಗಡೆ ಮಾಡಿ, ಸಂಕಷ್ಟದಲ್ಲಿರುವ ಮೀನುಗಾರರಿಗೆ ನೆರವಾಗಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಮೀನುಗಾರಿಕಾ, ಬಂದರು ಮತ್ತು ಮುಜುರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಕುಂದಾಪುರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದರು.

Advertisement

ಕೈರಂಪಣಿ ಮೀನುಗಾರಿಕೆಗೆ ಅವಕಾಶ?
ನಾಡದೋಣಿಗೆ ಮಾತ್ರ ಈಗ ಮೀನುಗಾರಿಕೆಗೆ ಅವಕಾಶ ನೀಡಲಾಗಿದ್ದು, ಇದರೊಂದಿಗೆ ಕೈರಂಪಣಿ, ಮಾಟುಬಲೆ ದೋಣಿಗಳಿಗೆ ಅವಕಾಶ ನೀಡಿದರೆ ಹೇಗೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಇಲ್ಲಿ ಹೆಚ್ಚಿನ ಮೀನುಗಾರರು ಸೇರುವ ಸಂಭವ ಹಾಗೂ ಹೆಚ್ಚಿನ ಮೀನು ಸಿಕ್ಕರೆ, ಅದಕ್ಕೆ ಮಾರುಕಟ್ಟೆ ವ್ಯವಸ್ಥೆ ಹೇಗೆ? ಮೀನುಗಾರರು ಸಾಮಾಜಿಕ ಅಂತರ ಕಾಯ್ದುಕೊಂಡು, ಮೀನು ಗಾರಿಕೆ ನಡೆಸಬಹುದೇ ಎನ್ನುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

ಉಲ್ಲಂಘಿಸಿದರೆ ಕಾನೂನು ಕ್ರಮ
ಕೆಲವರು ತರಕಾರಿ ವಾಹನಗಳಲ್ಲಿ ಬರುತ್ತಿ ರುವುದು ಗಮನಕ್ಕೆ ಬಂದಿದೆ. ಸರಕು ವಾಹನಗಳಲ್ಲಿ ಬದಲಿ ಚಾಲಕರೆಂದು ಬರುವ ಪ್ರಸಂಸಗಳು ನಡೆದಿದೆ. ಅದಕ್ಕಾಗಿಯೇ ಈಗ ಒಬ್ಬರೆ ಚಾಲಕರಿಗೆ ಅನುಮತಿ ಕೊಡಲು ಸೂಚನೆ ನೀಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಯಾರು ಬರುತ್ತಾರೊ ಅಂತವರನ್ನು ಕೂಡಲೇ ಕ್ವಾರಂಟೈನ್‌ಗೆ ಒಳಪಡಿಸಿ, ಕಾನೂನು ಕ್ರಮ ಕೂಡ ಜರಗಿಸಲಾಗುವುದು ಎಂದು ಎಚ್ಚರಿಸಿದರು.

ಈಗಿರುವ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು 8-10 ಮಂದಿ ದೇವಸ್ಥಾನಕ್ಕೆ ಹೋಗಿ ಮದುವೆಯಾದರೆ ಯಾವುದೇ ಅಭ್ಯಂತರ ವಿಲ್ಲ. ಈಗಾಗಲೇ ನಿಶ್ಚಯವಾಗಿರುವ ಅನೇಕ ಮದುವೆಗಳು ಕಡಿಮೆ ಜನರ ಉಪಸ್ಥಿತಿಯಲ್ಲಿ ನಡೆದಿವೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖೀಲ್‌ ಮದುವೆಯಲ್ಲಿ ಎಷ್ಟು ಜನ ಸೇರಿದ್ದಾರೆನ್ನುವ ಬಗ್ಗೆ ಮಾಹಿತಿಯಿಲ್ಲ ಎಂದು ಸಚಿವರು ಹೇಳಿದರು.

ವೇತನ ಕಡಿತಗೊಳಿಸದಂತೆ ಆದೇಶ
ಯಕ್ಷಗಾನ ಕಲಾವಿದರ ಸಂಕಷ್ಟದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಎಲ್ಲ ದೇವಸ್ಥಾನಗಳ ಅ ಧೀನದಲ್ಲಿರುವ ಮೇಳಗಳ ಯಕ್ಷಗಾನ ಕಲಾವಿದರಿಗೆ ವೇತನ ಕಡಿತಗೊಳಿಸದಂತೆ ಆದೇಶ ಹೊರಡಿಸಲಾಗಿದೆ. ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ದೇವಸ್ಥಾನ ಹಾಗೂ ಮೇಳಕ್ಕೆ ನೇರ ಸಂಬಂಧಗಳಿಲ್ಲ. ಈಗಾಗಲೇ ಕಲಾವಿದರು ಮನವಿಗಳನ್ನು ಕೊಟ್ಟಿದ್ದಾರೆ. ಅದಕ್ಕೇನು ಮಾಡಬೇಕು ಎನ್ನುವುದನ್ನು ಯೋಚನೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ,
ಮುಜುರಾಯಿ ಖಾತೆ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next