Advertisement

ರೈತರ ಬದುಕು ಹಸನಾಗಿಸಲು ಕ್ರಮ

03:34 PM Jun 02, 2019 | Team Udayavani |

ಚಿತ್ರದುರ್ಗ: ಕಳೆದ ಏಳು ವರ್ಷಗಳಿಂದ ಜಿಲ್ಲೆ ಸತತ ಬರಕ್ಕೆ ತುತ್ತಾಗಿದೆ. ಜಿಲ್ಲೆಯ ಮಳೆಯ ಪ್ರಮಾಣವನ್ನು ಆಧರಿಸಿ ಇಲ್ಲಿನ ಹವಾಗುಣಕ್ಕೆ ಅನುಗುಣವಾಗಿ ರೈತರ ಬದುಕನ್ನು ಹಸನಾಗಿಸಲು ಸಲಹಾತ್ಮಕ ಪ್ಯಾಕೇಜ್‌ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಕೃಷಿ, ತೋಟಗಾರಿಕೆ, ಬೆಳೆ ವಿಮೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು, ಕೃಷಿ, ತೋಟಗಾರಿಕೆ ತಜ್ಞರು, ಪ್ರಗತಿಪರ ರೈತರೊಂದಿಗೆ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸತತ ಬರದಿಂದಾಗಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಇದರಿಂದ ಕುಡಿಯುವ ನೀರಿಗೂ ಸಮಸ್ಯೆ ಇದೆ. ಜಿಲ್ಲೆಯ ವರ್ಷದ ವಾಡಿಕೆ ಮಳೆ 750 ಮಿಮೀ ಇದ್ದು, ವರ್ಷಕ್ಕೆ 550 ಮಿಮೀ ಮಳೆಯಾಗುತ್ತಿದೆಯಾದರೂ ಸಕಾಲದಲ್ಲಿ ಆಗುತ್ತಿಲ್ಲ. ಕೇವಲ ಅಂಕಿ-ಅಂಶಗಳಲ್ಲಿ ಮಳೆಯ ಪ್ರಮಾಣ ದಾಖಲಾಗುತ್ತಿದೆ. ಭೂಮಿಯಲ್ಲಿ ಇಂಗಿ ಕೃಷಿಗೆ ಅಥವಾ ಅಂತರ್ಜಲ ವೃದ್ಧಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಮಳೆ ಆಗುತ್ತಿಲ್ಲ. ಜಿಲ್ಲೆಯ ರೈತರು ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿದ್ದು, ಪ್ರತಿ ವರ್ಷ ಮುಂಗಾರು ಹಂಗಾಮಿಗೆ ಭೂಮಿ ಸಿದ್ಧಪಡಿಸಿ, ಬಿತ್ತನೆ ಮಾಡಿ, ಮಳೆ ಹಾಗೂ ಬೆಳೆಗೆ ಕಾಯುವ ಸ್ಥಿತಿ ಇದೆ. ಮಳೆ ಕೊರತೆಯಿಂದ ಬಿತ್ತಿದ ಬೆಳೆ ರೈತನ ಕೈ ಸೇರುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿನ ಹಿಂದಿನ ಮಳೆಯ ಪ್ರಮಾಣ, ಹವಾಗುಣ ಹಾಗೂ ಭೂಮಿಯ ಗುಣಮಟ್ಟಕ್ಕೆ ಅನುಗುಣವಾಗಿ ಕೃಷಿ ತಜ್ಞರು, ವಿಜ್ಞಾನಿಗಳು, ಸಂಶೋಧನೆ ನಡೆಸಿ ರೈತರು ಯಾವ ಬೆಳೆ ಬೆಳೆಯಬೇಕು, ಕೃಷಿ, ತೋಟಗಾರಿಕೆ ಅಥವಾ ಅರಣ್ಯೀಕರಣ, ಹೈನುಗಾರಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳೇನು, ಬೆಳೆಗಳ ಮಾದರಿ ಕುರಿತು ರೈತರಿಗೆ ಸಲಹಾತ್ಮಕವಾದ ಪ್ಯಾಕೇಜ್‌ ಸಿದ್ಧಪಡಿಸಿ ಪ್ರತಿಯೊಬ್ಬ ರೈತರಿಗೂ ತಲುಪಿಸುವ ಕಾರ್ಯ ಆಗಬೇಕು. ಆದರೆ ಅಂತಿಮವಾಗಿ ಯಾವ ಬೆಳೆ ಬೆಳೆಯುವುದು ಹಾಗೂ ಯಾವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಸೂಕ್ತ ಎಂಬ

ಅಂತಿಮ ನಿರ್ಧಾರ ರೈತರದೇ ಆಗಿರಬೇಕು. ಇಂಥದ್ದೇ ಬೆಳೆ ಬೆಳೆಯುವಂತೆ ಒತ್ತಾಯ ಹೇರುವುದು ಸರಿಯಲ್ಲ. ಈ ದಿಸೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಅರಣ್ಯ ಇಲಾಖೆಗಳು ತೋಟಗಾರಿಕೆ ವಿವಿ, ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು ಕೂಡಲೇ ಕಾರ್ಯೋನ್ಮುಖರಾಗಬೇಕು. ಇದರಲ್ಲಿ ಪ್ರಗತಿಪರ ರೈತರ ಸಲಹೆಗಳಿಗೂ ಆದ್ಯತೆ ನೀಡಬೇಕು. ಸಾಧ್ಯವಾದಲ್ಲಿ ಜಿಲ್ಲೆಯಲ್ಲಿ ರೈತರ ಕ್ಲಬ್‌ಗಳನ್ನು ಪ್ರಾರಂಭಿಸಿದರೆ ಕೃಷಿ ಚಟುವಟಿಕೆ, ತಂತ್ರಜ್ಞಾನಗಳ ವಿಚಾರ ವಿನಿಮಯಕ್ಕೆ ಸೂಕ್ತ ವೇದಿಕೆ ದೊರೆಯಲಿದೆ ಎಂದು ಸಲಹೆ ನೀಡಿದರು.

ಮಳೆ ಕೊರತೆಯಿಂದ ರೈತರು ಉತ್ತಮ ಬೆಳೆ, ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಹಾರ ಧಾನ್ಯಗಳನ್ನು ರೈತ ಸ್ವಂತ ಬಳಕೆಗೆ ದಾಸ್ತಾನು ಮಾಡಿಕೊಳ್ಳುತ್ತಿದ್ದು, ಇತರರಿಗೆ ಮಾರಾಟ ಮಾಡುವಷ್ಟು ಪ್ರಮಾಣದಲ್ಲಿ ಬೆಳೆ ಲಭ್ಯವಾಗುತ್ತಿಲ್ಲ. ಇದು ರೈತರ ಆರ್ಥಿಕ ಸಬಲತೆಗೆ ತೀವ್ರ ಹಿನ್ನಡೆಯಾಗಲು ಕಾರಣವಾಗಿದೆ. ಅನ್ನದಾತ ಬದುಕಬೇಕು, ಇತರರನ್ನೂ ಬದುಕಿಸುವಂತೆ ರೈತನಿಗೆ ಬಲ ನೀಡಬೇಕಿದೆ. ಈ ದಿಸೆಯಲ್ಲಿ ರೈತರು ಕೇವಲ ಕೃಷಿ ಮೇಲಷ್ಟೇ ಅವಲಂಬಿತರಾಗದೆ ಹೈನುಗಾರಿಕೆ, ಪುಷ್ಪ ಕೃಷಿ, ಅಣಬೆ ಕೃಷಿ ಮುಂತಾದ ನಿತ್ಯ ಆದಾಯ ತರಬಲ್ಲ ಉಪ ಕಸುಬನ್ನು ಕೈಗೊಳ್ಳುವಂತಾಗಬೇಕು ಎಂದರು.

Advertisement

ಸಭೆಯಲ್ಲಿ ಜಿಪಂ ಸಿಇಒ ಸಿ. ಸತ್ಯಭಾಮ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನವರ್‌, ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ್‌, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಓಂಕಾರಪ್ಪ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next