Advertisement

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಕ್ರಮ: ಡಾ.ಸುಧಾಕರ್

06:34 PM May 12, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಜಿಲ್ಲೆಯ ಶಿಡ್ಲಘಟ್ಟ ನಗರದ ಪರಿವೀಕ್ಷಣಾ ಮಂದಿರದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲಿಸಿ ನಂತರ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಬರುವ ಬಡಜನರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕೂಲ ಕಲ್ಪಿಸುವ ಸಲುವಾಗಿ ಈಗಾಗಲೇ ತಜ್ಞ ವೈದ್ಯರನ್ನು ನೇರನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು ಅತಿ ಶೀಘ್ರದಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದೆಂದರು.

ರಾಜ್ಯದ ತಾಲೂಕು ಕೇಂದ್ರಗಳ ಆಸ್ಪತ್ರೆಗಳಿಗೆ ತಲಾ 6 ವೆಂಟಿಲೇಟರ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಮುಂದಿನ ಮೂರು ದಿನದೊಳಗೆ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‍ಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಜೊತೆಗೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ವೈದ್ಯರು ಮತ್ತು ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಕೋವಿಡ್ ಸೋಂಕು ನಿಯಂತ್ರಿಸಲು ಎರಡನೇ ಡೋಸ್ ಲಸಿಕೆಯ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು 18 ವರ್ಷದಿಂದ ಮೇಲ್ಟಟ್ಟವರಿಗೆ ಲಸಿಕೆ ನೀಡಲು ಆನ್‍ಲೈನ್ ಹೆಸರುಗಳನ್ನು ನೊಂದಣಿ ಮಾಡಿಸಿಕೊಂಡು ಅವರ ಮೊಬೈಲ್‍ಗಳಿಗೆ ಸಂದೇಶವನ್ನು ರವಾನಿಸಿ ಲಸಿಕೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ದೇಶದಲ್ಲಿ ಎರಡು ಸಂಸ್ಥೆಗಳಿಗೆ ಲಸಿಕೆ ಸರಬರಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ ಮೂರನೇ ಸಂಸ್ಥೆಯವರು ಲಸಿಕೆ ಸರಬರಾಜು ಮಾಡಲು ಪರವಾನಿಗೆ ಲಭಿಸಿದೆ ಅವರು ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡು ಅಗತ್ಯ ಲಸಿಕೆ ಸರಬರಾಜು ಮಾಡಲಿದ್ದು ಮುಂದಿನ ಎರಡು ವಾರದೊಳಗೆ ದೇಶದ ಎಲ್ಲಾ ರಾಜ್ಯಗಳಿಗೆ ಲಸಿಕೆ ಲಭ್ಯವಾಗಲಿದ್ದು ಮೇ15 ರ ನಂತರ ಪೂರ್ಣಪ್ರಮಾಣದಲ್ಲಿ ಲಸಿಕೆ ಬರಲಿದೆಯೆಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ತಾಂತ್ರಿಕ ಸಮಸ್ಯೆಯಿಂದ ಅಳವಡಿಸಿಲ್ಲ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ವೆಂಟಿಲೇಟರ್ ಅಳವಡಿಸಿಲ್ಲ ಅದನ್ನು ತ್ವರಿತವಾಗಿ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮುಂದಿನ ಮೂರು ದಿನದೊಳಗೆ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಸಲು ಗಡುವು ನೀಡಲಾಗಿದೆ ಎಂದನ ಸಚಿವರು ರಾಜ್ಯದಲ್ಲಿ ತಜ್ಞ ವೈದ್ಯರ ನೇಮಕಾತಿಯಿಂದ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಯಾಗಲಿದೆ ಎಂದರು.

Advertisement

ಲಸಿಕೆ ಪಡೆಯಲು ಬೆಂಗಳೂರಿನಿಂದ ಶಿಡ್ಲಘಟ್ಟ ಮತ್ತು ಗುಡಿಬಂಡೆಗೆ ಬರುತ್ತಿದ್ದು ಇದರಿಂದ ಕೋವಿಡ್ ಸೋಂಕು ಹರಡುವ ಆತಂಕ ಸ್ಥಳೀಯರು ವ್ಯಕ್ತಪಡಿಸಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೆ ಸಚಿವರು ಜಾರಿಕೊಂಡರು.

ಇದನ್ನೂ ಓದಿ :ಮೇ.13 ರಂದು ಭೂಮಿಗೆ ಅಪ್ಪಳಿಸಲಿದೆಯಂತೆ “ಸೌರ ಚಂಡಮಾರುತ’

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ,ಜಿಪಂ ಸಿಇಓ ಪಿ.ಶಿವಶಂಕರ್,ಜಿಲ್ಲಾ ಎಸ್ಪಿ ಜಿಕೆ ಮಿಥುನ್‍ಕುಮಾರ್,ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯ,ಉಪ ವಿಭಾಗಾಧಿಕಾರಿ ರಘುನಂದನ್,ತಾಲೂಕು ನೋಡಲ್ ಅಧಿಕಾರಿ ಮೊಹ್ಮದ್ ಅತೀಖ್‍ಉಲ್ಲಾ ಶರೀಫ್,ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ,ನಗರ ಮಂಡಲ ಅಧ್ಯಕ್ಷ ರಾಘವೇಂದ್ರ,ಜಿಲ್ಲಾ ಬಿಜೆಪಿ ವಕ್ತಾರ ರಮೇಶ್ ಬಾಯಿರಿ,ನಗರಸಭೆಯ ಸದಸ್ಯ ಕೃಷ್ಣಮೂರ್ತಿ,ನಾರಾಯಣಸ್ವಾಮಿ,ಶಿಡ್ಲಘಟ್ಟ ತಹಶೀಲ್ದಾರ್ ಬಿ.ಎಸ್.ರಾಜೀವ್,ತಾಪಂ ಇಓ ಚಂದ್ರಕಾಂತ್,ಶಿಡ್ಲಘಟ್ಟ ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‍ಮೂರ್ತಿ,ನಂದೀಶ್,ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಣಿ,ಸಿಪಿಐ ಸುರೇಶ್,ಪಿಎಸ್‍ಐ ಲಿಯಾಖತ್ತುಲ್ಲಾ,ಸತೀಶ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿಗೆ ಭೇಟಿ ನೀಡಿದ ನಂತರ ಶಿಡ್ಲಘಟ್ಟ ತಾಲೂಕಿಗೆ ಭೇಟಿ ನೀಡಿದ ಆರೋಗ್ಯ ಸಚಿವರು ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಬಾಗೇಪಲ್ಲಿ,ಗುಡಿಬಂಡೆ ಹಾಗೂ ಗೌರಿಬಿದನೂರು ತಾಲೂಕುಗಳ ಪ್ರವಾಸವನ್ನು ಮೊಟಕುಗೊಳಿಸಿ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೂ ಭೇಟಿ ನೀಡದೆ ಬೆಂಗಳೂರಿಗೆ ವಾಪಸ್ಸು ತೆರಳಿದರು.

ಕೋವಿಡ್ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಬಿಜೆಪಿ ನಾಯಕರು ಮತ್ತು ನಗರಸಭಾ ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next