Advertisement

ಸಿಎಂ ಹುಟ್ಟೂರಲ್ಲಿ 23 ಕೆರೆ ಭರ್ತಿಗೆ ಕ್ರಮ

12:52 PM Aug 17, 2019 | Team Udayavani |

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹುಟ್ಟೂರು ಕೆ.ಆರ್‌.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕಾಮಗಾರಿಗಳು ಇದೀಗ ಚುರುಕು ಪಡೆದುಕೊಳ್ಳಲಾರಂಭಿಸಿವೆ.

Advertisement

ಶುಕ್ರವಾರ ಬೆಳಗ್ಗೆಯೇ ಜಿಲ್ಲಾಧಿಕಾರಿ ಡಾ.ಎಂ.ಪಿ.ವೆಂಕಟೇಶ್‌ ಅವರು, ಬೂಕನಕೆರೆ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮ ಗಾರಿಗಳ ಕುರಿತು ಪರಿಶೀಲನೆ ನಡೆಸಿದರು.

ಕೆರೆಗಳನ್ನು ತುಂಬಿಸುವುದು, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲ ಸೌಲಭ್ಯ ಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೂರು ತಿಂಗಳ ಗಡುವು: ಬೂಕನಕೆರೆ ಸೇರಿದಂತೆ 28 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 2011ರಿಂದ ನನೆಗುದಿಗೆ ಬಿದ್ದಿತ್ತು. ಅರಣ್ಯ ಪ್ರದೇಶದೊಳಗೆ ಪೈಪ್‌ಲೈನ್‌ ತೆಗೆದುಕೊಂಡು ಹೋಗುವ ವಿಚಾರ ಅಡ್ಡಗಾಲಾಗಿತ್ತು. ಅದಕ್ಕೆ ಈಗ ಪರಿಹಾರ ಸೂಚಿಸ ಲಾಗಿದೆ. ಮೂರು ತಿಂಗಳೊಳಗೆ ಯೋಜನೆ ಯನ್ನು ಪೂರ್ಣಗೊಳಿಸಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

8 ವರ್ಷ ಕಾಲಹರಣ: ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿ ಈಗಾಗಲೇ 8 ವರ್ಷ ಕಾಲಹರಣವಾಗಿದೆ. ಯೋಜನೆ ವಿಳಂಬದಿಂದ ಹಲವು ಗ್ರಾಮಗಳ ಜನರು ಕುಡಿಯುವ ನೀರಿಗೆ ತೀವ್ರ ತತ್ವಾರ ಎದುರಿಸುವಂತಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರು ಸರಬರಾಜು ಮಾಡುವಂತೆ ಹೇಳಿದರು.

Advertisement

ಕೆರೆಗಳ ಭರ್ತಿಗೆ ಆದ್ಯತೆ: ಬೂಕನಕೆರೆ ಹೋಬಳಿ ವ್ಯಾಪ್ತಿಯಲ್ಲಿ 23 ಕೆರೆಗಳಿವೆ. ಅವುಗಳನ್ನು ತುಂಬಿಸಲು ನೀರಾವರಿ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ವಹಿಸಬೇಕಿದೆ. ಕೆರೆಗಳನ್ನು ತುಂಬಿಸಲು 50 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಹೇಮಾವತಿ ಜಲಾಶಯವೂ ಭರ್ತಿಯಾಗಿರುವುದರಿಂದ ಕೆರೆಗಳನ್ನು ತುಂಬಿಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಅಧಿಕಾರಿಗಳು ಕೆರೆಗಳ ಭರ್ತಿಗೆ ಪ್ರಥಮ ಆದ್ಯತೆ ನೀಡುವಂತೆ ತಿಳಿಸಿದರು.

ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಹೆಚ್ಚಳವಾಗಲಿದೆ. ಬೇಸಿಗೆ ಸಮಯದಲ್ಲಿ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ನೀರೊದಗಿಸಲು ಅನುಕೂಲವಾಗಲಿದೆ. ಬತ್ತಿ ಹೋಗಿರುವ ಕೊಳವೆ ಬಾವಿಗಳೆಲ್ಲವೂ ಪುನಶ್ಚೇತನ ಕಾಣಲಿವೆ. ಇದರಿಂದ ನೀರಿಗೆ ಎದುರಾಗ ಬಹುದಾದ ಸಮಸ್ಯೆ ದೂರ ಮಾಡಬಹುದು ಎಂದು ಹೇಳಿದರು.

ಸಂಪರ್ಕ ರಸ್ತೆಗಳ ಅಭಿವೃದ್ಧಿ: ಬೂಕನಕೆರೆಗೆ ಸಂಪರ್ಕ ಕಲ್ಪಿಸುವ ನಾಲ್ಕು ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ. ಬೂಕನಕೆರೆಯಿಂದ ಕೃಷ್ಣರಾಜಸಾಗರ ಜಲಾಶಯ, ಚಿನಕುರಳಿ, ಕೆ.ಆರ್‌.ನಗರ ಮತ್ತು ಕೆ.ಆರ್‌.ಪೇಟೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಯೋಜನಾ ವರದಿಯೂ ಸಿದ್ಧಗೊಂಡಿದೆ. ಕಾಮಗಾರಿಗೆ ಆದಷ್ಟು ಬೇಗ ಚಾಲನೆ ದೊರಕಿಸ ಲಾಗುವುದು ಎಂದು ಹೇಳಿದರು.

ಪ್ರಸ್ತುತ ಗ್ರಾಮದಿಂದ ಬೇರೆ ಬೇರೆ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಅದ್ವಾನಗೊಂಡಿವೆ. ಸೂಕ್ತ ಸಾರಿಗೆ ಸಂಪರ್ಕ ವ್ಯವಸ್ಥೆಯೂ ಇಲ್ಲ. ರಸ್ತೆಗಳು ಅಭಿವೃದ್ಧಿ ಗೊಂಡಲ್ಲಿ ಹೋಬಳಿ ಪ್ರದೇಶವಾದ ಬೂಕನಕೆರೆ ಜೊತೆಗೆ ಸಮೀಪದಲ್ಲಿರುವ ಕೆ.ಆರ್‌. ಪೇಟೆಯೂ ಪ್ರಗತಿಯತ್ತ ಸಾಗಲಿದೆ ಎಂದು ತಿಳಿಸಿದರು.

ತ್ವರಿತ ಕ್ರಮಕ್ಕೆ ಆದೇಶ: ಗ್ರಾಮದಲ್ಲಿ ಆಟದ ಮೈದಾನ, ಉದ್ಯಾನವನಕ್ಕೆ ಸೂಕ್ತ ಜಾಗಗಳನ್ನು ಗುರುತಿಸುವಂತೆ, ಕಸ ವಿಲೇವಾರಿ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳನ್ನು ಒದಗಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್‌ ನಿರ್ದೇಶನ ನೀಡಿದರು.

ಬೂಕನಕೆರೆ ಗ್ರಾಮದಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ. ಅಲ್ಲಿ ಐವರು ವೈದ್ಯರಿಗೆ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ವೈದ್ಯರ ಕೊರತೆ ಎದುರಾಗಿದೆ. ಆ ಕೇಂದ್ರಕ್ಕೆ ಅಗತ್ಯ ವಿರುವಷ್ಟು ವೈದ್ಯರನ್ನು ನೇಮಕ ಮಾಡುವುದು ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದ ಜನರಿಂದ ಕೇಳಿಬಂದಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ನಿವಾರಣೆಗೆ ತುರ್ತು ಕ್ರಮ ವಹಿಸಲಾಗುತ್ತಿದೆ.

ಜನರ ಅನುಕೂಲ ಕಲ್ಪಿಸಲು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನುಸ ಪೂರೈಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಜಿಲ್ಲಾಧಿಕಾರಿ ವೆಂಕಟೇಶ್‌ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next