ಆನಂದಪುರ: ಜಿಲ್ಲೆಯಲ್ಲಿ ಫುಡ್ ಪಾರ್ಕ್ ಮತ್ತು ಸ್ಪೈಸ್ ಪಾರ್ಕ್ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಸುಮಾರು 40 ಕೈಗಾರಿಕೆಗಳಿಗೆ ಯೋಜನೆಯಡಿಉದ್ಯಮ ಸ್ಥಾಪಿಸಲು ಆಹ್ವಾನಿಸಲಾಗಿದ್ದು, 22ಕೈಗಾರಿಕೆಗಳು ಒಪ್ಪಿಗೆ ಸೂಚಿಸಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಸಮೀಪದ ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಂಜಿಗಾಪುರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿಪುರಾತನ ವೀರಭದ್ರೇಶ್ವರ ದೇವಸ್ಥಾನದ ಸಾರ್ವಜನಿಕಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿಮಾತನಾಡಿದ ಅವರು, ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ಸ್ಥಾಪನೆಯಾದರೆ ನಮ್ಮ ಭಾಗದಲ್ಲಿ ಬೆಳೆಯುವಶುಂಠಿ, ಮೆಣಸಿನಕಾಳು, ಅರಿಶಿನ, ಏಲಕ್ಕಿ ಸೇರಿದಂತೆ ಮಸಾಲೆ ಪದಾರ್ಥಗಳಿಗೆ ಉತ್ತಮ ಬೆಲೆ ಬರುತ್ತದೆ.ರೈತರು ತಮ್ಮ ಪದಾರ್ಥಗಳನ್ನು ಮಾರಾಟ ಮಾಡಲು ಮಧ್ಯವರ್ತಿಗಳ ಮೊರೆ ಹೋಗುವುದು ತಪ್ಪುತ್ತದೆ ಎಂದು ಹೇಳಿದರು.
ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಗಳಾಗಿರುವ ಎಂಪಿಎಂ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆಶೀಘ್ರದಲ್ಲಿ ಎಂಪಿಎಂ ಪುನರಾರಂಭಗೊಳ್ಳಲಿದ್ದು, ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶ್ವವಿಖ್ಯಾತಜೋಗ ಜಲಪಾತದಲ್ಲಿ ಶನಿವಾರ ಮತ್ತು ಭಾನುವಾರ ಜಲಧಾರೆ ಉಕ್ಕಿ ಹರಿಯುವಂತೆ ಪ್ರವಾಸಿಗರು ಎಲ್ಲ ಸಂದರ್ಭದಲ್ಲಿ ಜೋಗ ವೀಕ್ಷಣೆಗೆ ಆಗಮಿಸುವಂತೆಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 120 ಕೋಟಿ ರೂ. ಮೀಸಲಿಡಲಾಗಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಹಿಂದೆ 2300 ಮೀಟರ್‌ಗೆ ನಿಗದಿಪಡಿಸಲಾಗಿತ್ತು. ಇದನ್ನು 3200 ಮೀಟರ್‌ಗೆ ವಿಸ್ತರಿಸಲು ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನತೆಗೆದುಕೊಳ್ಳಲಿದ್ದಾರೆ. ಇದರಿಂದ ದೊಡ್ಡ ಏರ್ ಬಸ್ ಗಳು ಲ್ಯಾಂಡ್ ಆಗಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ಎಚ್. ಹಾಲಪ್ಪ ಹರತಾಳು ಮಾತನಾಡಿ, ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಶುಕ್ರವಾರ ಒಂದೇ ದಿನ ಸುಮಾರು 15 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪಅವರು ಬಸವಣ್ಣ, ನಾರಾಯಣ ಗುರುಗಳಂತೆ ಎಲ್ಲ ವರ್ಗವನ್ನು ಸಮಾನವಾಗಿ ಪರಿಗಣಿಸುವ ವಿಶಾಲ ಮನೋಭಾವ ಹೊಂದಿದ್ದಾರೆ. ಮುಖ್ಯಮಂತ್ರಿಗಳ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಆಡಳಿತ ಎಲ್ಲರಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಆನಂದಪುರ ಹೋಬಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ 91.50 ಕೋಟಿ ರೂ. ವೆಚ್ಚದ ನೀಲನಕ್ಷೆ ಸಿದ್ಧಪಡಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಅಂಬ್ಲಿಗೊಳ ಜಲಾಶಯದಿಂದ ಈ ಭಾಗಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಇದರ ಜೊತೆಗೆ ಹೊಸನಗರತಾಲೂಕಿನ ಕಸಬಾ, ರಿಪ್ಪನಪೇಟೆ, ಸಾಗರ ತಾಲೂಕಿನ ಕಸಬಾ ಮತ್ತು ಆವಿನಹಳ್ಳಿ ಹೋಬಳಿಗೆ ಶರಾವತಿ ನದಿ ನೀರಿನಿಂದ ಸಮರ್ಪಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿದರು. ತಾಪಂ ಸದಸ್ಯೆ ಆನಂದಿ ಲಿಂಗರಾಜ್, ಹೊಸನಗರ ತಾಪಂಅಧ್ಯಕ್ಷ ವೀರೇಶ್ ಅಲವಳ್ಳಿ, ಎಪಿಎಂಸಿ ಅಧ್ಯಕ್ಷಚೇತನರಾಜ್ ಕಣ್ಣೂರು, ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಲುಸ್ವಾಮಿ ಗೌಡ, ಕಾರ್ಯದರ್ಶಿಶಾಂತರಾಜ್ ಗೌಡ, ತಹಶೀಲ್ದಾರ್ ಚಂದ್ರಶೇಖರನಾಯ್ಕ, ಕಾರ್ಯ ನಿರ್ವಾಹಣಾ ಧಿಕಾರಿ ಪುಷ್ಪಾ ಎಂ. ಕಮ್ಮಾರ್, ಅಧಿಕಾರಿಗಳಾದ ದಿನೇಶ್, ಹಾಲೇಶಪ್ಪ, ಬಲರಾಮ್, ರಾಜೇಶ್ ನಾಯಕ್, ಸಂತೋಷ್ ಡಿ. ಇನ್ನಿತರರು ಇದ್ದರು. ರಾಜು ಕೆ.ಆರ್. ಕಾರ್ಯಕ್ರಮ ನಿರ್ವಹಿಸಿದರು.