Advertisement

ಅಸಮಾನತೆ ನಿರ್ಮೂಲನೆಗೆ ಕ್ರಮ: ಜಿಲ್ಲಾಧಿಕಾರಿ

03:30 PM Jul 20, 2019 | Team Udayavani |

ಬಾಗಲಕೋಟೆ: ವಿಶೇಷ ಹಾಗೂ ಗಿರಿಜನ ಅಭಿವೃದ್ಧಿಗೆ ಮೀಸಲಿರಿಸಲಾದ ಯೋಜನೆಗಳ ಕಾರ್ಯಕ್ರಮ ಸಮರ್ಪಕ ಅನುಷ್ಠಾನಗೊಳಿಸುವ ಮೂಲಕ ಅಸಮಾನತೆ ನಿರ್ಮೂಲನೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್‌ಸಿಪಿ ಹಾಗೂ ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಹಿಂದುಳಿದ ಜನಾಂಗವನ್ನು ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರುವಂತೆ ಮಾಡಬೇಕು. ತಮಗೆ ಒದಗಿಸಿದ ಕೆಲಸವನ್ನು ಚಾಚು ತಪ್ಪದೇ ನಿರ್ವಹಿಸಬೇಕು. ಅನ್ಯಾಯ, ಅನೀತಿ, ತಾರತಮ್ಯ ಹಾಗೂ ಕಾನೂನು ಬಾಹಿರವಾಗಿ ಯಾವುದೇ ಕಾರ್ಯ ಬೇಡ. ಜಿಲ್ಲೆಯಲ್ಲಿರುವ ಪಂಚಾಯತಿವಾರು ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗದವರ ಪಟ್ಟಿ ಮಾಡಬೇಕು. ಅದರಲ್ಲಿ ವಿಕಲಚೇತನರ ಮಾಹಿತಿ ಕ್ರೋಢಿಕರಿಸಿ ಸಲ್ಲಿಸುವಂತೆ ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ಆದರೂ ಮಾಹಿತಿ ನೀಡದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಬೇಗನೇ ಮಾಹಿತಿ ನೀಡಲು ಸೂಚಿಸಿದರು.

ಮಲ ಹೊರುವ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಸೆಪ್ಟಿಕ್‌ ಟ್ಯಾಂಕ್‌ ಕ್ಲಿನ್‌ ಮಾಡಲಕ್ಕೆ ಮಶೀನ್‌ ಬಳಕೆ ಮಾಡಬೇಕು. ಸಕ್ಕಿಂಗ್‌, ಜಟ್ಟಿಂಗ್‌ ಮಶೀನ್‌ನಿಂದ ಕ್ಲಿನ್‌ ಮಾಡಲು ಅಂದಾಜು 2-3 ಸಾವಿರ ರೂ. ವರೆಗೆ ಬಾಡಿಗೆ ಪಡೆಯಲಾಗುತ್ತಿದೆ. ಅದನ್ನು ಸಾಂಕೇತಿಕವಾಗಿ ಬಾಡಿಗೆಯಲ್ಲಿ 25 ರೂ. ಕಡಿಮೆ ಮಾಡುವ ಕುರಿತು ಜಿಲ್ಲೆಯಲ್ಲಿರುವ 15 ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆಗ‌ಳಿಗೆ ಜಿಲ್ಲಾಧಿಕಾರಿಳು ಸಭೆಯಲ್ಲಿ ಅನುಮೋದಿಸಿ, ಈ ಕಾರ್ಯವನ್ನು ಲಾಭಕ್ಕಾಗಿ ಮಾಡದೇ ಸೇವೆಯ ರೂಪದಲ್ಲಿ ಮಾಡಲು ತಿಳಿಸಿದರು.

ಈ ಕುರಿತು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಬೋರ್ಡ್‌ ಗಳನ್ನು ಹಾಕಬೇಕು. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ಸ್ವಚ್ಛತೆಗೆ ಹೆಚ್ಚು ಗಮನ ಹರಿಸಲು ಸೂಚಿಸಿದ ಅವರು, ಪೌರ ಕಾರ್ಮಿಕರು ಗ್ಲೌಸ್‌ ಮತ್ತು ಗಂಬೂಟ್ಸ್‌ ಹಾಗೂ ಸ್ವಚ್ಛತಾ ಪರಿಕರಣಗಳನ್ನು ಕಡ್ಡಾಯವಾಗಿ ಒದಗಿಸಲು ಸೂಚಿಸಿದರು. ಜವಳಿ ಇಲಾಖೆಯಿಂದ ಸ್ಯಾನಿಟರಿ ನ್ಯಾಪ್‌ ಕಿನ್ಸ್‌ಗಳ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ತಾಲೂಕಿಗೆ ಒಂದರಂತೆ ಪ್ರಾರಂಭಿಸಲು ಕ್ರಮಕೈಗೊಳ್ಳಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬೀದರಿಮಠ ಅವರಿಗೆ ತಿಳಿಸಿದರು.

ಘಟಕ ಸ್ಥಾಪನೆಗೆ ಮುತೂವರ್ಜಿ ವಹಿಸಿ ಕ್ರಮಕೈಗೊಳ್ಳಲು ಸೂಚಿಸಿದರು. ಪ್ರಸಕ್ತ ಸಾಲಿನ ತ್ತೈಮಾಸಿಕ ಅವಧಿಯಲ್ಲಿ ಎಸ್‌ಸಿಪಿಯಲ್ಲಿ ಶೇ.37.69 ಪ್ರಗತಿ ಸಾಧಿಸಿದರೆ ಟಿಎಸ್‌ಪಿಯಲ್ಲಿ ಶೇ.30.93ರಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಸಭೆಗೆ ತಿಳಿಸಿದಾಗ ಗುರಿ ಸಾಧನೆಗೆ ಕಡಿಮೆಯಾಗಿದ್ದು, ಎಲ್ಲ ಇಲಾಖೆಗಳು ಮುಂದಿನ ಸಭೆಯಲ್ಲಿ ಪ್ರಗತಿ ಸಾಧಿಸಬೇಕು. ಹಿಂದಿನ ಸಭೆಯ ಅನುಪಾಲನಾ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಸಭೆಗೆ ತಿಳಿಸಿದರು.

Advertisement

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ಜಂಟಿ ನಿರ್ದೇಶಕ ರಾಜಶೇಖರ ವಿಜಾಪುರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಉಪಅರಣ್ಯ ಸಂರಕ್ಷಣಾಧಿಕಾರಿ ಬಸವರಾಜಯ್ಯ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next